More

    ಇಂದಿರಾ ಕ್ಯಾಂಟೀನ್ ಗೋಲ್ಮಾಲ್ ವಿರುದ್ಧ ಕೇಸ್; ಪಾಲಿಕೆ ಜಂಟಿ ಆಯುಕ್ತರಿಂದ ದೂರು, ಸಬ್ಸಿಡಿ ವಂಚನೆ ಕುರಿತು ತನಿಖೆಗೆ ಮನವಿ

    ಬೆಂಗಳೂರು:  ರಾಜಕೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಇಂದಿರಾ ಕ್ಯಾಂಟೀನ್​ಗೆ ಆಹಾರ ಪೂರೈಕೆಯಲ್ಲಿ ಗೋಲ್‍ಮಾಲ್ ಆರೋಪ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

    ಇಂದಿರಾ ಕ್ಯಾಂಟೀನ್​ಗೆ ಆಹಾರ ಪೂರೈಕೆ ಮಾಡುತ್ತಿರುವ ಚೆಫ್​ಟಾಕ್ ಮತ್ತು ರಿವಾರ್ಡ್ ಸಂಸ್ಥೆಗಳ ವಿರುದ್ಧ ಬಿಬಿಎಂಪಿ ಜಂಟಿ ಆಯುಕ್ತ (ಹಣಕಾಸು) ಎಸ್. ವೆಂಕಟೇಶ್ ದೂರು ನೀಡಿದ್ದಾರೆ. ಹಲಸೂರು ಗೇಟ್ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

    ಬಿಬಿಎಂಪಿ 198 ವಾರ್ಡ್​ಗಳಲ್ಲಿ ತಲಾ 1 ಇಂದಿರಾ ಕ್ಯಾಂಟೀನ್ ತೆರೆಯಲು 2017ರಲ್ಲಿ ಸರ್ಕಾರ ಉದ್ದೇಶಿಸಿತ್ತು. ಅದರಂತೆ 173 ಸ್ಥಿರ ಮತ್ತು 18 ಸಂಚಾರಿ ಸೇರಿ 198 ಕ್ಯಾಂಟೀನ್​ಗಳನ್ನು ತೆರೆಯ ಲಾಗಿದೆ. ಇವುಗಳಿಗೆ ಆಹಾರ ಪೂರೈಕೆ ಮಾಡಲು ಚೆಫ್​ಟಾಕ್ ಮತ್ತು ರಿವಾರ್ಡ್ ಸಂಸ್ಥೆಗಳು ಗುತ್ತಿಗೆ ಪಡೆದಿವೆ. ಆದರೆ ಈ ಸಂಸ್ಥೆಗಳು ಸರ್ಕಾರದಿಂದ ಭಾರಿ ಮೊತ್ತದ ಸಬ್ಸಿಡಿ ಪಡೆದು ವಂಚಿಸಿವೆ ಎನ್ನಲಾಗುತ್ತಿದೆ.ಮಾದ್ಯಮಗಳಲ್ಲೂ ಈ ಬಗ್ಗೆ ವರದಿಗಳು ಪ್ರಕಟವಾಗಿವೆ. ಈ ಬಗ್ಗೆ ಸರ್ಕಾರಕ್ಕೆ ಸಮಗ್ರ ಮಾಹಿತಿ ನೀಡಬೇಕಾಗಿದ್ದು, ತನಿಖೆ ನಡೆಸಿ ವರದಿ ನೀಡುವಂತೆ ವೆಂಕಟೇಶ್ ದೂರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಮಾಸಿಕ 6.82 ಕೋಟಿ ರೂ. ಸಬ್ಸಿಡಿ: ಪಾಲಿಕೆ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್​ಗಳ ನಿರ್ವಹಣೆಯ ಗುತ್ತಿಗೆ ಪಡೆದಿರುವ ಚೆಫ್​ಟಾಕ್ ಮತ್ತು ರಿವಾರ್ಡ್ಸ್ ಸಂಸ್ಥೆಗಳು 174 ಇಂದಿರಾ ಕ್ಯಾಂಟೀನ್​ಗಳು ಮತ್ತು 15 ಮೊಬೈಲ್ ಕ್ಯಾಂಟೀನ್​ಗಳಲ್ಲಿ ಪ್ರತಿ ತಿಂಗಳು 62.70 ಲಕ್ಷ ಜನರಿಗೆ 3 ಹೊತ್ತು ಊಟ, ಉಪಹಾರ ನೀಡಿರುವ ಲೆಕ್ಕ ಕೊಟ್ಟಿವೆ. ಅದರನ್ವಯ ಪ್ರತಿ ತಿಂಗಳು -ಠಿ;6.82 ಕೋಟಿ ಸಬ್ಸಿಡಿ ಪಡೆಯುತ್ತಿವೆ.

    ಮೇಲ್ವಿಚಾರಣೆಗೆ ಸೂಚನೆ: ಇಂದಿರಾ ಕ್ಯಾಂಟೀನ್​ನಲ್ಲಿ ಕಳಪೆ ಆಹಾರ, ಸುಳ್ಳು ಲೆಕ್ಕ ಕೊಟ್ಟು ಸಬ್ಸಿಡಿ ಪಡೆಯಲಾಗುತ್ತಿದೆ. ಆಹಾರ ತಯಾರಿಕೆ, ಜನರ ಆಹಾರಸೇವಿಸಿದ ಬಗ್ಗೆ ಕ್ಯಾಂಟೀನ್​ಗೆ ಹೋಗಿ ಮೇಲ್ವಿಚಾರಣೆ ಮಾಡಲು ಅಧಿಕಾರಿಗಳಿಗೆ ಮೇಯರ್ ಸೂಚನೆ ನೀಡಿದ್ದಾರೆ.

    ತನಿಖೆಗೆ ಮುಖ್ಯಮಂತ್ರಿ ಆದೇಶ

    ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ 2017-18ರಲ್ಲಿ 100 ಕೋಟಿ ರೂ. ಮೀಸಲಿಡಲಾಗಿತ್ತು. 124 ಕೋಟಿ ರೂ. ನಿರ್ವಹಣಾ ವೆಚ್ಚವಾಗಿತ್ತು. 2018-19ರಲ್ಲಿ 115 ಕೋಟಿ ರೂ. ಮೀಸಲಿಟ್ಟರೂ ಪುನಃ 24 ಕೋಟಿ ರೂ. ಹೆಚ್ಚುವರಿ ನಿರ್ವಹಣಾ ವೆಚ್ಚ ತೋರಿಸಲಾಗಿತ್ತು. 2019-20ನೇ ಸಾಲಿಗೆ 152 ಕೋಟಿ ರೂ. ಅಂದಾಜಿಸಲಾಗಿತ್ತು. ಈ ವರ್ಷ ಅನುದಾನವನ್ನೇ ನೀಡದೆ, ನಿರ್ವಹಣೆಯ ಹೊಣೆಯನ್ನು ಪಾಲಿಕೆಗೆ ವಹಿಸಲಾಗಿದೆ. ಆದರೆ, ಹಿಂದಿನ ಎರಡು ಸಾಲಿನ ಹೆಚ್ಚುವರಿ ನಿರ್ವಹಣಾ ವೆಚ್ಚಕ್ಕೆ ಅನುಮೋದನೆ ಕೊಟ್ಟಿರುವ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗಸ್ಟ್​ನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts