ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರದ ಆಸೆ; ಅತ್ತ ಗೋವಾದಲ್ಲಿ ಅಧಿಕಾರಕ್ಕೇರಲು ಕಾಂಗ್ರೆಸ್​ ಕಸರತ್ತು

ಗೋವಾ: ಕರ್ನಾಟದಲ್ಲಿರುವ ಕಾಂಗ್ರೆಸ್​- ಜೆಡಿಎಸ್​ ಮೈತ್ರಿ ಸರ್ಕಾರವನ್ನು ಉರುಳಿಸಿ ಹೊಸ ಸರ್ಕಾರ ರಚಿಸಲು ಬಿಜೆಪಿ ಎಲ್ಲ ಮಾರ್ಗಗಳಿಂದಲೂ ಪ್ರಯತ್ನಿಸುತ್ತಿರುವ ಹೊತ್ತಿನಲ್ಲೇ ಅತ್ತ ನೆರೆಯ ಗೋವಾದಲ್ಲಿರುವ ಬಿಜೆಪಿ ಮತ್ತು ಇತರ ಸ್ಥಳೀಯ ಪಕ್ಷಗಳ ಮೈತ್ರಿ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೇರಲು ಕಾಂಗ್ರೆಸ್​ ಎಲ್ಲ ರೀತಿಯ ಕಾರ್ಯತಂತ್ರ ರೂಪಿಸುತ್ತಿದೆ.

ಇಂದು ರಾಜಭವನಕ್ಕೆ ತೆರಳಿದ್ದ ಕಾಂಗ್ರೆಸ್​ ನಾಯಕರ ನಿಯೋಗ, 14 ಸದಸ್ಯರ ಸಹಿಯುಳ್ಳ ಪತ್ರದೊಂದಿಗೆ ಸರ್ಕಾರ ರಚಿಸಲು ತನ್ನ ಹಕ್ಕು ಮಂಡಿಸಿತು. ಆದರೆ, ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿಲ್ಲ. ಬದಲಿಗೆ ರಾಜ್ಯಪಾಲರ ಕಚೇರಿಯಲ್ಲಿ ಪ್ರಸ್ತಾವನೆ ಸಲ್ಲಿಸಿ ಬಂದಿದೆ.

ಸರ್ಕಾರ ರಚನೆಗೆ ಪ್ರಸ್ತಾವನೆ ಮಂಡಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಚಂದ್ರಕಾಂತ್​ ಕಾವ್ಳೇಕರ್​, ” ರಾಜಭವನಕ್ಕೆ ನಾವು ಎರಡು ಮನವಿ ಸಲ್ಲಿಸಿದ್ದೇವೆ. ಗೋವಾ ವಿಧಾನಸಭೆಗೆ ಚುನಾವಣೆ ನಡೆದು ಕೇವಲ 18 ತಿಂಗಳಾಗಿವೆ. ಐದು ವರ್ಷಕ್ಕೆ ಜನತೆ ಆರಿಸಿ ಕಳುಹಿಸಿರುವಾಗ ವಿಧಾನಸಭೆಯನ್ನು ವಿಸರ್ಜಿಸುವ ಪ್ರಶ್ನೆ ಬರುವುದಿಲ್ಲ ಎಂದು ತಿಳಿಸಿದ್ದೇವೆ. ಇದರ ಜತೆಗೆ ಬಿಜೆಪಿ ಸರ್ಕಾರ ನಡೆಸಲು ವಿಫಲವಾದಲ್ಲಿ ನಮಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದೇವೆ,” ಎಂದು ತಿಳಿಸಿದರು.

ಸದ್ಯ ಗೋವಾದ ಮುಖ್ಯಮಂತ್ರಿಯಾಗಿರುವ ಮನೋಹರ್​ ಪರಿಕ್ಕರ್​ ಅವರು, ಅನಾರೋಗ್ಯದ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನದ ವಿಚಾರಕ್ಕೆ ಬಿಜೆಪಿ ಮತ್ತು ಮೈತ್ರಿ ಪಕ್ಷಗಳ ನಡುವೆ ಭಿನ್ನಮತ ಉಂಟಾಗಿದ್ದು, ಸರ್ಕಾರ ಡೋಲಾಯಮಾನ ಪರಿಸ್ಥಿತಿ ಎದುರಿಸುತ್ತಿದೆ. ಯಾವುದೇ ಕ್ಷಣದಲ್ಲಾದರೂ ಗೋವಾದಲ್ಲಿ ರಾಜಕೀಯ ಪರಿಸ್ಥಿತಿ ಬದಲಾಗುವ ಸಾಧ್ಯತೆಗಳಿರುವ ಹೊತ್ತಿನಲ್ಲೇ, ರಾಜ್ಯದ ಅತಿ ದೊಡ್ಡ ಪಕ್ಷ ಕಾಂಗ್ರೆಸ್​ ಸರ್ಕಾರ ರಚಿಸಲು ತನ್ನ ಹಕ್ಕು ಮಂಡಿಸಿರುವ ಕಾಂಗ್ರೆಸ್ ಈಗಾಗಲೇ ಪಕ್ಷೇತರರು ಮತ್ತು ಇತರ ಸ್ಥಳೀಯ ಪಕ್ಷಗಳೊಂದಿಗೆ ಬೆಂಬಲದ ವಿಚಾರವಾಗಿ ಚರ್ಚೆ ನಡೆಸಿದೆ ಎಂದು ಗೊತ್ತಾಗಿದೆ.

40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್​ 16, ಬಿಜೆಪಿ 13, ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ 3, ಗೋವಾ ಫಾರ್ವರ್ಡ್​ ಫ್ರಂಟ್​ 3, ಎನ್​ಸಿಪಿ 1, ಮೂವರು ಪಕ್ಷೇತರ ಸದಸ್ಯರಿದ್ದಾರೆ. ಸರ್ಕಾರ ರಚಿಸಲು ಯಾವುದೇ ಪಕ್ಷ ಅಥವಾ ಮೈತ್ರಿ ಕೂಟಕ್ಕೆ 21 ಸದಸ್ಯರ ಬೆಂಬಲವಿರಬೇಕು.