ಮನೋಹರ್​ ಪರಿಕ್ಕರ್​ ನೆನಪಲ್ಲಿ ಕಣ್ಣೀರು ಹಾಕಿದ ಗೋವಾ ಸಿಎಂ ಪ್ರಮೋದ್​ ಸಾವಂತ್

ನವದೆಹಲಿ: ಮನೋಹರ್​ ಪರಿಕ್ಕರ್​ ಅವರ ನಿಧನದ ಬೆನ್ನಲ್ಲೇ ಸೋಮವಾರ ಮಧ್ಯರಾತ್ರಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ಇಂದು ಬಹುಮತ ಸಾಬೀತು ಪಡಿಸಿದ ಪ್ರಮೋದ್​ ಸಾವಂತ್​ ವಿಧಾನಸಭೆಯಲ್ಲಿ ಕಣ್ಣೀರು ಹಾಕಿದರು.

ಬಹುಮತ ಸಾಬೀತಿನ ನಂತರ ಮಾತನಾಡುವಾಗ ಮನೋಹರ್​ ಪರಿಕ್ಕರ್​ ಅವರನ್ನು ನೆನಪಿಸಿಕೊಂಡು ಭಾವುಕರಾದ ಪ್ರಮೋದ್​ ಅವರು, ಮನೋಹರ್​ ಪರಿಕ್ಕರ್​ ಅವರಿಂದಲೇ ನಾನು ಇಂದು ಇಲ್ಲಿದ್ದೇನೆ. ಶಾಸಕನಾಗಿದ್ದು, ಸ್ಪೀಕರ್​ ಆಗಿದ್ದು, ಹಾಗೇ ಇಂದು ಮುಖ್ಯಮಂತ್ರಿಯಾಗಿದ್ದೂ ಕೂಡ ಅವರಿಂದಲೇ, ಅವರಿಗಾಗಿಯೇ ಎಂದು ಕಣ್ಣೀರು ಹಾಕಿದರು.

ಪರಿಕ್ಕರ್​ ಅವರು ದೂರದೃಷ್ಟಿಯುಳ್ಳ ನಾಯಕ ಎಂದು ಡೆಪ್ಯೂಟಿ ಸ್ಪೀಕರ್​ ಹೇಳಿದರು. ಅಲ್ಲದೆ ವಿಪಕ್ಷ ನಾಯಕ (ಐಎನ್​ಸಿ) ಚಂದ್ರಕಾಂತ ಕವ್ಲೇಕರ್​ ಮಾತನಾಡಿ, ಮನೋಹರ್​ ಪರಿಕ್ಕರ್​ ಅವರ ಕೆಲಸದ ಶೈಲಿಯನ್ನೇ ನಾವೂ ಅನುಕರಣೆ ಮಾಡಬೇಕು. ಅವರು ರಕ್ಷಣಾ ಸಚಿವರಾಗಿ ನಮ್ಮ ಇಡೀ ಗೋವಾಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ ಎಂದು ಹೇಳಿದರು.