ಗ್ರಾಮೀಣ ಕ್ರೀಡೆ ಪ್ರೋತ್ಸಾಹಿಸಿ

ಗೊಳಸಂಗಿ: ಆಧುನಿಕತೆಯ ಆಟೋಟಕ್ಕೆ ಮನಸೋತು ಯುವ ಜನಾಂಗ ಗ್ರಾಮೀಣ ಕ್ರೀಡೆಯಿಂದ ದೂರವಾಗದೆ ಉಳಿಸಿ ಬೆಳೆಸಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಬಂದೇನವಾಜ್ ಬಿಜಾಪುರ ಹೇಳಿದರು.
ಸ್ಥಳೀಯ ಗ್ರಾಮದೇವತೆ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ಆಯೋಜಿಸಿದ್ದ ಪುಟ್ಟಿಗಾಡಿ ಓಟದ ಸ್ಪರ್ಧೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಬಡ್ಡಿ, ಖೋಖೋ, ರಿಲೇ ಓಟ, ಜಿಗಿತ, ನೀರೋಕಳಿ, ಹಾಲೋಕಳಿ ಮತ್ತಿತರ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹಿಸುವುದು ಅಗತ್ಯ ಎಂದರು.
ಗ್ರಾಪಂ ಸದಸ್ಯ ಬಂದೇನವಾಜ್ ಬಿಜಾಪುರ ಅನ್ನದಾನ ಏರ್ಪಡಿಸಿದ್ದರು. ಗ್ರಾಪಂ ಮಾಜಿ ಉಪಾಧ್ಯಕ್ಷ ಸಂಗಪ್ಪ ಕೋಲಾರ, ನೆಹರು ಯುವಕ ಸಂಘದ ಅಧ್ಯಕ್ಷ ಅಮರೇಶಗೌಡ ಪಾಟೀಲ ಮಾತನಾಡಿದರು. ಮುಖಂಡ ಮಲ್ಲಪ್ಪ ಹುಡೇದಗಡ್ಡಿ ಪುಟ್ಟಿಗಾಡಿ ಓಟದ ಸ್ಪರ್ಧೆಗೆ ಚಾಲನೆ ನೀಡಿದರು. ಗ್ರಾಪಂ ಸದಸ್ಯ ಗೋಪಾಲ ದಳವಾಯಿ, ಮುಖಂಡರಾದ ಕಾಳಪ್ಪ ಮಸಬಿನಾಳ, ಬಸಪ್ಪ ಭುಜಂಗೋಳ, ಈರಪ್ಪ ಮಲಗೊಂಡ, ಗ್ಯಾನುಬಾ ಖರಾಡೆ, ಈರಣ್ಣ ಸುರಪುರ, ಹಜರೇಸಾಬ ನಾಗರಾಳ, ಡಾ. ಎಂ.ಎಸ್. ಮೇಟಿ ಮತ್ತಿತರರು ಇದ್ದರು.
ವಿಜೇತರಿಗೆ ಬಹುಮಾನ ವಿತರಣೆ: ಪುಟ್ಟಿಗಾಡಿ ಓಟದ ಸ್ಪರ್ಧೆ ವಿಜೇತ ಹಿರೇಆಸಂಗಿಯ ಪಾಂಡು ಮಲ್ಲಪ್ಪ ಕುಂಬಾರ (ಪ್ರಥಮ), ಮುತ್ತಗಿಯ ರಾಮಣ್ಣ ಕಂಬಳಿ (ದ್ವಿತೀಯ) ಬಳ್ಳಾವರದ ಸಿದ್ದುಬಾ ಶಿವಾಜಿ ಜಾಧವ (ತೃತೀಯ) ಅವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಉಡಿ ತುಂಬುವ ಕಾರ್ಯಕ್ರಮ: ಜಾತ್ರಾ ಮಹೋತ್ಸವ ನಿಮಿತ್ತ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಗಾಣಿಗ ಸಮಾಜದ ನೇತೃತ್ವದಲ್ಲಿ ಗ್ರಾಮಸ್ಥರು ಗ್ರಾಮದೇವತೆಗೆ ಉಡಿ ತುಂಬುವ ಕಾರ್ಯ ನೆರವೇರಿಸಿದರು. ಮಧ್ಯಾಹ್ನ ಕೌಲಗಿಯ ಈರಗಾರ ಮುತ್ಯಾ ಹೇಳಿಕೆ ನುಡಿದರು.