More

    ಕೇಂದ್ರದ ರಕ್ಷಣಾತ್ಮಕ ಆಟ: ಈ ಬಜೆಟ್​ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಅತ್ಯಧಿಕ ಅನುದಾನ

    ಕೇಂದ್ರದ ರಕ್ಷಣಾತ್ಮಕ ಆಟ: ಈ ಬಜೆಟ್​ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಅತ್ಯಧಿಕ ಅನುದಾನ| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

    ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2023-24ರ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ 5.94 ಲಕ್ಷ ಕೋಟಿ ರೂಪಾಯಿಗಳ ಮೊತ್ತವನ್ನು ಒದಗಿಸಲಾಗಿದ್ದು, ಇದು ಯಾವುದೇ ಸಚಿವಾಲಯ ಪಡೆದಿರುವ ಅತ್ಯಧಿಕ ಮೊತ್ತವಾಗಿದೆ. ಕಳೆದ ವರ್ಷ ಒದಗಿಸಿದ 5.25 ಲಕ್ಷ ಕೋಟಿಗೆ ಹೋಲಿಸಿದರೆ, ಈ ವರ್ಷದ ಮೊತ್ತ ಇನ್ನಷ್ಟು ಹೆಚ್ಚಳ ಕಂಡಿದೆ. ರಕ್ಷಣಾ ಬಜೆಟ್ ಒಟ್ಟಾರೆ ಕೇಂದ್ರ ಆಯವ್ಯಯದ 8% ಆಗಿದ್ದು, ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ (ಎಸ್ಐಪಿಆರ್‌ಐ) 2021ರ ದಾಖಲೆಯ ಪ್ರಕಾರ, ಅಮೆರಿಕಾ ಹಾಗೂ ಚೀನಾಗಳ ಬಳಿಕ ಭಾರತ ಮಿಲಿಟರಿಗಾಗಿ ಅತಿಹೆಚ್ಚು ಖರ್ಚು ಮಾಡುತ್ತಿರುವ ಜಗತ್ತಿನ ಮೂರನೇ ರಾಷ್ಟ್ರ ಎನಿಸಿದೆ.

    ಬಂಡವಾಳ ಹೂಡಿಕೆ: ಈ ಬಾರಿಯ ಬಜೆಟ್‌ನಲ್ಲಿ ರಕ್ಷಣಾ ವೆಚ್ಚಕ್ಕೆ 1.62 ಲಕ್ಷ ಕೋಟಿ ರೂಪಾಯಿ ಒದಗಿಸಲಾಗಿದ್ದು, ಕಳೆದ ವರ್ಷದ 1.44 ಲಕ್ಷ ಕೋಟಿ ರೂಪಾಯಿಗಿಂತಲೂ 12% ಹೆಚ್ಚಾಗಿದೆ. ರಕ್ಷಣಾ ಉಪಕರಣಗಳ ಖರೀದಿಯ ಮೊತ್ತದಲ್ಲಿ 68% ಮೊತ್ತ ದೇಶೀಯ ಉದ್ಯಮಗಳಿಂದ ಖರೀದಿಸಲು ಮೀಸಲಿಡಲಾಗಿದೆ. ಕಳೆದ ವರ್ಷ ಈ ಮೊತ್ತ 58% ಆಗಿತ್ತು. ಈ ಹೆಚ್ಚಳ ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಯೋಜನೆಗೆ ಉತ್ತೇಜನ ನೀಡಲಿದೆ.

    ಬಂಡವಾಳದ ಹಂಚಿಕೆ: ಭಾರತೀಯ ವಾಯುಪಡೆಗೆ ಬಂಡವಾಳ ಹಂಚಿಕೆಯ ಸಿಂಹಪಾಲು ಲಭ್ಯವಾಗಲಿದ್ದು, 1.62 ಲಕ್ಷ ಕೋಟಿ ರೂಪಾಯಿಗಳ ರಕ್ಷಣಾ ಬಜೆಟ್‌ನ 57,137 ಕೋಟಿ ರೂಪಾಯಿ ವಾಯುಪಡೆಗೆ ಲಭ್ಯವಾಗಲಿದೆ. ಕಳೆದ ಬಜೆಟ್‌ನಲ್ಲಿ ವಾಯುಪಡೆಗೆ 53,749 ಕೋಟಿ ಲಭಿಸಿತ್ತು. ಎರಡನೇ ಸ್ಥಾನದಲ್ಲಿರುವ ಭಾರತೀಯ ನೌಕಾಪಡೆಗೆ 52,804 ಕೋಟಿ ಲಭ್ಯವಾಗಲಿದ್ದು, ಕಳೆದ ಬಜೆಟ್‌ನಲ್ಲಿ ನೌಕಾಪಡೆ 47,727 ಕೋಟಿ ಪಡೆದುಕೊಂಡಿತ್ತು. ಮೂರನೇ ಸ್ಥಾನದಲ್ಲಿರುವ ಭಾರತೀಯ ಭೂಸೇನೆಗೆ ಈ ಬಜೆಟ್‌ನಲ್ಲಿ 37,597 ಕೋಟಿ ಲಭಿಸಲಿದೆ. ಕಳೆದ ಬಜೆಟ್‌ನಲ್ಲಿ ಭೂಸೇನೆ 32,597 ಕೋಟಿ ಪಡೆದುಕೊಂಡಿತ್ತು. ರಕ್ಷಣಾ ಕ್ಷೇತ್ರದಲ್ಲಿನ ಬಂಡವಾಳ ಹೂಡಿಕೆಯಡಿ ನಿರ್ಮಾಣ ಕಾರ್ಯದ ಖರ್ಚು, ಯಂತ್ರೋಪಕರಣಗಳು, ಹಾಗೂ ಟ್ಯಾಂಕ್‌ಗಳು, ನೌಕೆಗಳು, ಹಾಗೂ ವಿಮಾನಗಳೂ ಸೇರಿವೆ.

    ಬಜೆಟ್ ಮೊತ್ತದ ವಿಂಗಡಣೆ

    ಇನ್ನು ರಕ್ಷಣಾ ಬಜೆಟ್ ಮೊತ್ತವನ್ನು ವಿಂಗಡಿಸಿ ನೋಡಿದರೆ, 31% ಮೊತ್ತ ಸಂಬಳಕ್ಕೆ ಬಳಕೆಯಾಗುತ್ತದೆ. 23.8% ಆಯುಧ ಖರೀದಿಗೆ ಬಳಕೆಯಾದರೆ, 22.8% ನಿವೃತ್ತಿ ವೇತನಕ್ಕೆ ಬಳಕೆಯಾಗುತ್ತದೆ. ಪ್ರಸ್ತುತ ಬಜೆಟ್‌ನಲ್ಲಿ 1.38 ಲಕ್ಷ ಕೋಟಿ ರೂಪಾಯಿಗಳನ್ನು ನಿವೃತ್ತ ಸೈನಿಕರ ಪಿಂಚಣಿಗಾಗಿ ಮೀಸಲಿಡಲಾಗಿದೆ. ಕಳೆದ ಬಾರಿ ಈ ಮೊತ್ತ 1.19 ಲಕ್ಷ ಕೋಟಿ ಇತ್ತು. ಇನ್ನು ಮಿಲಿಟರಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಹೆಚ್ಚಿನ ಹಣ ಮೀಸಲಿಡುವ ಅಗತ್ಯವಿದೆ. ಭಾರತಕ್ಕೆ ಹೋಲಿಸಿದರೆ, ಅಮೆರಿಕಾದ ರಕ್ಷಣಾ ಬಜೆಟ್ 2020ರಿಂದ 2021ರಲ್ಲಿ 1.4% ಕಡಿಮೆಯಾಗಿತ್ತು. ಅಮೆರಿಕಾದ ಜಿಡಿಪಿ ಮೇಲಿನ ಮಿಲಿಟರಿಯ ಭಾರ 3.7%ದಿಂದ 3.5%ಗೆ ಇಳಿಕೆಯಾಗಿತ್ತು. ಅದೇ ಸಮಯದಲ್ಲಿ ಮಿಲಿಟರಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಮೀಸಲಿಟ್ಟ ಮೊತ್ತ 2012 ಮತ್ತು 2021ರ ಮಧ್ಯೆ 24% ಹೆಚ್ಚಳ ಕಂಡಿತು. ಆಯುಧ ಖರೀದಿಯ ವೆಚ್ಚ ಅದೇ ಅವಧಿಯಲ್ಲಿ 6.4% ಇಳಿಕೆ ಕಂಡಿತು.

    ಭಾರತದ 2023ರ ಕೇಂದ್ರ ಬಜೆಟ್ ರಕ್ಷಣಾ ವಲಯದಲ್ಲಿ ಒಟ್ಟಾರೆಯಾಗಿ ಧನಾತ್ಮಕವಾಗಿ ಕಂಡುಬರುತ್ತಿದೆ. ರಕ್ಷಣಾ ಸಚಿವಾಲಯಕ್ಕೆ ಒದಗಿಸುವ ಬಜೆಟ್‌ನಲ್ಲಿನ ಹೆಚ್ಚಳ ಮತ್ತು ಒಟ್ಟಾರೆ ಖರೀದಿಯ ಬಂಡವಾಳದಲ್ಲಿ 68% ದೇಶೀಯ ಆಯುಧ ಉತ್ಪಾದಕರಿಂದ ಖರೀದಿಸಲು ನಿಗದಿಪಡಿಸಿರುವುದು ದೀರ್ಘಕಾಲದಲ್ಲಿ ದೇಶೀಯ ಆಯುಧ ಉದ್ಯಮವನ್ನು ಬಲಪಡಿಸಲಿದೆ. ರಕ್ಷಣಾ ಸಚಿವಾಲಯಕ್ಕೆ 5.94 ಲಕ್ಷ ಕೋಟಿ ರೂಪಾಯಿಗಳ ಅನುದಾನ ಒದಗಿಸಿರುವುದು ರಾಷ್ಟ್ರದ ಭದ್ರತೆಯ ಕುರಿತು ಮತ್ತು‌ ಸೇನಾಪಡೆಗಳ ಹಿತರಕ್ಷಣೆಯ ಕುರಿತು ಸರ್ಕಾರದ ಬದ್ಧತೆಯನ್ನು ತೋರುತ್ತದೆ.

    ಆದರೆ ಹಲವು ವರ್ಷಗಳಿಂದಲೂ ಆಯುಧ ಖರೀದಿ ಮತ್ತು ಇತರ ವೆಚ್ಚಗಳಿಗೆ ಹೋಲಿಸಿದರೆ, ಸಂಬಳ ಮತ್ತು ನಿವೃತ್ತಿ ವೇತನಕ್ಕೆ ಬಂಡವಾಳದ ಹೆಚ್ಚಿನ ಪಾಲು ವೆಚ್ಚವಾಗುವುದು ರಕ್ಷಣಾ ವಿಶ್ಲೇಷಕರು ಕಾಳಜಿ ವ್ಯಕ್ತಪಡಿಸಿರುವ ವಿಚಾರವೇ ಆಗಿದೆ. ಕಡಿಮೆ ಪ್ರಮಾಣದಲ್ಲಿ ಉಳಿದಿರುವ ಮೊತ್ತ ಸೇನೆಯ ಆಧುನೀಕರಣ ಮತ್ತು ಆಯುಧ ಖರೀದಿಗೆ ಕಡಿಮೆ ಅವಕಾಶ ಒದಗಿಸುತ್ತದೆ. ಅದಕ್ಕೂ ಹೆಚ್ಚಾಗಿ, ತಜ್ಞರು ರಕ್ಷಣಾ ಬಜೆಟ್‌ನಲ್ಲಿ ನೀಡಲಾದ ಮೊತ್ತವನ್ನು ಸಮರ್ಪಕವಾಗಿ ಬಳಸುವುದರಲ್ಲಿನ ವೈಫಲ್ಯವನ್ನು ಕುರಿತೂ ಕಳವಳ ವ್ಯಕ್ತಪಡಿಸಿದ್ದಾರೆ.

    2023-24ರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಬೃಹತ್ ಪ್ರಮಾಣದ್ದಾದರೂ, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಿಗೆ ಇನ್ನಷ್ಟು ಕೊಡುಗೆ ನೀಡುವ ಅಗತ್ಯವಿದೆ. ಪ್ರಸ್ತುತ ಕೇವಲ 3.5% ಮೊತ್ತವನ್ನು ಮಾತ್ರವೇ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ರಕ್ಷಣಾ ವಲಯದಲ್ಲಿ ಇನ್ನಷ್ಟು ಮುಂದುವರಿಯಬೇಕಾದರೆ, ಮುಂದಿನ ತಲೆಮಾರಿನ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸುವುದು ಅನಿವಾರ್ಯವಾಗಿದೆ. ಇದನ್ನು ಸಾಧಿಸಲು ಸರ್ಕಾರ ಖಾಸಗಿ ಹೂಡಿಕೆದಾರರಿಗೆ ಸಂಶೋಧನೆ ಮತ್ತು ಅಭಿವೃದ್ಧಿ ವಲಯದಲ್ಲಿ, ರಕ್ಷಣಾ ಶಿಕ್ಷಣ, ಸ್ಟಾರ್ಟಪ್ ವಲಯಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಹುದು. ಇದಕ್ಕಾಗಿ ಖಾಸಗಿ ವಲಯಕ್ಕೆ ತೆರಿಗೆ ವಿನಾಯಿತಿ, ಪ್ರೋತ್ಸಾಹ ಧನವನ್ನೂ ಒದಗಿಸಬಹುದು. ಇದು ಈ ವಲಯದಲ್ಲಿ ನಾವೀನ್ಯತೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಸರ್ಕಾರದ ಗುರಿಯಾದ ಆತ್ಮನಿರ್ಭರ ಭಾರತವನ್ನು ಸಾಧಿಸಲೂ ನೆರವಾಗುತ್ತದೆ.

    ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಬಂದ್; ಈಗ ಕ್ರೇನ್​ ಕಾರ್ಯಕ್ಕೂ ನಿರ್ಬಂಧ: ಎಲ್ಲಿ, ಏಕೆ, ಯಾವಾಗ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts