ಭಕ್ತನ ರಕ್ಷಿಸುವ ಕರುಣಾಮಯಿ ಭಗವಂತ

ರಾಣೆಬೆನ್ನೂರ: ಅಂತರ್ಯಾಮಿಯಾದ ಭಗವಂತ ಭಕ್ತನ ಎಲ್ಲ ಭಾವಗಳನ್ನು ಅರಿತು ರಕ್ಷಿಸಿ ಅಭಯ ನೀಡುವ ಕರುಣಾಮಯಿ ಎಂದು ಕೇರಳ ಹರಿಪಾದ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ವೀರಭದ್ರಾನಂದಜೀ ಮಹಾರಾಜ್ ಹೇಳಿದರು.

ನಗರದ ಲಲಿತ ಭವನದಲ್ಲಿ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್​ನ ಐದನೇ ವಾರ್ಷಿಕ ಸಮ್ಮೇಳನದಲ್ಲಿ ರಾಮಕೃಷ್ಣ ಚಿಂತನಧಾರೆ ಗೋಷ್ಠಿಯಲ್ಲಿ ಭಕ್ತವತ್ಸಲ ರಾಮಕೃಷ್ಣ ವಿಷಯದ ಕುರಿತು ಅವರು ಮಾತನಾಡಿದರು.

ಭಕ್ತರೊಂದಿಗೆ ರಾಮಕೃಷ್ಣರು ಒಡನಾಟ ಹೊಂದಿದ್ದರು. ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಭಕ್ತವಾತ್ಸಲ್ಯವನ್ನು ರಾಮಕೃಷ್ಣರು ಮಾಡಿದ್ದಾರೆ. ಭಕ್ತರು ಅಪಾಯಕ್ಕೆ ಸಿಲುಕುವ ಮುನ್ನವೇ ರಕ್ಷಿಸುತ್ತಿದ್ದರು ಎಂದರು.

ಆಂಧ್ರಪ್ರದೇಶ ವಿಶಾಖಪಟ್ಟಣದ ರಾಮಕೃಷ್ಣ ಮಿಷನ್​ನ ಅಧ್ಯಕ್ಷ ಸ್ವಾಮಿ ಆತ್ಮವಿದಾನಂದಜೀ ಮಹಾರಾಜ್ ಯುಗಾವತಾರನ ವೈಶಿಷ್ಟ್ಯತೆ ಎಂಬ ವಿಷಯದ ಕುರಿತು ಮಾತನಾಡಿ, ಯುಗಯುಗದಲ್ಲಿಯೂ ಭಕ್ತಪರಿಪಾಲನೆಗಾಗಿ ಭಗವಂತ ಅವತರಿಸುವಂತೆ ರಾಮಕೃಷ್ಣರು ಈ ಕಲಿಯುಗದಲ್ಲಿ ಸಂಶಯರಾಕ್ಷಸನ ನಾಶಕ್ಕಾಗಿ ಅವತರಿಸಿದ್ದಾರೆ. ಭಗವಂತನ ಅಸ್ತಿತ್ವದ ಬಗ್ಗೆಯೇ ಸಂಶಯವಿರುವ ಇಂದಿನ ಜನರಿಗೆ ಸಾಧನೆಯ ಮೂಲಕ ಭಗವತನ ದರ್ಶನ ಪಡೆಯಬಹುದೆಂದು ತಮ್ಮ ಜೀವನದಲ್ಲಿಯೇ ತೋರಿಸಿಕೊಟ್ಟರು ಎಂದರು.

ಹಳೇತತ್ವಹೊಸ ದೃಷ್ಠಿ ಇದೇ ರಾಮಕೃಷ್ಣತ್ವ ಎಂಬ ವಿಷಯದ ಕುರಿತು ಕೋಲ್ಕತ್ತಾ ಬೇಲೂರು ಮಠದ ಸ್ವಾಮಿ ಶಿವಪೂರ್ಣಾನಂದಜೀ ಮಹಾರಾಜ್, ಯತಿದರ್ಶನದ ಕುರಿತು ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಸ್ವಾಮೀಜಿ ಮಾತನಾಡಿದರು.

ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹರಿಹರ ವೀರಶೈವ-ಲಿಂಗಾಯತ ಪೀಠಾಧಿಪತಿಗಳಾದ ಶ್ವಾಸಗುರು ಜಗದ್ಗುರು ವಚನಾನಂದ ಸ್ವಾಮೀಜಿ ಭಕ್ತರಿಗೆ ಯೋಗಾಸನ ಮತ್ತು ಪ್ರಾಣಾಯಾಮ ತರಗತಿ ನೆರವೇರಿಸಿಕೊಟ್ಟರು. ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿರವರು ಧ್ಯಾನದ ತರಗತಿಯನ್ನು ನೆರವೇರಿಸಿಕೊಟ್ಟರು.

ಡಾ. ಆರ್.ಎಂ. ಕುಬೇರಪ್ಪ ಸ್ವಾಗತಿಸಿದರು. ಎ.ಎಂ. ನಾಯಕ ವಂದಿಸಿದರು. ವೀರೇಶಾನಂದಜೀ, ಪ್ರೊ. ಬಿ.ಬಿ. ನಂದ್ಯಾಳ್ ಹಾಗೂ ಡಾ. ಚಂದ್ರಶೇಖರ ಕೇಲಗಾರ ನಿರ್ವಹಿಸಿದರು.