ಸರ್ಕಾರ ಉಳಿಸಿಕೊಳ್ಳಲು ಗೋವಾದಲ್ಲಿ ಬಿಜೆಪಿಯಿಂದ ರೆಸಾರ್ಟ್​ ರಾಜಕೀಯ

ಪಣಜಿ: ಗೋವಾ ರಾಜಕೀಯ ಪರಸ್ಥಿತಿ ಅತ್ಯಂತ ಸಂದಿಗ್ಧ ಹಂತಕ್ಕೆ ತಲುಪಿದ್ದು, ಸೋಮವಾರ ಸರಿರಾತ್ರಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಪ್ರಮೋದ್​ ಸಾವಂತ್​ ಅವರು ಇಂದು ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ ರೆಸಾರ್ಟ್​ ರಾಜಕೀಯ ಆರಂಭಿಸಿದೆ.

ಬಿಜೆಪಿ ಈಗಾಗಲೇ ತನ್ನ 12 ಶಾಸಕರನ್ನು ಪಂಚತಾರಾ ಹೋಟೆಲ್​ವೊಂದಕ್ಕೆ ಕೆರದೊಯ್ದಿದ್ದು, ವಿಶ್ವಾಸ ಮತ ಸಾಬೀತು ಪಡಿಸುವ ಹೊತ್ತಿಗೆ ವಿಧಾನಸಭೆಗೆ ಆಗಮಿಸಲಿದೆ.

40 ಸದಸ್ಯ ಬಲದ ಗೋವಾ ವಿಧಾನಸಭೆಯು ಸದ್ಯ ಇಬ್ಬರ ರಾಜೀನಾಮೆ ಮತ್ತು ಇಬ್ಬರ ಸಾವಿನಿಂದಾಗಿ 36ಕ್ಕೆ ಕುಸಿದಿದೆ. ಬಿಜೆಪಿ 12 ಸದಸ್ಯರನ್ನು ಹೊಂದಿದ್ದು, ಜಿಎಫ್​ಪಿಯ ಮೂರು, ಎಂಜಿಪಿಯ ಮೂವರು, ಪಕ್ಷೇತರ ಮೂವರ ಬೆಂಬಲದೊಂದಿಗೆ ಒಟ್ಟಾರೆ 21 ಶಾಸಕರ ಬಲ ಹೊಂದಿದೆ. ಇತ್ತ ಕಾಂಗ್ರೆಸ್​ 14 ಸದಸ್ಯ ಬಲ ಹೊಂದಿದೆ.

ಬಹುಮತಕ್ಕೆ ಕಾಂಗ್ರೆಸ್​ಗೆ ನಾಲ್ವರು ಶಾಸಕರ ಬೆಂಬಲವಷ್ಟೇ ಅಗತ್ಯವಿದ್ದು, ಯಾವ ಹಂತದಲ್ಲಿ ಏನು ಬೇಕಾದರೂ ಆಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲೇ ಬಿಜೆಪಿ ತನ್ನ ಮತ್ತು ಮಿತ್ರ ಪಕ್ಷದ ಶಾಸಕರನ್ನು ರಕ್ಷಿಸಿಕೊಳ್ಳಲು ಸದ್ಯ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿದೆ.