ಕಲಬುರಗಿ: ಗೋಡ್ಸೆ ಮಾಡಿದಂತಹ ಕೆಲಸ ಭಯೋತ್ಪಾದಕ ಕೆಲಸವಲ್ಲದೆ ಮತ್ತೇನು ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ಗೋಡ್ಸೆ ಮೊದಲ ಹಿಂದು ಉಗ್ರನೆಂಬ ಕಮಲ್ ಹಸನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಮುಖಂಡರು ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದು, ಅನಂತ್ ಕುಮಾರ್ ಹೆಗಡೆ, ಸಾಧ್ವಿ ಪ್ರಜ್ಞಾ ಸಿಂಗ್, ನಳಿನ್ ಕುಮಾರ್ ಕಟೀಲ್ ಹೇಳಿಕೆ ಗಮನಸಿದರೆ ಬಿಜೆಪಿಯವರ ದೇಶ ಭಕ್ತಿ ಪ್ರಶ್ನಿಸಬೇಕಾಗುತ್ತೆ. ಯಾವ ಸಂಸ್ಕೃತರು ಕೂಡ ಅಂತಹ ಹೇಳಿಕೆ ನೀಡುವುದಿಲ್ಲ. ಈಗ ಕ್ಷೇಮೆ ಕೇಳಿದ್ದಾರೆ. ಆದರೆ, ಹೇಳುವ ಮುಂಚೆ ಯೋಚನೆ ಮಾಡಬೇಕು ಎಂದರು.
ಇನ್ನು ನಾಲ್ಕು ವರ್ಷ ಮೈತ್ರಿ ಸರ್ಕಾರ ಇರುತ್ತೆ
ನಮ್ಮ ಮೈತ್ರಿ ಪಕ್ಷದ ಪರವಾಗಿ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಇನ್ನು ನಾಲ್ಕು ವರ್ಷಗಳ ಕಾಲ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತದೆ. ನಮ್ಮಲ್ಲಿ ಬಹಳಷ್ಟು ಜನ ಸಿಎಂ ಆಗಲು ಅರ್ಹತೆ ಹೊಂದಿದ್ದಾರೆ. ಖರ್ಗೆ ಅನೇಕ ಬಾರಿ ಮುಖ್ಯಮಂತ್ರಿ ಹುದ್ದೆಯಿಂದ ವಂಚಿತರಾಗಿದ್ದಾರೆ ಸತ್ಯ. ಆದರೆ, ಈಗ ಸಿಎಂ ಖಾಲಿ ಇಲ್ಲದಿರುವುದರಿಂದ ಚರ್ಚೆ ಅನಗತ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಚುನಾವಣಾ ಸೋಲು ಗೆಲುವಿನ ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿಯವರ ಹಾಗೆ ನನಗೆ ಜ್ಯೋತಿಷ್ಯ ಹೇಳಲು ಬರುವುದಿಲ್ಲ. ನಮ್ಮಲ್ಲಿ ಯಾರು ಗೆಲ್ಲಲಿದ್ದಾರೆ, ಯಾರು ಸೋಲುತ್ತಾರೆ ಎಂದು ಭವಿಷ್ಯ ಹೇಳಲು ಬರಲ್ಲ. ರಾಜ್ಯದಲ್ಲಿ ಅತಿ ಹೆಚ್ಚು ಕ್ಷೇತ್ರದಲ್ಲಿ ಗೆಲ್ಲಲಿದ್ದೇವೆ ಎಂದರು. (ದಿಗ್ವಿಜಯ ನ್ಯೂಸ್)