ಜಮೀನು ಖರೀದಿಗೆ ಇಟ್ಟಿದ್ದ ನೋಟಿನ ಕಂತೆಗಳನ್ನೇ ತಿಂದು ಹಾಕಿದ ಮೇಕೆ ವಿರುದ್ಧ ಸೇಡು ತೀರಿಸಿಕೊಂಡ ಕುಟುಂಬ!

ಸರ್ಬಿಯಾ: ತೋಟ ನಿರ್ಮಿಸಲೆಂದು ಕುಟುಂಬವೊಂದು ಕಷ್ಟಪಟ್ಟು ಉಳಿತಾಯ ಮಾಡಿದ್ದ ನೋಟಿನ ಕಂತೆಗಳನ್ನು ಹಸಿದ ಮೇಕೆಯೊಂದು ಸಂಪೂರ್ಣ ತಿಂದು ಹಾಕಿದ್ದು, ಕೋಪಗೊಂಡ ಕುಟುಂಬ ವರದಿಗಾರರಿಗೆ ಮೇಕೆ ಮಾಂಸದ ಊಟ ಬಡಿಸುವ ಮೂಲಕ ಸೇಡು ತೀರಿಸಿಕೊಂಡಿದೆ.

ಸರ್ಬಿಯಾದ ಅರನ್ಜೇಲೋವಾಕ್‌ ಸಮೀಪದ ರಾನಿಲೋವಿಕ್‌ ಗ್ರಾಮದಲ್ಲಿ ಘಟನೆ ನಡೆದಿದ್ದು, ಕುಟುಂಬವೊಂದು 10 ಎಕರೆ ಜಮೀನು ಖರೀದಿಸಿ ತೋಟ ನಿರ್ಮಿಸಲು ಉಳಿತಾಯ ಮಾಡಿತ್ತು. ಎಲ್ಲವೂ ಸರಿ ಇದೆ ಎಂದು ಕೊಳ್ಳುತ್ತಿರುವಾಗಲೇ ಜಮೀನು ಮಾರಾಟಗಾರರೊಂದಿಗೆ ಮಾತುಕತೆ ಮುಗಿಸಿಕೊಂಡು ಬರುವಷ್ಟರಲ್ಲಿ ಟೇಬಲ್‌ನಲ್ಲಿಟ್ಟಿದ್ದ ಸುಮಾರು 20 ಲಕ್ಷ ರೂ.(20ಸಾವಿರ ಯುರೋ) ನಾಶವಾಗಿದೆ.

ಜಮೀನು ಖರೀದಿಸುವ ವ್ಯಕ್ತಿ ಬರುವವನಿದ್ದರಿಂದ ಮುಂಜಾನೆ ಹಣ ಎಣಿಸಿ ಲಿವಿಂಗ್‌ ರೂಂನಲ್ಲಿನ ಟೇಬಲ್‌ನಲ್ಲಿಟ್ಟಿದ್ದೆವು. ಬಳಿಕ ಉಪಹಾರ ಸೇವನೆಗೆಂದು ತೆರಳಿದ್ದೆವು. ಎಂದಿನಂತೆ ಮುಂಜಾನೆ ನಮ್ಮ ತಂದೆ ದನಗಳಿಗೆ ಮೇವು ತರಲು ಹೊರ ಹೋಗಿದ್ದಾರೆ. ಆಗ ಮುಖ್ಯ ದ್ವಾರವನ್ನು ತೆಗೆದಿರುವುದು ಗಮನಕ್ಕೆ ಬಂದಿಲ್ಲ. ಈ ವೇಳೆ ಅಲ್ಲೇ ಸಾಕಿದ್ದ ಎರಡು ಮೇಕೆಗಳಲ್ಲಿ ಒಂದು ಒಳಗೆ ನುಗ್ಗಿ ಟೇಬಲ್‌ ಮೇಲಿದ್ದ ಹಣವನ್ನು ತಿಂದಿದೆ. ನೋಟಿನ ಸದ್ದು ಕೇಳಿ ನನ್ನ ಪತಿ ಬಂದು ನೋಡಿದಾಗ ಬಹುತೇಕ ಎಲ್ಲ ಹಣವನ್ನು ತಿಂದು ಚೂರು, ಚೂರಾಗಿಸಿತ್ತು ಎನ್ನುತ್ತಾರೆ ಮಿಲೆನಾ ಸಿಮಿಕ್‌.

ಕೊನೆಗೆ 300 ಯೂರೋಗಳು ಮಾತ್ರ ಉಳಿದಿತ್ತು. ಈ ದುರದೃಷ್ಟ ಘಟನೆಯಿಂದ ಹೊರಬರಲು ಸಿಮಿಕ್‌ ಕುಟುಂಬವು ಇದೊಂದು ಹಬ್ಬದ ದಿನ ಎಂದು ಪರಿಗಣಿಸಿ ಮೇಕೆ ಮಾಂಸದ ಊಟ ತಯಾರಿಸಿ ವರದಿಗಾರರನ್ನು ಊಟಕ್ಕೆ ಆಹ್ವಾನಿಸಿ ಮೇಕೆ ವಿರುದ್ಧ ಸೇಡು ತೀರಿಸಿಕೊಂಡಿದೆ. (ಏಜೆನ್ಸೀಸ್)