ನೀರಿನಲ್ಲಿ ಮುಳುಗಿ ಇಂಜಿನಿಯರ್ ಸಾವು  • ವಿಜಯವಾಣಿ ಸುದ್ದಿಜಾಲ ಸೋಮವಾರಪೇಟೆ
    ಸಮೀಪದ ಮಲ್ಲಳ್ಳಿ ಜಲಪಾತದಲ್ಲಿ ಅಪಾಯದಲ್ಲಿ ಸಿಲುಕಿದ್ದ ಸ್ನೇಹಿತರನ್ನು ರಕ್ಷಿಸಲು ಮುಂದಾದ ಪ್ರವಾಸಿ ಇಂಜಿನಿಯರ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
    ಬೆಂಗಳೂರಿನ ಅಕ್ಸೆಂಚರ್ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ, ಮೂಲತಃ ಮೈಸೂರಿನವರಾದ ಸ್ಕಂದ (25)ಮೃತಪಟ್ಟವರು. ಸ್ಕಂದ ಅವರು 11 ಜನ ಸೇಹಿತರ ಜತೆ ಭಾನುವಾರ ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ಬಂದಿದ್ದರು. ಬೆಳಗ್ಗೆ 11ಗಂಟೆಯ ಸಮಯದಲ್ಲಿ ಜಲಪಾತದ ತಳಭಾಗದಲ್ಲಿರುವ ಮರಣ ಬಾವಿ ಎಂದೇ ಕರೆಸಿಕೊಂಡಿರುವ ಹೊಂಡದ ಸಮೀಪ ತೆರಳಿದ್ದಾರೆ. ಈ ಸಂದರ್ಭ ಬಿಹಾರ ಮೂಲದ ಬೆಂಗಳೂರಿನಲ್ಲಿ ನೌಕರಿಯಲ್ಲಿರುವ ಶರ್ಮಾಬಿಹಾರ್, ನಿಲೇಶ್ ಮತ್ತು ಅಂಕಿತ್ ಚೌಧರಿ ಎಚ್ಚರಿಕೆಯ ಫಲಕವನ್ನು ಗಮನಿಸದೆ ಹೊಂಡ ದಲ್ಲಿ ಸ್ನಾನಕ್ಕೆ ಇಳಿದು ಮುಳುಗಿದ್ದು, ಸಹಾಯಕ್ಕಾಗಿ ಕಿರುಚುಕೊಂಡಿದ್ದಾರೆ. ಅಲ್ಲಿಯೇ ಇದ್ದ ಸ್ಕಂದ ಮುಳುಗುತ್ತಿದ್ದವರನ್ನು ರಕ್ಷಿಸಲು ನೀರಿಗೆ ಇಳಿದಿದ್ದು ಮೂವರನ್ನು ದಡ ಸೇರಿಸಿದ್ದಾರೆ . ಆ ನಂತರ ಸ್ಕಂದ ಮೇಲೆ ಬರಲಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಕುಟುಂಬದವರ ರೋದನ: ಸ್ಕಂದ ಮೈಸೂರಿನ ವಿವೇಕಾನಂದ ನಗರದ ಮಧುವನ ಲೇಔಟ್‌ನ ನಿವಾಸಿಗಳಾದ ಮೈಸೂರು ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ ಶಂಕರ್, ರೇವತಿ ದಂಪತಿಯ ಒಬ್ಬನೇ ಪುತ್ರ. ಮಗನನ್ನು ಕಳೆದುಕೊಂಡಿರುವ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಕಂದ ಆರು ತಿಂಗಳ ಹಿಂದೆ ಬೆಂಗಳೂರಿನ ಅಕ್ಸೆಂಚರ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಪಾಲಕರಿಗೆ ಶವವನ್ನು ಒಪ್ಪಿಸಲಾಯಿತು.ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು.

ಚಿತ್ರ: 3ಎಸ್‌ಪಿಟಿ7- ಮಲ್ಲಳ್ಳಿ ಜಲಪಾತದಲ್ಲಿ ಮೃತಪಟ್ಟ ಸ್ಕಂದ.