ಗೋಧಿಯ ಗ್ಲುಟೇನ್ ಅಲರ್ಜಿ ಹಾಗೂ ಕರುಳಿನ ಆರೋಗ್ಯ

| ಡಾ. ವೆಂಕಟ್ರಮಣ ಹೆಗಡೆ

ಧಾನ್ಯಗಳಲ್ಲಿ ಕಂಡುಬರುವ ಗ್ಲುಟೇನ್ ಎಂಬ ಸಂಯುಕ್ತದಲ್ಲಿ ಎರಡು ವಿಧ. ಗ್ಲುಟೆನಿನ್ ಹಾಗೂ ಗ್ಲಾಡಿನ್. ಇವುಗಳಲ್ಲಿ ಕೆಲವರಲ್ಲಿ ಅಲರ್ಜಿಗೆ ಹಾಗೂ ಕರುಳಿನ ಸೂಕ್ಷ್ಮಾಣು ಜೀವಿಗಳ ಅಸಮತೋಲನಕ್ಕೆ ಕಾರಣವಾಗಿರುವುದು ಗ್ಲಾಡಿನ್. ಕರುಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ಅದರಲ್ಲೂ ಮುಖ್ಯವಾಗಿ ಐ.ಬಿ.ಎಸ್, ಅಲ್ಸರೇಟಿವ್ ಕೋಲೈಟಿಸ್, ಕೋನ್ಸ್ ಡಿಸೀಸ್, ಆಮಶಂಕೆ, ಆಟೋ ಇಮ್ಯೂನ್ ಕಾಯಿಲೆ ಇರುವವರು ಈ ಗ್ಲುಟೇನ್​ನಿಂದ ದೂರ ಇರುವುದು ಒಳಿತು.

ದೇಹವು ಕರುಳಿನ ಮೂಲಕ ಪೋಷಕಾಂಶಗಳನ್ನು ರಕ್ತಗತ ಮಾಡಿಕೊಳ್ಳುತ್ತದೆ. ಕೆಲವರಲ್ಲಿ ಈ ಗ್ಲುಟೇನ್ ಒಂದು ರೀತಿಯ ಪದರವನ್ನೇ ನಿರ್ವಿುಸಿ ಪೋಷಕಾಂಶಗಳು ರಕ್ತಗತವಾಗದಂತೆ ತಡೆಯುತ್ತದೆ. ಇದರಿಂದಾಗಿ ರಕ್ತಹೀನತೆ, ತೂಕ ಇಳಿಕೆ, ಸುಸ್ತು ಉಂಟಾಗಬಹುದು. ಕೆಲವು ಬಾರಿ ಗೋಧಿಯ ಚಪಾತಿಗಳನ್ನು ಸೇವಿಸಿದಾಗ, ಮೈದಾಯುಕ್ತ ಆಹಾರ ಸೇವಿಸಿದಾಗ ಕೆಲವರಲ್ಲಿ ಭೇದಿ ಅಥವಾ ಮಲಬದ್ಧತೆ ಕಾಣಿಸುತ್ತದೆ. ಹೊಟ್ಟೆ ಬಿಗಿದ ಅನುಭವ, ಬ್ಲೋಟಿಂಗ್ ಅನುಭವ ಉಂಟಾಗುತ್ತದೆ. ಹೀಗಾದಾಗ ಈ ಗ್ಲುಟೇನ್ ಹೊಂದಿರುವ ಆಹಾರ ಕರುಳಿಗೆ ಪೂರಕವಾಗುತ್ತಿಲ್ಲ ಎಂದರ್ಥ. ಈ ರೀತಿಯ ಚಿಹ್ನೆಗಳು ಬಂದಾಗ ಗ್ಲುಟೇನ್ ಅಂಶ ಹೊಂದಿರುವ ಆಹಾರಪದಾರ್ಥಗಳನ್ನು ತ್ಯಜಿಸಿ ನೋಡಬೇಕು. 30-45 ದಿನಗಳಲ್ಲಿ ಸಮಸ್ಯೆ ಹತೋಟಿಗೆ ಬರುತ್ತದೆ.

‘ಗಟ್ ಬ್ರೇನ್ ಎಕ್ಸಿಸ್’ ಎಂಬ ಮಾರ್ಗವೊಂದಿದೆ. ಕೆಲವು ಬಾರಿ ಕರುಳಿನ ಸೂಕ್ಷಾ್ಮಣುಜೀವಿಗಳ ಅಸಮತೋಲನವು ಮನಸ್ಸಿನ ಸಮಸ್ಯೆಗಳಿಗೂ ಕಾರಣವಾಗಬಹುದು. ಗ್ಲುಟೇನ್ ಇರುವ ಆಹಾರ ಪದಾರ್ಥಗಳನ್ನು ತ್ಯಜಿಸಿದ ಅನೇಕರಲ್ಲಿ ಮಾನಸಿಕ ಸಮಸ್ಯೆಗಳು ಗಣನೀಯವಾಗಿ ಕಡಿಮೆ ಆಗಿರುವುದು ಕಂಡುಬಂದಿದೆ. ಗ್ಲುಟೇನ್ ಹೊಂದಿರುವ ಆಹಾರವನ್ನು ಹೆಚ್ಚು ಸೇವಿಸಿದಾಗ ಕೆಲವರಲ್ಲಿ ‘ಲೀಕೀ ಗಟ್ ಸಿಂಡ್ರೋಮ್ ಕಾಣಿಸಿಕೊಳ್ಳಬಹುದು. ದೇಹಕ್ಕೆ ಬೇಡದೆ ಇರುವ, ಮಲದ ಮೂಲಕ ಹೊರ ಹೋಗಬೇಕಾದ ಕೆಲವು ಆಹಾರ ಅಂಶ, ಯೀಸ್ಟ್, ಸೂಕ್ಷಾ್ಮಣು ಜೀವಿ, ಗ್ಲುಟೇನ್ ಸಂಯುಕ್ತಗಳನ್ನು ಕರುಳಿನಿಂದ ಹೊರಹೋಗದೆ ರಕ್ತಕ್ಕೆ ಸೇರಿಸುತ್ತದೆ. ಇವು ನಮ್ಮ ರಕ್ಷಣಾ ವ್ಯವಸ್ಥೆಯನ್ನು ಚೆಲ್ಲಾಪಿಲ್ಲಿ ಮಾಡಿ ಆಟೋ ಇಮ್ಯೂನ್ ತೊಂದರೆಗಳಿಗೆ ನಾಂದಿ ಹಾಡಬಹುದು. ಗೋಧಿಯ ಉತ್ಪನ್ನಗಳಲ್ಲಿ ತೊಂದರೆ ಮಾಡುವ ಗ್ಲುಟೇನ್ ಅಂಶವನ್ನು ಹೆಚ್ಚು ಕಾಣಬಹುದು. ಈ ಸಂದರ್ಭಗಳಲ್ಲಿ ಗೋಧಿಯ ಉತ್ಪನ್ನಗಳನ್ನು ಸಂಪೂರ್ಣ ತ್ಯಜಿಸುವುದು ಒಳಿತು.

ಪ್ರೀ-ಪ್ರೋ ಬಯೋಟಿಕ್ ಇರುವ ಆಹಾರಗಳನ್ನು ಹೆಚ್ಚು ಸೇವಿಸಿದಾಗ ಗ್ಲುಟೇನ್ ಅಲರ್ಜಿ ಕಡಿಮೆ ಆಗಲು ಸಾಧ್ಯ. ಎಂಟು ತಾಸು ನೀರಿನಲ್ಲಿ ನೆನೆಸಿ ನಂತರ ಮಾಡಿದ ಸಿರಿಧಾನ್ಯದ ಗಂಜಿ ಅಥವಾ ಅನ್ನದ ಗಂಜಿಯನ್ನು 7-8 ತಾಸು ಮುಚ್ಚಿಡಬೇಕು. ನಂತರ ಈ ಗಂಜಿಗೆ ತಾಜಾ ಮಜ್ಜಿಗೆ ಹಾಕಿ ಸೇವಿಸುವುದರಿಂದ ಪ್ರೀ-ಪ್ರೋ ಬಯೋಟಿಕ್ ಎರಡೂ ಕರುಳಿಗೆ ದೊರೆತು ಗ್ಲುಟೇನ್​ನಿಂದ ಬಂದ ಕರುಳಿನ ಸಮಸ್ಯೆಗಳನ್ನು ಗಣನೀಯ ಪ್ರಮಾಣದಲ್ಲಿ ಹತೋಟಿಗೆ ತರಲು ಸಾಧ್ಯ. ಹುದುಗಿಸಿದ ತರಕಾರಿಗಳು, ಹುದುಗಿಸಿದ ಕೆಲವು ಆಹಾರಗಳು ಗ್ಲುಟೇನ್ ಅಲರ್ಜಿಯನ್ನು ನಿಧಾನವಾಗಿ ಸರಿಮಾಡುತ್ತವೆ.