ಗೋಳಗುಮ್ಮಟ ಆವರಣದಲ್ಲಿ ಪ್ರತಿಭಟನೆ

ವಿಜಯಪುರ : ಗೋಳಗುಮ್ಮಟದ ಆವರಣದಲ್ಲಿ ವಾಯು ವಿಹಾರ ಮಾಸಿಕ ಪ್ರವೇಶ ಶುಲ್ಕ ಏರಿಕೆ ಖಂಡಿಸಿ ಜಿಲ್ಲಾ ಯುವ ಪರಿಷತ್ ಹಾಗೂ ವಾಯು ವಿಹಾರಿಗಳ ಸಂಘದ ಪದಾಕಾರಿಗಳು ಭಾನುವಾರ ಗೋಳಗುಮ್ಮಟ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ ಮಾತನಾಡಿ, ಗೋಳಗುಮ್ಮಟದಲ್ಲಿ ನಿತ್ಯ ನೂರಾರು ಜನರು ವಾಯು ವಿಹಾರ ಮಾಡುತ್ತಾರೆ. ಪ್ರಶಾಂತವಾದ ವಾತಾವರಣದಲ್ಲಿ ಶುದ್ಧ ಗಾಳಿ ಪಡೆಯಲು ಅನೇಕ ಹಿರಿಯರು ಗೋಳಗುಮ್ಮಟಕ್ಕೆ ಬರುತ್ತಾರೆ. ಈ ಹಿಂದೆ ವಾರ್ಷಿಕ 35 ರೂ.ಗೆ ಪಾಸ್ ನೀಡಲಾಗುತ್ತಿತ್ತು. ಕಡಿಮೆ ಶುಲ್ಕದಿಂದಾಗಿ ಯಾರಿಗೂ ಹೊರೆಯಾಗಿರಲಿಲ್ಲ. ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ವಾಯುವಿಹಾರ ಮಾಡುತ್ತಿದ್ದರು. ಆದರೆ ಈಗ ಏಕಾಏಕಿಯಾಗಿ ಪ್ರವೇಶ ಶುಲ್ಕ ಏರಿಕೆ ಮಾಡಲಾಗಿದೆ. ವಾರ್ಷಿಕ 35 ರೂ. ಇದ್ದ ದರವನ್ನು 350 ರೂ.ಗೆ ಏರಿಕೆ ಮಾಡಲಾಗಿದೆ. ಇದರಿಂದ ವಾಯು ವಿಹಾರಿಗಳಿಗೆ ಆರ್ಥಿಕ ಹೊರೆಯಾಗಿದೆ ಎಂದು ದೂರಿದರು.
ಶುಲ್ಕ ಏರಿಕೆ, ನವೀಕರಣ ಒಂದೆಡೆಯಾದರೆ ಪ್ರತಿ ಮೂರು ತಿಂಗಳಿಗೊಮ್ಮೆ ಪೊಲೀಸ್ ಇಲಾಖೆಯಿಂದ ಕ್ರಿಮಿನಲ್ ಪ್ರಕರಣ ಇಲ್ಲದಿರುವ ದೃಢೀಕೃತ ಪತ್ರ ಸಲ್ಲಿಕೆ ಮಾಡಬೇಕಾದ ನಿಬಂಧನೆ ವಿಸಲಾಗಿದೆ. ಈ ಎಲ್ಲ ಪತ್ರಗಳನ್ನು ಪಡೆದುಕೊಳ್ಳಲು ಸಾರ್ವಜನಿಕರು ಇಲಾಖೆಯಿಂದ ಇಲಾಖೆಗೆ ಅಲೆದಾಡುವಂತಾಗಿದೆ. ಈ ಕಾರಣದಿಂದಾಗಿ ಅನೇಕರು ವಾಯು ವಿಹಾರವನ್ನೇ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪುರಾತತ್ವ ಇಲಾಖೆ ಕೂಡಲೇ ಪ್ರವೇಶ ಶುಲ್ಕ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡ ಶಿವಾನಂದ ಭುಯ್ಯರ ಮಾತನಾಡಿ, ಗೋಳಗುಮ್ಮಟಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಮೂಲ ಸೌಕರ್ಯವಿಲ್ಲ. ಕೂಡಲೇ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಹಿರಿಯ ನ್ಯಾಯವಾದಿ ಕೆ.ಎಫ್. ಅಂಕಲಗಿ, ಶೀತಲಕುಮಾರ ಓಗಿ, ಪ್ರಕಾಶ ನಾಯ್ಕೋಡಿ, ಆರ್.ಆರ್. ಕೊಂಡಗೂಳಿ, ನಿವೃತ್ತ ಡಿವೈಎಸ್‌ಪಿ ಚೌಧರಿ, ಬಿಂಜಲಭಾವಿ, ಪ್ರವೀಣ ಸೊಲ್ಲಾಪೂರ, ಬಾಪುಗೌಡ ಪಾಟೀಲ, ಬಾಬು ಸಿಂದಗೇರಿ, ಗುರು ಕವಲಗಿ, ಮಲ್ಲಿಕಾರ್ಜುನ ಕೂಡಗಿ, ಸಾಯಿ ಕೊಣ್ಣೂರಕರ, ಮಲ್ಲು ಆಲಗೂರ, ಈರಪ್ಪ ಜಕ್ಕಣ್ಣವರ, ಮಹಾಂತೇಶ ಪಟ್ಟಣಶೆಟ್ಟಿ ಇತರರು ಪಾಲ್ಗೊಂಡಿದ್ದರು.

ಸ್ಥಳಕ್ಕೆ ನಗರ ಶಾಸಕ ಭೇಟಿ: ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ವಾಯು ವಿಹಾರಿಗಳು ಭಯಪಡಬೇಕಾದ ಅಗತ್ಯವಿಲ್ಲ. ಪ್ರವೇಶ ಶುಲ್ಕ ಹೆಚ್ಚಿಸಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಅಕಾರಿಗಳೊಂದಿಗೆ ಚರ್ಚೆ ಮಾಡುವೆ. ಪ್ರತಿಯೊಂದು ಬಡಾವಣೆಯ ಉದ್ಯಾನವನದಲ್ಲಿ ಓಪನ್ ಜಿಮ್ ಹಾಗೂ ವಾಕಿಂಗ್ ಟ್ರ್ಯಾಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *