ಗೋವಾದಲ್ಲಿ ಕರ್ನಾಟಕ ಮಾದರಿ ಪಡಿತರ ವ್ಯವಸ್ಥೆ ಜಾರಿ

ಬೆಳಗಾವಿ: ಪಡಿತರ ವಿತರಣೆಗೆ ಕರ್ನಾಟಕ ಸರ್ಕಾರ ಅಳವಡಿಸಿಕೊಂಡಿರುವ ಆನ್‌ಲೈನ್ ವ್ಯವಸ್ಥೆ ಅತ್ಯುತ್ತಮವಾಗಿದೆ. ಗೋವಾ ಸರ್ಕಾರ ಇದೇ ಮಾದರಿ ಅನುಸರಿಸಿ ಪಡಿತರ ವಿತರಣೆ ವ್ಯವಸ್ಥೆ ಬಲಗೊಳಿಸಲು ನಿರ್ಧರಿಸಿದೆ ಎಂದು ಗೋವಾ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಗೋವಿಂದ ಎಸ್. ಗಾವಡೆ ತಿಳಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕದ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೇಟ್ರಿಕ್ ಅಳವಡಿಕೆ, ಪಡಿತರ ಚೀಟಿಗಳಿಗೆ ಆಧಾರ ಜೋಡಣೆ ಹಾಗೂ ಹೊಸ ಪಡಿತರ ಚೀಟಿಗಳಿಗೆ ಆನ್‌ಲೈನ್ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಉತ್ತಮವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕರ್ನಾಟಕದ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಅಳವಡಿಕೆ, ಪಡಿತರ ಚೀಟಿಗಳಿಗೆ ಆಧಾರ ಜೋಡಣೆ ಹಾಗೂ ಹೊಸ ಪಡಿತರ ಚೀಟಿಗಳಿಗೆ ಆನ್‌ಲೈನ್ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಶೇ.90 ರಷ್ಟು ಅನುಷ್ಠಾನಗೊಂಡಿದೆ. ಆದರೆ, ಗೋವಾದ ಹಳ್ಳಿಗಳಲ್ಲಿ ನೆಟ್ ವರ್ಕ್ ಸಮಸ್ಯೆಯಿಂದಾಗಿ ಶೇ.70ರಷ್ಟು ಆನ್‌ಲೈನ್ ಸೌಲಭ್ಯಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಯೋಜನೆಗಳು ಜನರಿಗೆ ನಿಗದಿತ ಸಮಯದಲ್ಲಿ ಮುಟ್ಟುತ್ತಿಲ್ಲ. ಕರ್ನಾಟಕ ಮಾದರಿ ವ್ಯವಸ್ಥೆ ಅನುಕರಣೀಯವಾಗಿದೆ ಎಂದು ತಿಳಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ 10 ಲಕ್ಷ ಬಿಪಿಎಲ್ ಪಡಿತರ ಚೀಟಿದಾರರಿದ್ದರೂ ಸಮಸ್ಯೆ ಉಂಟಾಗದಂತೆ ಆನ್‌ಲೈನ್ ವ್ಯವಸ್ಥೆ ಜಾರಿಯಲ್ಲಿದೆ. ಆದರೆ,ಗೋವಾದ 15 ಲಕ್ಷ ಜನಸಂಖ್ಯೆಯಲ್ಲಿ 3 ಲಕ್ಷ ಜನರು ಪಡಿತರ ಚೀಟಿಯ ಸೌಲಭ್ಯ ಹೊಂದಿದ್ದಾರೆ. ಆದರೂ ಆನ್‌ಲೈನ್ ಸೌಲಭ್ಯ ಅಳವಡಿಸಲು ಸಾಧ್ಯವಾಗುತ್ತಿಲ್ಲ. 2 ಬಾರಿ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿ ಆನ್‌ಲೈನ್ ವ್ಯವಸ್ಥೆ ಸಮಸ್ಯೆಗಳು, ಅನುಕೂಲಗಳ ಬಗ್ಗೆ ಅಧ್ಯಯನ ನಡೆಸಿದ್ದೇನೆ. ಈ ಸಂಬಂಧ ನಮ್ಮ ಸಿಬ್ಬಂದಿಗೆ ತರಬೇತಿ ನೀಡಿದ್ದೇವೆ ಎಂದು ಸಚಿವರು ವಿವರಿಸಿದರು.

ಈಗಾಗಲೇ ಗೋವಾದ ಆಹಾರ ಇಲಾಖೆಯಲ್ಲಿನ ಶೇ.50 ರಷ್ಟು ಸಮಸ್ಯೆಗಳನ್ನು ಪರಿಹರಿಸಿ ಆನ್‌ಲೈನ್ ವ್ಯವಸ್ಥೆ ಅಳವಡಿಸಿಕೊಳ್ಳಲು ಅನುಕೂಲ ಕಲ್ಪಿಸಿಕೊಂಡಿದ್ದೇವೆ. ನ್ಯಾಯಬೆಲೆ ಅಂಗಡಿಕಾರರಿಗೆ ಕಮಿಷನ್ ಒಳಗೊಂಡು ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದೇವೆ. ಆದರೆ, ಹಳ್ಳಿಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದರು.

ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಜಿಲ್ಲಾ ಉಪನಿರ್ದೇಶಕಿ ಎಸ್.ಎಸ್.ಬಳ್ಳಾರಿ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ಗೋವಾದಲ್ಲಿ ವಲಸಿಗರೇ ಹೆಚ್ಚು

ಗೋವಾ ರಾಜ್ಯದ 15 ಲಕ್ಷ ಜನಸಂಖ್ಯೆ ಪೈಕಿ ಕೇವಲ 9 ಲಕ್ಷ ಜನರು ಮಾತ್ರ ಮೂಲ ನಿವಾಸಿಗಳು. ಇನ್ನುಳಿದವರು ವಲಸಿಗರು. ಗೋವಾದಲ್ಲಿ ಆಹಾರ ಉತ್ಪಾದನೆ ಆಗುತ್ತಿಲ್ಲ. ನೆರೆಯ ರಾಜ್ಯಗಳನ್ನು ನಾವು ಅವಲಂಬಿಸಿದ್ದೇವೆ. ಹಾಗಾಗಿ ಗೋವಾದಲ್ಲಿ ಆಹಾರ ಧಾನ್ಯಗಳಿಗೆ ಹೆಚ್ಚಿನ ದರ ನೀಡುತ್ತಿಲ್ಲ. ಇದರಿಂದ ಬಡವರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಗೋವಾ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಗೋವಿಂದ ಎಸ್. ಗಾವಡೆ ತಿಳಿಸಿದರು.

ಪಡಿತರ ಚೀಟಿಗಳಿಗೆ ಆಧಾರ ಜೋಡಣೆಯಿಂದ ಬಹುತೇಕ ಸಮಸ್ಯೆಗಳು ಬಗೆಹರಿಯಲಿದೆ. ಗೋವಾ ಮೂಲ ನಿವಾಸಿಗಳು ಹೆಚ್ಚಾಗಿ ಹಳ್ಳಿಗಳಲ್ಲಿ ಇದ್ದಾರೆ. ಅವರಿಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಆಧಾರ ಜೋಡಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.