ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶ (ಜಿಮ್)ಕ್ಕೆ ವೇದಿಕೆ ಬಹುತೇಕ ಸಜ್ಜಾಗಿದೆ. ಗಣ್ಯರು, ಉದ್ಯಮಿಗಳು, ಹೂಡಿಕೆದಾರರು ಮತ್ತು ಪರಿಣತರ ಪಟ್ಟಿಯು ಅಂತಿಮಗೊಂಡಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಮಾಹಿತಿ ನೀಡಿದರು.
ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ಹಂಚಿಕೊಂಡ ಅವರು, ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಫೆ.11ರ ಸಂಜೆ 4ಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದು, ಫೆ.14ರಂದು ಸಮಾರೋಪ ಸಮಾರಂಭ ನಡೆಯಲಿದೆ.
ಈ ಬಾರಿ ಜಿಮ್‌ನಲ್ಲಿ 10 ಲಕ್ಷ ಕೋಟಿ ರೂ. ಹೂಡಿಕೆಗೆ ಒಡಂಬಡಿಕೆ ನಿರೀಕ್ಷೆಯಂತೆ ಅಷ್ಟೂ ಮೊತ್ತ ದೃಢಪಟ್ಟಿದೆ. ಒಡಂಬಡಿಕೆಯಲ್ಲಿ ಶೇ.75ರಷ್ಟು ವಾಸ್ತವಿಕವಾಗಿ ಹೂಡಿಕೆಯಾಗುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ಶ್ರಮವಹಿಸಿದೆ ಎಂದು ಎಂ.ಬಿ.ಪಾಟೀಲ ಪುನರುಚ್ಚರಿಸಿದರು.
ಥೀಮ್‌ನ ತಿರುಳು
‘ಪ್ರಗತಿಯ ಮರುಕಲ್ಪನೆ’ ಥೀಮ್‌ನಡಿ ಸಮಾವೇಶ ಆಯೋಜಿಸಲಾಗಿದೆ. ರಾಜಕೀಯ ಸೂಕ್ಷ್ಮ ಸನ್ನಿವೇಶ, ಯೂಕ್ರೇನ್-ರಷ್ಯಾ ಯುದ್ಧ, ಬದಲಾದ ಜಾಗತಿಕ ಪರಿಸ್ಥಿತಿ ಗಮನಿಸಿ, ಈ ಥೀಮ್ ಕಂಡುಕೊಳ್ಳಲಾಗಿದೆ.
ತಂತ್ರಜ್ಞಾನ, ಪರಿಸರ ಸ್ನೇಹಿ, ಎಲ್ಲರನ್ನು ಒಳಗೊಳ್ಳುವಿಕೆ ಮತ್ತು ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದೇ ‘ಪ್ರಗತಿಯ ಮರುಕಲ್ಪನೆಯ’ ಮುಖ್ಯಾಂಶವಾಗಿದೆ. ಹವಾಮಾನ ಬದಲಾವಣೆ ಸವಾಲಿನ ಕಾರ್ಯತಂತ್ರ, ಕೃತಕ ಬುದ್ಧಿಮತ್ತೆ, ಹಸಿರು ಇಂಧನದ ಬೆಳವಣಿಗೆಯನ್ನು ಈ ಥೀಮ್ ಪರಿಗಣಿಸಿದೆ ಎಂದರು.