ಹಾಡುಹಗಲೇ ನಂದಿ ಪುತ್ಥಳಿಗೆ ಚಪ್ಪಲಿ ಹಾರ !

ಗೊಳಸಂಗಿ: ಸ್ಥಳೀಯ ಗ್ರಾಪಂ ಬಳಿಯ ಬಸವೇಶ್ವರ ದೇವಸ್ಥಾನದ ನಂದಿ ವಿಗ್ರಹಕ್ಕೆ ಶನಿವಾರ ಹಾಡುಹಗಲೇ ದುಷ್ಕರ್ಮಿಯೊಬ್ಬ ಚಪ್ಪಲಿ ಹಾರ ಹಾಕಿದ ಘಟನೆಯಿಂದಾಗಿ ಬಸವನಾಡಿನ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ದೇವಸ್ಥಾನದ ನಂದಿ ವಿಗ್ರಹಕ್ಕೆ ಅರ್ಚಕ ಶರಣಯ್ಯಸ್ವಾಮಿ ಬೀಳಗಿ ಶನಿವಾರ ಬೆಳಗ್ಗೆ 7ಕ್ಕೆ ಪೂಜೆ ಸಲ್ಲಿಸಿ ಹೋದ ಬಳಿಕ ಯಾರೂ ಇಲ್ಲದ ಸಮಯದಲ್ಲಿ ದುಷ್ಕರ್ಮಿಯೊಬ್ಬ ದೇವಸ್ಥಾನಕ್ಕೆ ತೆರಳಿ ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿ ಪರಾರಿಯಾಗಿದ್ದಾನೆ. ಬೆಳಗ್ಗೆ 8.45ರ ವೇಳೆಗೆ ಭಕ್ತರೊಬ್ಬರ ಮೂಲಕ ಸುದ್ದಿ ತಿಳಿಯುತ್ತಿದ್ದಂತೆಯೇ ದೇವಸ್ಥಾನ ಆವರಣಕ್ಕೆ ಜನಸಾಗರವೇ ಹರಿದು ಬಂದಿತು. ಅಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿತು.

ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ವಿಜಯಪುರದಿಂದ ಆಗಮಿಸಿದ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ಬಳಗ ದೇವಸ್ಥಾನದ ಸುತ್ತಮುತ್ತ ಪರಿಶೀಲನೆ ನಡೆಸಿತು. ಬಳಿಕ ಗ್ರಾಪಂ ಆವರಣದಲ್ಲಿ ಜಮಾಯಿಸಿದ ಬಸವ ಭಕ್ತರ ಬಳಗ ನಂದಿ ವಿಗ್ರಹಕ್ಕೆ ಅವಮಾನಿಸಿದ ದುಷ್ಕರ್ಮಿ ಯಾರೇ ಆಗಿದ್ದರೂ ಕೂಡಲೇ ಪತ್ತೆ ಹಚ್ಚಿ ಉಗ್ರ ಶಿಕ್ಷೆಗೆ ಗುರಿ ಮಾಡಬೇಕೆಂದು ಗ್ರಾಮದ ಮುಖಂಡರಾದ ಶೇಖರ ದಳವಾಯಿ, ಮುರುಗೇಶ ಹೆಬ್ಬಾಳ, ತಾಪಂ ಸದಸ್ಯ ಅಮೃತ ಯಾದವ, ತಜಮುಲಖಾದ್ರಿಸಾಹೇಬ ಜಾಗೀರದಾರ, ದೇವೇಂದ್ರ ಬಳಮಕರ, ಅಮರೇಶಗೌಡ ಪಾಟೀಲ ಮತ್ತಿತರರು ಆಗ್ರಹಿಸಿ ನಿಡಗುಂದಿ ಉಪತಹಸೀಲ್ದಾರ್, ಬಸವನ ಬಾಗೇವಾಡಿ ಸಿಪಿಐ ಎಂ.ಎನ್. ಶಿರಹಟ್ಟಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.

ಪ್ರಮುಖರಾದ ಬಸಯ್ಯಸ್ವಾಮಿ ಪಾರ್ವತಿಮಠ, ಶಿವಯ್ಯಸ್ವಾಮಿ ಹಿರೇಮಠ, ಗಂಗಾರಾಮ ಪವಾರ, ಅಶೋಕ ಪರಮಗೊಂಡ, ವಿರುಪಾಕ್ಷಿ ಕಿಣಗಿ, ಚನ್ನಮಲ್ಲ ಉಳ್ಳಿ, ಅಯ್ಯಪ್ಪಗೌಡ ಪರಮಗೊಂಡ, ಆನಂದ ಹಡಗಲಿ, ಗೂಡುಸಾಬ ಹತ್ತರಕಿಹಾಳ ಮತ್ತಿತರರಿದ್ದರು.

ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಸಂಘಟನೆ ನೇತೃತ್ವದಲ್ಲಿ ದುಷ್ಕರ್ಮಿಯ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಗ್ರಾಪಂ ಆವರಣದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಾಯಿತು.

ಬಸವೇಶ್ವರ ನಂದಿ ಪುತ್ಥಳಿಗೆ ಆಗಿರುವ ಅಪಮಾನ ಇಡೀ ಬಸವ ನಾಡಿನ ಭಕ್ತರು ತಲೆ ತಗ್ಗಿಸುವಂಥದ್ದಾಗಿದೆ. ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಉಗ್ರ ಶಿಕ್ಷೆ ವಿಧಿಸಬೇಕು. ಸೂಕ್ತ ತನಿಖಾ ವರದಿ ಬರುವವರೆಗೂ ಬಸವ ಭಕ್ತರಿಂದ ಗ್ರಾಮದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು.
– ಮುರಗೇಶ ಹೆಬ್ಬಾಳ ಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಗೊಳಸಂಗಿ

ಗೊಳಸಂಗಿಯಲ್ಲಿ ಬಸವೇಶ್ವರ ನಂದಿ ವಿಗ್ರಹಕ್ಕೆ ಆಗಿರುವ ಅಪಮಾನ ಸಹಿಸಲಸಾಧ್ಯ. ದುಷ್ಕರ್ಮಿಗಳ ಕುರಿತು ಸಾರ್ವಜನಿಕರಲ್ಲಿ ಯಾರಿಗಾದರೂ ಮಾಹಿತಿ ಗೊತ್ತಿದ್ದರೆ ನಮ್ಮ ಗಮನಕ್ಕೆ ತನ್ನಿ. ಮಾಹಿತಿ ಕೊಟ್ಟವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ನಿಮ್ಮಿಂದ ಯಾವುದೇ ಮಾಹಿತಿ ಸಿಗದಿದ್ದರೂ ನಮ್ಮ ಕಾರ್ಯಾಚರಣೆ ಮುಂದುವರಿಸಿ, ಶೀಘ್ರ ತಪ್ಪಿತಸ್ಥರನ್ನು ಬಯಲಿಗೆಳೆದು ಉಗ್ರ ಶಿಕ್ಷೆ ನೀಡಲಾಗುವುದು.
– ಎಂ.ಎನ್.ಶಿರಹಟ್ಟಿ ಸಿಪಿಐ ಬಸವನ ಬಾಗೇವಾಡಿ


ಗೊಳಸಂಗಿ, ಬಸವೇಶ್ವರ ದೇವಸ್ಥಾನ, ನಂದಿ ವಿಗ್ರಹ, ಚಪ್ಪಲಿ ಹಾರ, ಭಕ್ತರು, ಆಕ್ರೋಶ, ಪೂಜೆ,
Golasangi, Basaveshwara Temple, Nandi Idol, Slippers necklace, Devotees, Outrage, Worship, vijayapura,

Leave a Reply

Your email address will not be published. Required fields are marked *