ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹತ್ಯೆ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರು ಬಿಜೆಪಿ ಮತ್ತು ಪಶ್ಚಿಮ ಬಂಗಾಳ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡು, ನ್ಯಾಯಾಲಯವನ್ನು ನಿಮ್ಮ ನಿಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದೀರಾ ಎಂದು ಎಚ್ಚರಿಸಿದರು.
ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ವಕ್ತಾರ ಗೌರವ್ ಬನ್ಸಾಲ್ ಅವರು ಸುಪ್ರೀಂಕೋರ್ಟ್ನಲ್ಲಿ ದಾವೆ ಹೂಡಿದ್ದರು. ಈ ಕುರಿತು ಬಿಜೆಪಿ ಪರ ಹಿರಿಯ ವಕೀಲ ಗೌರವ್ ಭಾಟಿಯಾ ಹಾಗೂ ತೃಣಮೂಲ ಕಾಂಗ್ರೆಸ್ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಪರ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಸೋಮವಾರ ವಾದ ಮಂಡಿಸಿದರು.
ಅರ್ಜಿಗೆ ವಿರೋಧ ವ್ಯಕ್ತಪಡಿಸಿದ ಕಪಿಲ್ ಸಿಬಲ್, ರಾಜಕೀಯ ಪಕ್ಷವೊಂದಕ್ಕೆ ಪಿಐಎಲ್ ಸಲ್ಲಿಸಲು ಖಂಡಿತವಾಗಿ ಅವಕಾಶ ಮಾಡಿಕೊಡಬೇಕೆ ಎಂಬುದನ್ನು ಪರೀಶಿಲಿಸಬೇಕೆಂದು ಮನವಿ ಮಾಡಿಕೊಂಡರು.
ಈ ವೇಳೆ ಮಧ್ಯ ಪ್ರವೇಶಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ಎರಡು ಕಡೆಯ ಎದುರಾಳಿಗಳು ನ್ಯಾಯಾಲಯದ ವೇದಿಕೆಯನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದು ನಮಗೆ ತಿಳಿದಿದೆ ಎಂದು ಕೋರ್ಟ್ ಆವರಣದಲ್ಲಿ ರಾಜಕೀಯ ಹೇಳಿಕೆ ನೀಡಿದ್ದಕ್ಕೆ ಸಿಜೆಐ ಗರಂ ಆದರು.
ಮುಂದುವರಿದು ಮಾತನಾಡಿದ ಅವರು ನಿಮ್ಮ ರಾಜಕೀಯ ಲಾಭವನ್ನು ಪಡೆಯಲು ನೀವಿಬ್ಬರೂ ಟಿವಿ ಚಾನೆಲ್ಗೆ ಹೋಗುವುದು ಒಳಿತೆಂದು ಹೇಳಿದರು.
ಇದೇ ವೇಳೆ ಮೃತ ಬಿಜೆಪಿ ಕಾರ್ಯಕರ್ತ ದುಲಾಲ್ ಕುಮಾರ್ ಕುಟುಂಬ ಸಿಬಿಐ ತನಿಖೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ನಾಲ್ಕು ವಾರದೊಳಗೆ ಪ್ರತಿಕ್ರಿಯಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚನೆ ನೀಡಿತು. (ಏಜೆನ್ಸೀಸ್)