ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಏಷ್ಯಾದಲ್ಲಿಯೇ ಮೊದಲ ಜಲವಿದ್ಯುತ್ ಉತ್ಪಾದನೆ ಆರಂಭವಾಗಿರುವ ಗೋಕಾಕ ಫಾಲ್ಸ್ ಅನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿಸುವ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ 50 ಕೋಟಿ ರೂ. ವೆಚ್ಚದಲ್ಲಿ ಕೇಬಲ್ ಕಾರ್ ಯೋಜನೆ ಅನುಷ್ಠಾನಗೊಳಿಸಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ. ಅಲ್ಲದೇ, ಫಾಲ್ಸ್ ಸುತ್ತಮುತ್ತಲಿರುವ ಗೊಡಚಿಮಲ್ಕಿ ಫಾಲ್ಸ್ ಸೇರಿ ವಿವಿಧ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ದಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿದೆ. ವರ್ಷದ ಅಂತ್ಯದಲ್ಲಿಯೇ ಯೋಜನೆ ಆರಂಭವಾಗುವ ಸಾಧ್ಯತೆಯಿದೆ.
ಈಗಾಗಲೇ ಗೋಕಾಕ್ ಫಾಲ್ಸ್‌ನಲ್ಲಿ ಕೇಬಲ್ ಕಾರ್ ಸ್ಥಾಪಿಸುವ ಕುರಿತು ಪ್ರವಾಸೋದ್ಯಮ ತಾಂತ್ರಿಕ ಅಧಿಕಾರಿಗಳ ತಂಡ ಎರಡು ಸಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿವೆ. ಜತೆಗೆ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಎರಡು ಬಾರಿ ಅಧಿಕಾರಿಗಳ ಸಭೆ ನಡೆದಿದೆ. ಪ್ರವಾಸೋದ್ಯಮ ಇಲಾಖೆಯಿಂದ ಯೋಜನೆ ಅನುಷ್ಠಾನಗೊಳಿಸಬೇಕು ಅಥವಾ ಸಾರ್ವಜನಿಕ ಸಹಭಾಗಿತ್ವದಲ್ಲಿಯೇ ಯೋಜನೆ ಅನುಷ್ಠಾನಗೊಳಿಸಬೇಕು ಎಂಬುವುದರ ಕುರಿತು ಚರ್ಚೆ ನಡೆಯುತ್ತಿದೆ.
ಪ್ರವಾಸೋದ್ಯಮ ಉತ್ತೇಜನಕ್ಕೆ ಕ್ರಮ: ಹಿಂದಿನ ಬಿಜೆಪಿ ಸರ್ಕಾರವು ಗೋಕಾಕ ಫಾಲ್ಸ್‌ನಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ಗ್ಲಾಸ್‌ಹೌಸ್, ಕೇಬಲ್ ಸೇತುವೆ ಸೇರಿ ವಿವಿಧ ಹೈಟೆಕ್ ಸೌಲಭ್ಯಗಳ ಕಲ್ಪಿಸುವ ಕುರಿತು ಯೋಜನೆ ರೂಪಿಸಿತು. ಅಲ್ಲದೇ, ಎರಡು ಭಾರಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿತ್ತು. ಆದರೆ, ಆರ್ಥಿಕ ಇಲಾಖೆಯು ದೊಡ್ಡ ಪ್ರಮಾಣದಲ್ಲಿ ಅನುದಾನ ನೀಡಲು ನಿರಾಕರಿಸಿತು. ಅಲ್ಲದೇ, ಖಾಸಗಿ ಕಂಪನಿಗಳು ಹೂಡಿಕೆ ಮಾಡಲು ಆಸಕ್ತಿ ತೋರಿಸದಿರುವ ಹಿನ್ನೆಲೆ ಯೋಜನೆ ಆರಂಭದಲ್ಲಿಯೇ ಕೈಬಿಡಲಾಗಿತ್ತು. ಇದೀಗ ಸರ್ಕಾರವು ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಲು, ಉದ್ಯೋಗ ಸೃಷ್ಟಿಸಲು ಗೋಕಾಕ ಫಾಲ್ಸ್‌ನಲ್ಲಿ ಕೇಬಲ್ ಕಾರ್ ಯೋಜನೆ ಅನುಷ್ಠಾನಕ್ಕೆ ಸಮ್ಮತಿಸಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಡೆ ಮೇಲೆ ನಿಂತು ವೀಕ್ಷಣೆ: ಗೋಕಾಕ ಫಾಲ್ಸ್ ಸುತ್ತಮುತ್ತ ಐತಿಹಾಸಿಕ ಹಿನ್ನೆಲೆಯುಳ್ಳ ಭೌಗೋಳಿಕ ಪ್ರದೇಶ, ಕಲ್ಲುಬಂಡೆಗಳಿವೆ. 170 ಅಡಿ ಎತ್ತರದಿಂದ ಬೀಲುವ ಜಲಪಾತದ ಸೊಬಗು ಕಣ್ತುಂಬಿಕೊಳ್ಳಲು ಹಾಗೂ ನೀರು ಧುಮ್ಮಿಕ್ಕುವ ಸ್ಥಳದವರೆಗೂ ತೆರಳುತ್ತಾರೆ. ಮಹಾಲಿಂಗೇಶ್ವರ ದೇವಸ್ಥಾನದ ಭಾಗದಿಂದ ಸಾರ್ವಜನಿಕರು ಘಟಪ್ರಭಾ ನದಿಗೆ ಇಳಿದು ಕಲ್ಲುಬಂಡೆಗಳ ಮೇಲೆ ನಿಂತು ಜಲಪಾತದ ಸೌಂದರ್ಯ ವೀಕ್ಷಿಸಲು ಅವಕಾಶವಿದೆ. ಇವು ಅತ್ಯಂತ ಅಪಾಯಕಾರಿ ಸ್ಥಳವಾಗಿದ್ದು, ಬಂಡೆಗಲ್ಲುಗಳ ಮೇಲೆ ಇಳಿಯಲು ಹೋಗಿ ಪ್ರಾಣಕ್ಕೆ ಸಂಚಕಾರ ತಂದುಕೊಂಡ ಘಟನೆಗಳು ನಡೆಯುತ್ತಿವೆ. ಬ್ರಿಟಿಷರ ಕಾಲದ ತೂಗುಸೇತುವೆ ನಿರ್ವಹಣೆ ಇಲ್ಲದೆ ಹಾಳಾಗಿದ್ದು, ಬಳಕೆಗೆ ಅಪಾಯಕಾರಿದ್ದರಿಂದ ಜನರು ಬಳಕೆ ಮಾಡುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
-
ಗೋಕಾಕ ಫಾಲ್ಸ್‌ಗೆ ಭೇಟಿ ನೀಡಿದ ಪ್ರವಾಸಿಗರ ಅಂದಾಜು ವಿವರ
ವರ್ಷ ಪ್ರವಾಸಿಗರು (ಲಕ್ಷ)
2021 1.56
2022 1.50
2023 1.80
2024 2.10
2025 35,250 (ಮೇ)ಗೋಕಾಕ ಫಾಲ್ಸ್ ಮೂಲಭೂತ ಸೌಕರ್ಯ ಕಲ್ಪಿಸಲು ಮಾದರಿ ಪ್ರವಾಸಿ ತಾಣವನ್ನಾಗಿ ಮಾಡಲು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರೊಂದಿಗೆ ಸಭೆ ನಡೆಸಿದ್ದೇವೆ. 50 ಕೋಟಿ ರೂ. ವೆಚ್ಚದಲ್ಲಿ ಕೇಬಲ್ ಕಾರ್ ಯೋಜನೆ ರೂಪಿಸಲಾಗಿದೆ. ತಾಂತ್ರಿಕ ತಂಡ ಭೇಟಿ ನೀಡಿ ಹೋಗಿದ್ದಾರೆ. ಶೀಘ್ರ ಯೋಜನೆ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುತ್ತಿದೆ.
ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ
ಗೋಕಾಕ್ ಫಾಲ್ಸ್‌ದಲ್ಲಿ ಕೇಬಲ್ ಕಾರ್ ಯೋಜನೆಗೆ 35 ಕೋಟಿ ರೂ. ನೀಡಲು ಸರ್ಕಾರವು ಸಮ್ಮತಿಸಿದೆ. ಆದರೆ, ಯೋಜನಾ ವೆಚ್ಚ 50 ಕೋಟಿ ರೂ. ದಾಟುತ್ತಿರುವ ಹಿನ್ನೆಲೆ ಸಾರ್ವಜನಿಕ ಸಹಭಾಗಿತ್ವದಲ್ಲಿ ಯೋಜನ ಅನುಷ್ಠಾನ ಕುರಿತು ಚರ್ಚಿಸಲಾಗುತ್ತಿದೆ. ಇದಕ್ಕಾಗಿ ಅಧಿಕಾರಿಯೊಬ್ಬರನ್ನು ನಿಯೋಜನೆ ಮಾಡಿದ್ದು, ಖರ್ಚು ವೆಚ್ಚದ ವರದಿ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತಿದೆ.ಕೆ.ವಿ. ರಾಜೇಂದ್ರ, ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ