More

    ಎ ಶ್ರೇಣಿ ದೇವಸ್ಥಾನಗಳಲ್ಲಿ ಗೋಶಾಲೆ ಆರಂಭ; ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ

    ಬೆಂಗಳೂರು:  ರಾಜ್ಯದ 25 ಎ ಶ್ರೇಣಿ ದೇವಸ್ಥಾನಗಳಲ್ಲಿ ಗೋ ಶಾಲೆ ಆರಂಭಿಸಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಗೋ ಶಾಲೆ ಆರಂಭಿಸಲು ಉದ್ದೇಶಿಸಿರುವ ದೇವಸ್ಥಾನ ಗಳಲ್ಲಿ ಜಮೀನು ಗುರುತಿಸುವ ಪ್ರಕ್ರಿಯೆ ನಡೆದಿದೆ. ಸದ್ಯದಲ್ಲೇ ಗೋ ಶಾಲೆಗಳು ಕಾರ್ಯಾರಂಭವಾಗಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಮಚಂದ್ರಪುರ ಮಠದ ಮಾದರಿಯಲ್ಲೇ ಗೋವು ತಳಿಗಳ ಸಂರಕ್ಷಣೆ ಮಾಡಲಾಗುವುದು. ಇದಕ್ಕಾಗಿ ರಾಘವೇಶ್ವರ ಶ್ರೀಗಳ ಮಾರ್ಗದರ್ಶನ ಪಡೆಯಲಾಗುವುದು ಎಂದರು.

    ದೇವಸ್ಥಾನದ ಆದಾಯ ಸೋರಿಕೆ ತಡೆಗಟ್ಟುವ ಕುರಿತು ಹಾಗೂ ಧಾರ್ವಿುಕ ದತ್ತಿ ಇಲಾಖೆಯ ದೇವಸ್ಥಾನ ಮತ್ತು ಛತ್ರಗಳ ಆಸ್ತಿಪಾಸ್ತಿಗಳ ರಕ್ಷಣೆಗೆ ಮನವಿಗಳು ಬಂದಿವೆ. ಈ ಬಗ್ಗೆ ವರದಿ ನೀಡಲು ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಮೂರು ತಿಂಗಳಲ್ಲಿ ಸಮಿತಿ ವರದಿ ನೀಡಲಿದೆ ಎಂದು ಹೇಳಿದರು.

    ಹಲ್ಲೆ, ಹತ್ಯೆ ಯತ್ನ ಸಹಿಸುವುದಿಲ್ಲ

    ಪೌರತ್ವ ತಿದ್ದುಪಡಿ ಕಾಯ್ದೆ ಪರ ಮಾತನಾಡಿದ ಖಾಜಿ ತ್ವಾಕಾ ಅಹಮದ್ ಮುಸ್ಲಿಯಾದ್ ಹತ್ಯೆ ಯತ್ನ ಕುರಿತ ಪ್ರಶ್ನೆಗೆ, ನಮ್ಮ ಸರ್ಕಾರ ಇಂಥದ್ದನ್ನು ಸಹಿಸುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ರಾಷ್ಟ್ರೀಯತೆ ಬಗ್ಗೆ ಮಾತಾಡಿದರೆ ಹತ್ಯೆ ಯತ್ನ ನಡೆಯುತ್ತಿದೆ. ಖಾಜಿ ವಿಚಾರದಲ್ಲಿ ಇದು ಆಗಿದೆ. ಈ ಬಗ್ಗೆ ನಮ್ಮ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದರು.

    ಬಿ-ಸಿ ಶ್ರೇಣಿ ದೇವಸ್ಥಾನಗಳಲ್ಲೂ ಸಪ್ತಪದಿ

    ರಾಜ್ಯಸರ್ಕಾರದ ಸಪ್ತಪದಿ ಸಾಮೂಹಿಕ ವಿವಾಹ ಯೋಜನೆಗೆ ಧಾರವಾಡ, ಹಾವೇರಿ ಮತ್ತಿತರ ಜಿಲ್ಲೆಗಳಲ್ಲಿ ಎ ದರ್ಜೆಯ ದೇವಸ್ಥಾನಗಳು ಇಲ್ಲ. ಹಾಗಾಗಿ ಇಲ್ಲೆಲ್ಲ ಬಿ ಮತ್ತು ಸಿ ದರ್ಜೆಯ ದೇವಸ್ಥಾನಗಳಲ್ಲೇ ಸಪ್ತಪದಿ ವಿವಾಹ ಕಾರ್ಯಕ್ರಮ ನಡೆಸಲು ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ದೇವಸ್ಥಾನಗಳಲ್ಲಿ ಮಾರ್ಷಲ್ ಆರ್ಟ್ ಕಲಿಕೆ ಬಗ್ಗೆ ಮನವಿಗಳು ಬಂದಿದ್ದು, ಇಲಾಖೆ ಇನ್ನು ಯಾವುದೇ ನಿರ್ಧಾರ ಮಾಡಿಲ್ಲ. ಮನವಿ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಪೂಜಾರಿ ಹೇಳಿದರು.

    ರಾಜ್ಯದ ಎ ಶ್ರೇಣಿ ಹಾಗೂ ಹೆಚ್ಚು ಆದಾಯವಿರುವ ಬಿ ಶ್ರೇಣಿ ದೇವಸ್ಥಾನಗಳ ನೌಕರರಿಗೆ 6ನೇ ವೇತನ ಆಯೋಗದ ಸವಲತ್ತು ಕಲ್ಪಿಸುವ ಕುರಿತು ಪರಿಶೀಲಿಸುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಯುಕ್ತರಿಗೆ ಸೂಚಿಸಿದ್ದಾರೆ. ಧಾರ್ವಿುಕ ಪರಿಷತ್ ಸಭೆಯಲ್ಲಿ ಸದಸ್ಯರೊಬ್ಬರು ‘ವಿಜಯವಾಣಿ’ ಪ್ರಕಟಿಸಿದ ವಿಶೇಷ ವರದಿ ಪ್ರಸ್ತಾಪಿಸಿ, ನೌಕರರಿಗೆ 6ನೇ ವೇತನ ನೀಡುವ ಕುರಿತು ಅಭಿಪ್ರಾಯ ಕೇಳಿದರು.

    ಇದಕ್ಕೆ ಸಚಿವರು, ದೇವಸ್ಥಾನಗಳ ಯಾವ ನೌಕರರಿಗೆ 6ನೇ ವೇತನ ಆಯೋಗದ ಸವಲತ್ತು ಕಲ್ಪಿಸಬೇಕು? ಎಷ್ಟು ಹೆಚ್ಚುವರಿ ಹಣ ಅವಶ್ಯಕತೆಯಿದೆ? ಎಂಬುದನ್ನು ಪರಿಶೀಲಿಸುವಂತೆ ಸಭೆಯಲ್ಲಿದ್ದ ಆಯುಕ್ತೆ ರೋಹಿಣಿ ಸಿಂಧೂರಿ ಅವರಿಗೆ ಸೂಚಿಸಿದರು. ಅಲ್ಲದೆ, ಈ ಕುರಿತು ಮುಂದಿನ ಸಭೆಯಲ್ಲಿ ರ್ಚಚಿಸುವ ಭರವಸೆಯನ್ನು ನೀಡಿದರು ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts