ಎ್ಇಎಸ್ ಸಂಸ್ಥೆಯ ಲೋಕೇಶ್ ಹೇಳಿಕೆ
ಪಂಚಾಯಿತಿ ಪಿಡಿಒಗಳಿಗೆ ಕಾರ್ಯಾಗಾರ
ಶಿಡ್ಲಘಟ್ಟ: ತಾಲೂಕು ಪಂಚಾಯಿತಿ ಮತ್ತು ಫೌಂಡೇಷನ್ ಫಾರ್ ಇಕಾಲಾಜಿಕಲ್ ಸೆಕ್ಯೂರಿಟಿ ಸಂಸ್ಥೆಯ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆಯನ್ನು ಆಧರಿಸಿ ಸಮಗ್ರ ಸಹಭಾಗಿತ್ವ ವಾರ್ಷಿಕ ಕ್ರಿಯಾಯೋಜನೆ ತಯಾರಿಸುವ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಇಲಾಖೆ ಅಧಿಕಾರಿಗಳಿಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಎಫ್‌ಇಎಸ್ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಸಿ.ಲೋಕೇಶ್ ಮಾತನಾಡಿ, ಪಂಚಾಯಿತಿಗಳು ಗುರಿ ಸಾಧಿಸಬೇಕಾದರೆ ತಪ್ಪದೇ ಪ್ರತಿವರ್ಷ ಕಡ್ಡಾಯವಾಗಿ ನೀರಿನ ಆಯವ್ಯಯ ಮಾಡಬೇಕು. ನೀರಿನ ಪ್ರಮಾಣ ಎಷ್ಟಿದೆ, ಎಷ್ಟು ಖರ್ಚು ಮಾಡುತ್ತಿದ್ದೇವೆ, ಎಷ್ಟು ನೀರನ್ನು ಉಳಿಸಬೇಕು ಮತ್ತು ಅಂತರ್ಜಲ ಪ್ರಮಾಣವನ್ನು ಅರ್ಥ ಮಾಡಿಕೊಂಡಿರಬೇಕು. ಇತ್ತೀಚೆಗೆ ಬಿಡುಗಡೆಯಾದ ಅಂಕಿಅಂಶಗಳನ್ನು ಗಮನಿಸಿದರೆ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಶೇಕಡಾ 165ರಿಂದ 195ರಷ್ಟು ಅಂತರ್ಜಲ ಬಳಕೆ ಮಾಡುವ ಜಿಲ್ಲೆಗಳಾಗಿವೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಪ್ರಮುಖವಾಗಿ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಹಾಗೂ ಸ್ಥಳೀಯ 9 ಅಂಶಗಳಿಗೆ ಸಂಬಂಧಪಟ್ಟಂತೆ ಯೋಜನೆ ತಯಾರಿಸುವ ಕುರಿತು ಪಿಡಿಒಗಳೊಂದಿಗೆ ಚಟುವಟಿಕೆ ಆಧಾರಿತ ಚರ್ಚೆಯನ್ನು ಮಾಡಲಾಯಿತು.
ತಾಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ಎನ್. ಚಂದ್ರಪ್ಪ, ಯೋಜನಾಧಿಕಾರಿ ಅನಿಲ್‌ಕುಮಾರ್, ಎಫ್‌ಇಎಸ್ ಸಂಸ್ಥೆಯ ವ್ಯವಸ್ಥಾಪಕಿ ನಿಕತ್ ಪರ್ವೀನ್, ಕ್ಷೇತ್ರ ಸಂಯೋಜಿಕಿ ಲೀಲಾವತಿ, ಪಿಡಿಒಗಳಾದ ಅಂಜನ್‌ಕುಮಾರ್, ಆರ್. ಪವಿತ್ರಾ, ವಿ.ತನ್ವೀರ್‌ಅಹ್ಮದ್, ನೈನಾನಿಕತ್, ಪಶು ವೈದ್ಯಾಧಿಕಾರಿ ಡಾ.ಶ್ರೀನಾಥ್‌ರೆಡ್ಡಿ, ಹಿರಿಯ ವೈದ್ಯಾಧಿಕಾರಿ ಎಂ.ಎಸ್.ದೇವರಾಜ್, ರೇಷ್ಮೆ ವಿಸ್ತರಣಾಧಿಕಾರಿ ಭಾರತಿ, ತೋಟಗಾರಿಕೆ ಅಧಿಕಾರಿ ಪಿ.ಮಂಜುಳಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿದ್ಯಾ ವಸ್ತ್ರದ್ ಮತ್ತಿತರರು ಹಾಜರಿದ್ದರು
ಉಪಕಸುಬುಗಳಿಗೆ ಒತ್ತು
ಹಂಡಿಗನಾಳ ಪಂಚಾಯಿತಿ ಅಧಿಕಾರಿ ಮಧು ಮಾತನಾಡಿ, ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಮೊದಲನೆಯದಾದ ಬಡತನಮುಕ್ತ ಮತ್ತು ವರ್ಧಿತ ಜೀವನೋಪಾಯ ಗ್ರಾಮ ಎಂಬ ಗುರಿಯನ್ನು ಸಾಧಿಸಬೇಕಾದರೆ ಪಂಚಾಯಿತಿ ಅಭಿವೃದ್ಧಿ ಯೋಜನೆಯಲ್ಲಿ ವ್ಯವಸಾಯದ ಉಪಕಸುಬುಗಳಾದ ಹೈನುಗಾರಿಕೆ, ಕುರಿ, ಕೋಳಿ, ಮೀನು ಹಾಗೂ ಜೇನು ಸಾಕಣೆಗೆ ಒತ್ತು ನೀಡಿ, ಬಡತನ ರೇಖೆಗಿಂತ ಕೆಳಗಿರುವವರಿಗೆ ಈ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಅವಕಾಶ ಮಾಡಿಕೊಡಬೇಕು. ಇದರಿಂದ ಬಡತನಮುಕ್ತ ಸಮಾಜ ನಿರ್ಮಾಣ ಮಾಡಲು ಸಹಾಯವಾಗುತ್ತದೆ ಎಂದು ಹೇಳಿದರು.