ಬೆಳಗಾವಿ: ದೇವರ ಹೆಸರಲ್ಲಿ ಮಕ್ಕಳಿಗೆ ಹಾಲುಣಿಸಿ

ಬೆಳಗಾವಿ: ನಾಗರ ಹುತ್ತ ಮತ್ತು ಕಲ್ಲಿಗೆ ಹಾಲು ಎರೆಯುವ ಬದಲಿಗೆ, ದೇವರ ಹೆಸರಿನಲ್ಲಿ ಮಕ್ಕಳಿಗೆ ವಿತರಿಸಿ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಕಣಬರ್ಗಿಯ ಮಹೇಶ ಫೌಂಡೇಷನ್ ಕಚೇರಿಯಲ್ಲಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಧರ್ಮ ಮಹಾಪೀಠದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಬಸವ ಪಂಚಮಿ ಹಾಗೂ ಎಚ್‌ಐವಿಪೀಡಿತ ಮಕ್ಕಳಿಗೆ ಹಾಲು ಕುಡಿಸುವ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಾಲು ಪೌಷ್ಠಿಕ ಆಹಾರ. ಅದಕ್ಕೆ ಪವಿತ್ರವಾದ ಸ್ಥಾನವಿದೆ. ಆದರೆ, ನಾಗರಪಂಚಮಿ ಹೆಸರಿನಲ್ಲಿ ಲಕ್ಷಾಂತರ ಲೀಟರ್ ಹಾಲು ವ್ಯರ್ಥವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಿ, ಮಕ್ಕಳಿಗೆ ವಿತರಿಸುವ ಪ್ರಜ್ಞೆ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

ಪ್ರತಿಯೊಬ್ಬರೂ ಧಾರ್ಮಿಕ ಚಟುವಟಿಕೆಗಳ ಜತೆಗೆ, ಶೈಕ್ಷಣಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಮೌಢ್ಯ ನಂಬಿಕೆಗಳಿಂದ ಹೊರಬಂದು ವಾಸ್ತವಿಕ ನೆಲೆಗಟ್ಟಿನಲ್ಲಿ ಬದುಕಬೇಕು ಎಂದರು.

ವಕೀಲ ಬಸವರಾಜ ರೊಟ್ಟಿ, ಬಸವ ಭೀಮ ಸೇನೆ ಅಧ್ಯಕ್ಷ ಆರ್.ಎಸ್.ದರ್ಗೆ ಮಾತನಾಡಿದರು. ಮಹೇಶ ಜಾಧವ, ಪ್ರದೀಪ ತೆಲಸಂಗ, ಡಾ.ಎಸ್.ಎಂ.ದೊಡಮನಿ, ಮಾಜಿ ಮೇಯರ್ ಎನ್.ಬಿ.ನಿರ್ವಾಣಿ, ರುದ್ರಣ್ಣ ಚಂದರಗಿ, ಅಶೋಕ ಗೋವೇಕರ ಉಪಸ್ಥಿತರಿದ್ದರು.