ಹನಗೋಡು: ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು ಎಂದು ಮೈಸೂರು ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ದಾ.ರಾ. ಮಹೇಶ್ ಅಭಿಪ್ರಾಯಪಟ್ಟರು.
ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಸಮಾಜದ ಸ್ವಾಸ್ಥೃ ಕಾಪಾಡಿ ಸದೃಢ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು. ಇತ್ತೀಚಿನ ಯುವಕರು, ವಿದ್ಯಾರ್ಥಿಗಳು, ಅನೇಕರು ಕ್ಷಣಿಕ ಸುಖದ ಭ್ರಮೆಯಲ್ಲಿ ಮಾದಕ ವಸ್ತುಗಳಿಗೆ ದಾಸರಾಗಿ ತಮಗೆ ಅರಿವಿಲ್ಲದಂತೆ ತಮ್ಮ ಬದುಕನ್ನು ನಾಶ ಮಾಡಿಕೊಳ್ಳುತ್ತಿರುವುದು ದುರಂತವೇ ಸರಿ. ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕೆಂದು ಮನವಿ ಮಾಡಿದರು.
ಶ್ರೀ ಲಕ್ಷ್ಮಣತೀರ್ಥ ವಿದ್ಯಾ ಸಂಸ್ಥೆ ಕಾರ್ಯದರ್ಶಿ ನಟರಾಜ್ ಮಾತನಾಡಿ, ಮಾದಕ ವಸ್ತುಗಳ ಸೇವನೆಯು ವ್ಯಕ್ತಿಯ ದೇಹದ ಪ್ರತಿಯೊಂದು ಜೀವಕೋಶದ ಮೇಲೂ ದುಷ್ಪರಿಣಾಮ ಬೀರುತ್ತದೆ. ವಿಶ್ವಾದ್ಯಂತ ಪ್ರತಿ ವರ್ಷ 5.4 ಮಿಲಿಯನ್ ಜನರು ತಂಬಾಕು ಸೇವನೆಯಿಂದ ಮೃತರಾಗುತ್ತಿದ್ದಾರೆ. ಅದರಲ್ಲಿ ನಮ್ಮ ಭಾರತದ ದೇಶದಲ್ಲಿ ಶೇ.30ರಷ್ಟು ಜನ ಮಾದಕ ವಸ್ತುಗಳ ವ್ಯಸನಿಗಳಾಗಿರುವುದು ಅತ್ಯಂತ ಕಳವಳದ ಸಂಗತಿಯಾಗಿದೆ ಎಂದರು.
ಪ್ರಜ್ಞಾವಂತ ಯುವಜನರು ದುಃಶ್ಚಟಗಳಿಗೆ ದಾಸರಾಗದೆ ಎಚ್ಚರಿಕೆಯಿಂದ ಇರಬೇಕು. ಜತೆಗೆ ಈ ಬಗ್ಗೆ ಪ್ರತಿಯೊಬ್ಬರು ಅರಿತು ಕೊಂಡು ಸುತ್ತಮುತ್ತಲಿನಲ್ಲಿರುವ ಮಾದಕ ವಸ್ತುಗಳ ಸೇವನೆ ಮಾಡುವವರಿಗೆ ಜಾಗೃತಿ ಮೂಡಿಸಿ ದುಶ್ಚಟ ಮುಕ್ತ ಸಮಾಜವನ್ನು ನಿರ್ಮಿಸಲು ಸಹಕರಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಸುನಂದಾ, ಶಾಲೆಯ ಮುಖ್ಯಶಿಕ್ಷಕಿ ಪರ್ವಿನ್ ತಾಜ್, ಶಿಕ್ಷಕರಾದ ಆನಂದ್, ವಿನಯ್ ಮತ್ತಿತರರಿದ್ದರು.