ಎನ್​ಟಿಪಿಸಿಯಿಂದ ಕೋಟಿ ರೂ. ಕರ ಪಾವತಿ

ಗೊಳಸಂಗಿ: ಸಮೀಪದ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ವ್ಯಾಪ್ತಿಯ ಐದು ಪ್ರಭಾವಿತ ಗ್ರಾಮಗಳ ಪೈಕಿ ಮೂರು ಗ್ರಾಪಂಗಳಿಗೆ ಎನ್​ಟಿಪಿಸಿಯಿಂದ 98,23,054 ರೂ. ತೆರಿಗೆ ಪಾವತಿ ಮಾಡಲಾಗಿದೆ.

ಕೂಡಗಿ ಬಳಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ ಮತ್ತು ಮುತ್ತಗಿ ಗ್ರಾಮಗಳ ರೈತರಿಂದ ಒಟ್ಟು 3,351 ಎಕರೆ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಪೈಕಿ ಕೂಡಗಿ ಗ್ರಾಪಂಗೆ 58,37,088 ರೂ., ತೆಲಗಿ ಗ್ರಾಪಂಗೆ 16,67,181 ರೂ., ಗೊಳಸಂಗಿ ಗ್ರಾಪಂಗೆ 23,18,785 ರೂ. ತೆರಿಗೆ ಪಾವತಿ ಮಾಡಲಾಗಿದೆ. ಮಸೂತಿ ಮತ್ತು ಮುತ್ತಗಿ ಗ್ರಾಪಂಗಳಿಂದ ತೆರಿಗೆ ಪಾವತಿಗಾಗಿ ಯಾವುದೇ ರೀತಿಯ ಬೇಡಿಕೆ ಬಾರದೆ ಇರುವುದರಿಂದ ಆ ಎರಡು ಗ್ರಾಪಂಗಳಿಗೆ ತೆರಿಗೆ ಪಾವತಿ ಮಾಡಲಾಗಿಲ್ಲ. ಬೇಡಿಕೆ ಸಲ್ಲಿಸಿದರೆ ಆ ಗ್ರಾಪಂಗಳಿಗೂ ತೆರಿಗೆ ಪಾವತಿ ಮಾಡಲಾಗುವುದೆಂದು ಎನ್​ಟಿಪಿಸಿಯ ಉನ್ನತ ಮೂಲಗಳು ತಿಳಿಸಿವೆ.

ಎನ್​ಟಿಪಿಸಿ ಎಜಿಎಂ (ಎಚ್​ಆರ್) ಜಯನಾರಾಯಣನ್, ಜಿಪಂ ಸಿಇಒ ವಿಕಾಸ ಕಿಶೋರ ಸುರಳಕರ, ಡೆಪ್ಯುಟಿ ಸಿಇಒ ಅಂಬರೀಷ್ ನಾಯಕ, ತಾಪಂ ಇಒ ಸಿ.ಬಿ. ಮ್ಯಾಗೇರಿ, ಮೂರು ಗ್ರಾಪಂ ಪಿಡಿಒಗಳಾದ ಎಸ್.ಜೆ. ಉದಯಕುಮಾರ, ಆನಂದ ಕೋಟ್ಯಾಳ, ಎಸ್.ಸಿ. ಗದಗ ಮತ್ತಿತರರು ಇದ್ದರು.