ಪರಿಕ್ಕರ್ ಅಸ್ತಂಗತ

ಪಣಜಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಅನಂತಕುಮಾರ್ ಬಳಿಕ ಬಿಜೆಪಿಯ ಮತ್ತೊಂದು ಶಿಸ್ತಿನ ಕೊಂಡಿ ಕಳಚಿದೆ. ದಕ್ಷ, ದಿಟ್ಟ ರಾಜಕಾರಣಿಯಾಗಿ, ಅದಕ್ಕೂ ಮೀರಿದ ಸ್ನೇಹಜೀವಿಯಾಗಿ, ಮಿಸ್ಟರ್ ಕ್ಲೀನ್ ಇಮೇಜ್​ನೊಂದಿಗೆ ದಶಕಗಳ ಕಾಲ ಗೋವಾ ಜತೆಗೆ ರಾಷ್ಟ್ರ ರಾಜಕಾರಣದಲ್ಲೂ ಮಿಂಚಿದ್ದ ಗೋವಾ ಮುಖ್ಯಮಂತ್ರಿ, ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ (63) ಚಿರನಿದ್ರೆಗೆ ಜಾರಿದ್ದಾರೆ. ಕ್ಯಾನ್ಸರ್​ಗೆ ಗುರಿಯಾಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಭಾನುವಾರ ಪಣಜಿಯ ಡೋನಾ ಪಾವುಲಾದಲ್ಲಿನ ತಮ್ಮ ಖಾಸಗಿ ನಿವಾಸದಲ್ಲಿ ಕೊನೆಯು ಸಿರೆಳೆದರು.

ಗಣ್ಯರ ನಮನ

ಪರಿಕ್ಕರ್ ನಿಧನಕ್ಕೆ ವಿಪಕ್ಷ ನಾಯಕರ ಸಹಿತ ರಾಷ್ಟ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯಿಸಿ, ರಾಜಕಾರಣದಲ್ಲಿ ಸರಳತೆಯ ಸಾಕಾರ ಮೂರ್ತಿಯಾಗಿದ್ದ ಪರಿಕ್ಕರ್ ಅವರ ಸಾವು ತುಂಬಲಾರದ ನಷ್ಟ ಎಂದಿದ್ದಾರೆ.

ನಮೋ ನಮನ

ಮನೋಹರ್ ಪರಿಕ್ಕರ್ ಓರ್ವ ನೈಜ ದೇಶಭಕ್ತ, ಅಸಾಮಾನ್ಯ ಆಡಳಿತಗಾರ ರಾಗಿದ್ದರು. ಅವರು ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಹಲವು ಪೀಳಿಗೆಗಳು ಸ್ಮರಿಸಲಿವೆ. ನವ ಗೋವಾ ಕಟ್ಟಿದ ದೂರದೃಷ್ಟಿ ವ್ಯಕ್ತಿತ್ವ ಪರಿಕ್ಕರ್ ಅವರದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್​ನಲ್ಲಿ ಸ್ಮರಿಸಿದ್ದಾರೆ.

ರಾಷ್ಟ್ರಪತಿ ಕಂಬನಿ

ಪರಿಕ್ಕರ್ ಸ್ಥಿತಿ ಗಂಭೀರವಾಗಿದೆ ಎಂದು ಗೋವಾ ಸಿಎಂ ಕಚೇರಿ ಟ್ವೀಟ್​ನಲ್ಲಿ ತಿಳಿಸಿದ ಕೆಲವೇ ಹೊತ್ತಿನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಟ್ವೀಟ್ ಮೂಲಕ ಪರಿಕ್ಕರ್ ನಿಧನ ಸುದ್ದಿ ಬಹಿರಂಗಪಡಿಸಿ ಸಂತಾಪ ಸೂಚಿಸಿದರು.

ಸರ್ಜಿಕಲ್ ದಾಳಿ ರೂವಾರಿ

28 ತಿಂಗಳು ರಕ್ಷಣಾ ಸಚಿವರಾಗಿದ್ದ ಪರಿಕ್ಕರ್ ನಿವೃತ್ತ ಯೋಧರಿಗೆ ಒಂದು ದೇಶ, ಒಂದು ಪಿಂಚಣಿಯನ್ನು ಜಾರಿಗೆ ತಂದರು. ಇದಲ್ಲದೆ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಸರ್ಜಿಕಲ್ ದಾಳಿ ನಡೆಸಿದ ಖ್ಯಾತಿಯೂ ಪರಿಕ್ಕರ್ ಮುಡಿಗೇರಿತ್ತು.

ಸೇನಾ ಅನುದಾನ ಪರಿಪೂರ್ಣ ಬಳಕೆ: ಸೇನೆ ಸಬಲೀಕರಣಕ್ಕೆ ನೀಡಲಾಗುವ ಅನುದಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ನಿವೃತ್ತ ಲೆ.ಜನರಲ್ ಡಿ.ಬಿ. ಶೇಕತ್ಕರ್ ನೇತೃತ್ವದಲ್ಲಿ 11 ಸದಸ್ಯರ ಸಮಿತಿಯನ್ನು ಪರಿಕ್ಕರ್ ನೇಮಿಸಿದ್ದರು. ಚೀನಾದ ಪೀಪಲ್ಸ್ ಲಿಬರೇಷನ್ ಆರ್ವಿುಯ ಅನುದಾನ ಬಳಕೆ ಕಾರ್ಯತಂತ್ರಗಳನ್ನು ಕೂಡ ಅಧ್ಯಯನ ನಡೆಸಲು ಪರಿಕ್ಕರ್ ಸೂಚಿಸಿದ್ದರು.

ಅಮಿತ್ ಷಾ ಸಂತಾಪ: ಬಿಜೆಪಿ ಕಾರ್ಯಕರ್ತರು ಹೇಗೆ ದೇಶ ಮೊದಲು ಎಂಬ ಸಿದ್ಧಾಂತಕ್ಕೆ ಬದ್ಧರಾಗಿರುತ್ತಾರೆ ಎಂದು ಇಡೀ ದೇಶಕ್ಕೆ ತೋರಿಸಿಕೊಟ್ಟವರು ಪರಿಕ್ಕರ್. ಅನಾರೋಗ್ಯದ ಕಷ್ಟದ ಸಂದರ್ಭದಲ್ಲಿಯೂ ಅವರು ದೇಶ ಮೊದಲು, ಪಕ್ಷ ನಂತರ ಹಾಗೂ ಸ್ವಂತಿಕೆ ಕೊನೆಗೆ ಎಂಬ ಸಿದ್ಧಾಂತವನ್ನು ಪಾಲಿಸಿದರು. ರಕ್ಷಣಾ ಮಂತ್ರಿಯಾಗಿ ಅವರ ಸೇವೆಯನ್ನು ದೇಶ ಸದಾ ಸ್ಮರಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.

ಇಂದು ಅಂತ್ಯಸಂಸ್ಕಾರ

ಸೋಮವಾರ ಬೆಳಗ್ಗೆ 9.30ರಿಂದ 10.30ರವರೆಗೆ ಪಣಜಿಯ ಬಿಜೆಪಿ ಕಚೇರಿಯಲ್ಲಿ ಪರಿಕ್ಕರ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ರಸ್ತೆಯಲ್ಲಿ ಮೆರವಣಿಗೆ ಮೂಲಕ ಕ್ಯಾಂಪಲ್​ನ ಎಸ್​ಎಜಿ ಮೈದಾನಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ದು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.