ಪೇಪರ್ ಲೋಟದಲ್ಲಿ ಭತ್ತ ಕೃಷಿ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಉಪ್ಪು ನೀರು ಹರಿಯುವ ಕಾರಣ ಸಮೃದ್ಧ ಭತ್ತ ಕೃಷಿ ಭೂಮಿ ಹಡೀಲು ಬೀಳುತ್ತಿದ್ದು, ಇದಕ್ಕೆ ಪರಿಹಾರವಾಗಿ ರೈತರೊಬ್ಬರು ಪೇಪರ್ ಲೋಟ ಮೂಲಕ ಭತ್ತ ಕೃಷಿ ಮಾಡುವ ಪ್ರಾಯೋಗಿಕ ಪ್ರಯತ್ನಕ್ಕೆ ಕೈಹಾಕಿದ್ದು ಯಶಸ್ಸು ದೊರಕುವ ಆಶಾಭಾವನೆ ಮೂಡಿದೆ.

ಕುಂದಾಪುರ ತಾಲೂಕಿನ ಕಟ್‌ಬೇಲ್ತೂರು ಗ್ರಾಮದ ಹರೆಗೋಡುವಿನ ವಿಶ್ವನಾಥ ಗಾಣಿಗ ಈ ಪ್ರಯತ್ನಕ್ಕೆ ಮುಂದಾಗಿರುವವರು. ಅವರ ಎರಡು ಎಕರೆ ಗದ್ದೆಯಲ್ಲಿ ಹಿಂದೆ ಎರಡು ಬೆಳೆ ಬೆಳೆಯುತ್ತಿದ್ದರು. ಐದಾರು ವರ್ಷದಿಂದ ಸಿಗಡಿ ಕೆರೆಗಾಗಿ ತೋಡಲ್ಲಿ ಹರಿಸುವ ಉಪ್ಪು ನೀರು ಕೃಷಿ ಭೂಮಿಯನ್ನು ಬರಡಾಗಿಸಿದ್ದು, ನಾಟಿ ಮಾಡಿ 15 ದಿನಗಳಲ್ಲಿ ನೇಜಿ ಕೆಂಪಾಗಿ ಸತ್ತು ಹೋಗುತ್ತಿತ್ತು. ಹೇಗಾದರೂ ಗದ್ದೆ ಹಸಿರಾಗಿಸುವ ಪಣತೊಟ್ಟ ವಿಶ್ವನಾಥ ಕಂಡುಕೊಂಡ ಮಾರ್ಗ ಲೋಟ ಕೃಷಿ.

ಪ್ರಾಯೋಗಿಕವಾಗಿ ಒಂದು ಪೇಪರ್ ಲೋಟದಲ್ಲಿ ನೇಜಿ ತಯಾರಿಸಿ, ಉಪ್ಪು ನೀರಿರುವ ಗದ್ದೆಯಲ್ಲಿ ನಾಟಿ ಮಾಡಿದ್ದಾರೆ. ಇದರ ಜತೆಗೆ ಕೈನಾಟಿ ಮಾಡಿದ ನೇಜಿ ಸತ್ತು ಹೋಗಿದೆ, ಲೋಟದ ನೇಜಿ ಬದುಕಿದೆ. ಇದರಿಂದ ಪ್ರೇರಿತರಾಗಿ ಸಾವಿರ ಪೇಪರ್ ಲೋಟದಲ್ಲಿ ನೇಜಿ ಹಾಕಿದ್ದು, ನಾಟಿ ನಡೆಸಿದ್ದಾರೆ. ಈಗ ಮತ್ತಷ್ಟು ಗದ್ದೆಯಲ್ಲಿ ಇದೇ ಪ್ರಯೋಗಕ್ಕೆ ಮುಂದಾಗಿದ್ದಾರೆ. ಈ ವಿಧಾನ ಫಲಪ್ರದವಾದರೆ ಭತ್ತದ ಕೃಷಿಯಲ್ಲಿ ಮತ್ತೊಂದು ಹೊಸ ಹೆಜ್ಜೆ ಇಟ್ಟಂತೆ ಆಗುತ್ತದೆ.

ಸಿಗಡಿ ಕೆರೆ ಬಂದ್ ಮಾಡಿ: ರಾಜಾಡಿ ಬಳಿ ಕಾಂಡ್ಲಾವನದ ಬಳಿ ಚಿಕ್ಕದೊಂದು ಕಿಂಡಿ ಅಣೆಕಟ್ಟಿನ ಮೂಲಕ ಬಯಲಿಗೆ ಉಪ್ಪುನೀರು ನುಗ್ಗದಂತೆ ಮಾಡಲಾಗಿತ್ತು. ಆದರೆ ಸಿಗಡಿ ಕೃಷಿಕರು ಉಪ್ಪು ನೀರಿಗಾಗಿ ಕಿಂಡಿ ಅಣೆಕಟ್ಟು ದುರುಪಯೋಗ ಮಾಡಿಕೊಂಡು ಉಪ್ಪುನೀರು ಪಡೆಯಲು ತೋಡಲ್ಲಿ ಹರಿಸುವುದೇ ಇಷ್ಟೆಲ್ಲ ಸಮಸ್ಯೆಗೆ ಕಾರಣ. ರಾಜಾಡಿ ಬಳಿ ಉಪ್ಪುನೀರು ತಡೆಗೆ ಶಾಶ್ವತ ಪರಿಹಾರ ನೀಡಬೇಕು. ಸಿಗಡಿ ಕೆರೆ ಬಂದ್ ಮಾಡುವ ಮೂಲಕ ಕೃಷಿಗೆ ಪ್ರೋತ್ಸಾಹ ನೀಡಬೇಕು ಎಂದು ಹರೆಗೋಡು ಕೃಷಿಕ ಗುರುರಾಜ್ ಒತ್ತಾಯಿಸಿದ್ದಾರೆ.

ನೇಜಿ ಸಿದ್ಧ ಪಡಿಸೋದು ಹೇಗೆ?
ಪರಿಸರ ಪೂರಕ ಪೇಪರ್ ಲೋಟದ ತುಂಬ ಮಣ್ಣು ತುಂಬಿ, ಅದರಲ್ಲಿ ಐದರಿಂದ ಆರು ಭತ್ತದ ಬೀಜ ಹಾಕಿ ಮನೆ ಅಂಗಳದಲ್ಲಿ ಜೋಡಿಸಿಡಬೇಕು. ಮಳೆ ಬಾರದಿದ್ದರೆ ನೀರು ಚಿಮುಕಿಸಬೇಕು. ಭತ್ತ ಮೊಳಕೆಯೊಡೆದ 16ರಿಂದ 18 ದಿನದೊಳಗೆ ಭತ್ತದ ನೇಜಿಯನ್ನು ಕಾಗದದ ಲೋಟ ಸಹಿತ ಮಣ್ಣಲ್ಲಿ ನಾಟಿ ಮಾಡಲಾಗುತ್ತದೆ. ಗದ್ದೆಯಲ್ಲಿ ಮಣ್ಣು ಉಪ್ಪಾಗಿದ್ದರೂ ಲೋಟದ ಮಣ್ಣಲ್ಲಿ ನೇಜಿ ಇರುವುದರಿಂದ ಉಪ್ಪುಮಣ್ಣಿಗೆ ಭತ್ತದ ನೇಜಿ ಬೇರು ತಾಗದಂತೆ ನೋಡಿಕೊಳ್ಳುತ್ತದೆ. ಕಾಗದದ ಲೋಟ ಕರಗುವಷ್ಟರಲ್ಲಿ ಭತ್ತ ಸಸಿ ಗಟ್ಟಿಯಾಗಿ ನಿಲ್ಲುತ್ತದೆ.

ಹರೆಗೋಡು ಬಯಲು ಸಮೃದ್ಧ ಭೂಮಿಯಾಗಿದ್ದು, ಸಿಗಡಿ ಕೃಷಿ ಆರಂಭವಾದಾಗಿನಿಂದ ಭತ್ತದ ಬಯಲು ಬರಡಾಗುತ್ತ ಬಂತು. ಭೂಮಿ ಹಡಿಲು ಬಿಡಲು ಮನಸ್ಸು ಒಪ್ಪದೆ ಕಾಗದದ ಲೋಟದಲ್ಲಿ ಭತ್ತದ ಮೊಳಕೆ ಭರಿಸಿ, ಲೋಟ ಸಹಿತ ನಾಟಿ ಮಾಡಿದ್ದೇನೆ. ಲೋಟದಲ್ಲಿ ಇಲ್ಲದ ನೇಜಿ ಕರಗಿ ಹೋದರೆ, ತಟ್ಟೆಯಲ್ಲಿದ್ದ ನೇಜಿ ಚಿಗರೊಡೆದಿದೆ.
ವಿಶ್ವನಾಥ ಗಾಣಿಗ, ಕೃಷಿಕ 

ನಮ್ಮ ಪಕ್ಕದಲ್ಲಿರುವ ಕೃಷಿಕ ವಿಶ್ವನಾಥ್ ಮಾಡಿದ ನೂತನ ಪದ್ಧತಿಯಿಂದ ಪ್ರೇರಣೆ ಪಡೆದು ಕಾಗದದ ಲೋಟದಲ್ಲಿ ನೇಜಿ ಸಿದ್ಧ ಪಡಿಸಿ ನಾಟಿಗೆ ಮುಂದಾಗಿದ್ದೇನೆ. ಸಿಗಡಿ ಕೆರೆ ನಿರ್ಮಾಣದ ನಂತರ ಭತ್ತದ ಕೃಷಿಗೆ ಇಂತಹ ದುಸ್ಥಿತಿ ಬಂದಿದೆ. ಸಿಗಡಿ ಕೆರೆ ಬುಡದಲ್ಲಿರುವ ಸಣ್ಣ ಕಿಂಡಿ ಅಣೆಕಟ್ಟು ಕುಸಿದು, ಮತ್ತೊಂದು ಕಿಂಡಿ ಕಟ್ಟು ಕಟ್ಟಿದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಸೀತಾರಾಮ ಹೆಬ್ಬಾರ್, ಕೃಷಿಕ ಹರೆಗೋಡು 

Leave a Reply

Your email address will not be published. Required fields are marked *