ಬೆಂಗಳೂರು: ಕರ್ನಾಟಕ ಸರ್ಕಾರ ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲು ಸೌಲಭ್ಯ ಕಲ್ಪಿಸಲು ವಿಧೇಯಕ ಅಂಗೀಕರಿಸಿರುವುದು ಸಂವಿಧಾನಬಾಹಿರ ನಡೆಯಾಗಿದೆ. ಇಂಥ ತೀರ್ಮಾನಗಳ ಮೂಲಕ ಸಂವಿಧಾನ ರಚನಾಕಾರರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಂತಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಎಚ್ಚರಿಸಿದ್ದಾರೆ.
ನಗರದ ಚನ್ನೇನಹಳ್ಳಿಯಲ್ಲಿ ಭಾನುವಾರ ಮುಕ್ತಾಯಗೊಂಡ ಅಖಿಲ ಭಾರತ ಪ್ರತಿನಿಧಿ ಸಭಾ (ಎಬಿಪಿಎಸ್) ಕಾರ್ಯಕಲಾಪಕ್ಕೆ ಮುನ್ನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಹಿಂದೆ ಅವಿಭಜಿತ ಆಂಧ್ರಪ್ರದೇಶ, ಮಹಾರಾಷ್ಟ್ರ ಸಹಿತ ಕೆಲವು ರಾಜ್ಯಗಳಲ್ಲಿ ಇಂಥದ್ದೇ ಮೀಸಲು ನೀಡಿದಾಗ ಸುಪ್ರೀಂಕೋರ್ಟ್ ರದ್ದುಪಡಿಸಿತ್ತು. ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕಾರದ ನಿರ್ಧಾರವೂ ನಿರರ್ಥಕವಾಗಲಿದೆ. ಜತೆಗೆ ಸರ್ಕಾರ ಸಂವಿಧಾನ ರಚನಾಕಾರರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಂತಾಗುತ್ತದೆ ಎಂದು ಅವರು ಹೇಳಿದರು.
ವಕ್ಫ್ ಕಾಯ್ದೆ ರದ್ದತಿ ವಿಚಾರವಾಗಿ ಹಿಂದು ಸಂಘಟನೆಗಳ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ರೈತರ ಜಮೀನನ್ನು ಒತ್ತುವರಿ ಮಾಡಿರುವುದರಿಂದ ಅಸಂಖ್ಯ ಕೃಷಿಕರು ಸಂತ್ರಸ್ತರಾಗಿದ್ದಾರೆ. ಈ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರ ತಪ್ಪುಗಳನ್ನು ಸರಿಪಡಿಸುವ ಕೆಲಸ ಮಾಡಬೇಕಿದೆ. ಇದೇ ರೀತಿ ಮಣಿಪುರದಲ್ಲೂ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದ ನಂತರ ಬುಡಕಟ್ಟು ಸಮುದಾಯಗಳಲ್ಲಿರುವ ವೈಮನಸ್ಯ ನಿವಾರಿಸಿ ಸೌಹಾರ್ದತೆ ಮೂಡಿಸಬೇಕೆಂದು ಆರ್‌ಎಸ್‌ಎಸ್ ಬಯಸಿದೆ ಎಂದು ಹೊಸಬಾಳೆ ವಿವರಿಸಿದರು.
ಔರಂಗಜೇಬ ಐಕಾನ್ ಅಲ್ಲ
ದೇಶ ಹಾಗೂ ಸಮಾಜದ ಒಳಿತಿಗಾಗಿ ದುಡಿದವರನ್ನು ಆದರ್ಶವಾಗಿಟ್ಟುಕೊಳ್ಳಬೇಕೆ ಹೊರತು, ಅಸಹಿಷ್ಣುತೆ ಭಾವನೆ ಹೊಂದಿದ್ದ ಆಕ್ರಮಣಕಾರಿ ಔರಂಗಜೇಬ್ ಎಂದಿಗೂ ಭಾರತೀಯರ ಐಕಾನ್ ಆಗಲಾರ. ತನ್ನ ಜೀವನದುದ್ದಕ್ಕೂ ಅಸಹಿಷ್ಣುತೆ ತುಂಬಿಕೊಂಡಿದ್ದ ಹಾಗೂ ದೇಶದ ಸಂಸ್ಕೃತಿಗೆ ವಿರುದ್ಧವಾಗಿ ನಡೆದುಕೊಂಡಾತನನ್ನು ಆದರ್ಶವಾಗಿ ಸ್ವೀಕರಿಸುವ ಅಗತ್ಯವಿಲ್ಲ. ನಾವು ಮತೀಯ ದೃಷ್ಟಿಕೋನದಿಂದ ಔರಂಗ್‌ಜೇಬ್‌ನನ್ನು ವಿರೋಧಿಸುತ್ತಿಲ್ಲ. ಬದಲಾಗಿ ಆತ ಭಾರತದ ವಿಚಾರದಲ್ಲಿ ನಡೆದುಕೊಂಡ ರೀತಿಗೆ ಐಕಾನ್ ಆಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಎಂದು ಹೊಸಬಾಳೆ ಪ್ರತಿಪಾದಿಸಿದರು.
ಭಾರತ 1947ರಲ್ಲಿ ರಾಜಕೀಯ ದಾಸ್ಯದಿಂದ ಹೊರಬಂದರೂ, ಇಂದಿಗೂ ಗುಲಾಮಗಿರಿ ಮಾನಸಿಕವಾಗಿ ಮುಕ್ತವಾಗಿಲ್ಲ. ಬ್ರಿಟಿಷರ ವಸಾಹತುಶಾಹಿ ಮುನ್ನವೇ ಆಕ್ರಮಣಕಾರಿಗಳು ಈ ದೇಶದ ಮೇಲೆ ದಂಡೆತ್ತಿ ಬಂದು ಇಲ್ಲಿನ ಸಂಸ್ಕೃತಿಗೆ ವಿರುದ್ಧವಾಗಿ ನಡೆದುಕೊಂಡರು. ಇದಕ್ಕೆ ತದ್ವಿರುದ್ಧವಾಗಿ ಮೊಘಲ್ ಸಾಮ್ರಾಟನ ಮಗನಾಗಿದ್ದರೂ ದಾರಾ ಶಿಕೋಹ್ ಈ ನೆಲದ ಸಂಸ್ಕೃತಿಯನ್ನು ಒಪ್ಪಿ ಬದುಕು ಸಾರ್ಥಕಗೊಳಿಸಿದ್ದ. ರಾಷ್ಟ್ರೀಯತೆಗೆ ಘಾಸಿ ಮಾಡಿದಾತನನ್ನು ಹೇಗೆ ಆದರ್ಶವಾಗಿ ಸ್ವೀಕರಿಸಲು ಸಾಧ್ಯ ಎಂದು ಹೊಸಬಾಳೆ ಪ್ರಶ್ನಿಸಿದರು.
ಸ್ವಯಂಸೇವಕರ ನೇಮಕ ತಪ್ಪಲ್ಲ
ಸರ್ಕಾರದ ವಿವಿಧ ಹುದ್ದೆಗಳಿಗೆ ಆರ್‌ಎಸ್‌ಎಸ್ ಸ್ವಯಂಸೇವಕರನ್ನು ನೇಮಕ ಮಾಡುವುದು ತಪ್ಪಲ್ಲ. ಅವರಲ್ಲಿ ಹುದ್ದೆಗೆ ತಕ್ಕ ಅರ್ಹತೆ, ಸಾಮರ್ಥ್ಯ ಇದ್ದಲ್ಲಿ ಆಯ್ಕೆ ಸಮರ್ಥನೀಯ. ಏಕೆಂದರೆ ಸ್ವಯಂಸೇವಕರು ಕೂಡ ಸಮಾಜದ ನಾಗರಿಕರೇ ಆಗಿದ್ದಾರೆ. ಬಿಜೆಪಿ ಸರ್ಕಾರಗಳು ಅಧಿಕಾರಕ್ಕೆ ಬರುವ ಮುನ್ನವೇ ಹಲವು ಹುದ್ದೆಗಳಲ್ಲಿ ಸಾಮರ್ಥ್ಯದ ಅಳತೆಗೋಲು ಆಧರಿಸಿಯೇ ನೇಮಕ ಮಾಡಲಾಗುತ್ತಿತ್ತು. ಈಗ ದಿಢೀರ್ ಆಗಿ ತಪ್ಪು ಹುಡುಕುವ ಕೆಲಸ ಏತಕ್ಕಾಗಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರ ಆರೋಪಗಳಿಗೆ ಪರೋಕ್ಷವಾಗಿ ಉತ್ತರ ನೀಡಿದರು.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಸರಿ
ಕರ್ನಾಟಕ ಸರ್ಕಾರ ಪರಿಶಿಷ್ಟರ ಅಭ್ಯುದಯಕ್ಕಾಗಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅಡಿಯಲ್ಲಿ ಶೇ.25 ಅನುದಾನ ಮೀಸಲಿಡುತ್ತಿರುವುದು ಸರಿಯಾದ ನಿರ್ಧಾರವಾಗಿದೆ. ಸಮಾಜದಲ್ಲಿ ಹಿಂದುಳಿಯುವಿಕೆ ಗಮನಿಸಿ ಅವರ ಏಳ್ಗೆಗೆ ಕಾರ್ಯಕ್ರಮ ರೂಪಿಸುವುದು ಸ್ವಾಗತಾರ್ಹ. ಆದರೆ, ಅಂತಹ ಕಾರ್ಯಕ್ರಮಗಳ ಜಾರಿಯತ್ತ ಹೆಚ್ಚಿನ ಗಮನ ಹರಿಸುವ ಅಗತ್ಯ ಇದೆ ಎಂದು ಹೊಸಬಾಳೆ ಪ್ರತಿಕ್ರಿಯಿಸಿದರು.
ಆರ್‌ಎಸ್‌ಎಸ್ ಶತಾಬ್ದಿ, ವರ್ಷವಿಡೀ ಕಾರ್ಯಕ್ರಮ
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತನ್ನ ಶತಾಬ್ದಿ ವರ್ಷಾಚರಣೆ ಅವಧಿಯಲ್ಲಿ ಸಂಘಕಾರ್ಯದ ವಿಸ್ತರಣೆ, ದೃಢೀಕರಣ, ರಾಷ್ಟ್ರೀಯ ಪುನರ್‌ಜಾಗೃತಿ ಹಾಗೂ ಸಾಮಾಜಿಕ ಸಾಮರಸ್ಯ ಮೂಡಿಸುವುದಕ್ಕಾಗಿ ‘ಪಂಚ ಯೋಜನೆ’ಗಳ ಕಾರ್ಯಸೂಚಿ ಜಾರಿಗೆ ಅಖಿಲ ಭಾರತೀಯ ಪ್ರತಿನಿಧಿ ಸಭೆ (ಎಬಿಪಿಎಸ್) ಭಾನುವಾರ ತೀರ್ಮಾನಿಸಿದೆ. ಮುಂಬರುವ ವಿಜಯದಶಮಿ ದಿನದಿಂದ ಒಂದು ವರ್ಷ ಕಾಲ ದೇಶದ 1 ಲಕ್ಷ ನಗರ, ಮಂಡಲಗಳಲ್ಲಿ ಗಣವೇಷಧಾರಿ ಸ್ವಯಂಸೇವಕರಿಂದ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ವಾರ್ಡ್/ಗ್ರಾಪಂ ವ್ಯಾಪ್ತಿಯಲ್ಲಿ ನವೆಂಬರ್‌ನಿಂದ 3 ತಿಂಗಳು ಮನೆ ಮನೆ ಸಂಪರ್ಕ, ನಗರ/ಗ್ರಾಮೀಣ ಭಾಗಗಳಲ್ಲಿ ಹಿಂದು ಸಮ್ಮೇಳನ, ಸಾಮಾಜಿಕ ಸದ್ಭಾವ ಸಭೆ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರಮುಖ ನಾಗರಿಕರೊಂದಿಗೆ ಗೋಷ್ಠಿಗಳನ್ನು ನಡೆಸಲಾಗುವುದು ಎಂದುದತ್ತಾತ್ರೇಯ ಹೊಸಬಾಳೆ ತಿಳಿಸಿದರು. ಸಂಘದ ಚಟುವಟಿಕೆಗಳನ್ನು ಯುವ ಸಮೂಹಕ್ಕೆ ತಿಳಿಸಲು ಆಯಾ ಪ್ರಾಂತಗಳಲ್ಲಿ ಯುವ ಕಾರ್ಯಕ್ರಮ ನಡೆಯಲಿದೆ. ಮುಂದಿನ ವರ್ಷ ದಿಲ್ಲಿ, ಮುಂಬೈ, ಕೋಲ್ಕತ್ತಾ ಹಾಗೂ ಬೆಂಗಳೂರಿನಲ್ಲಿ ಸರಸಂಘಚಾಲಕರು ಯುವಜನರೊಂದಿಗೆ ಸಂವಾದ ನಡೆಸಲಿದ್ದಾರೆ. ರಾಣಿ ಅಬ್ಬಕ್ಕ ಅವರ 500ನೇ ಜಯಂತಿಗೆ ಸಂಘವು ನಿರ್ಣಯ ಕೈಗೊಂಡಿದೆ ಎಂದು ಅವರು ತಿಳಿಸಿದರು.
ಸಂಘಟನೆಯೇ ಪ್ರಮುಖ ಕಾರ್ಯಸೂಚಿ
ಹಿಂದು ಸಮಾಜದ ಪುನರ್‌ಜಾಗೃತಿ, ಸಂಘಟನೆಯೇ ಆರ್‌ಎಸ್‌ಎಸ್‌ನ ಪ್ರಮುಖ ಕಾರ್ಯಸೂಚಿ. ಅಸ್ಪೃಶ್ಯತೆಯಂತಹ ಕೆಲ ಸಾಮಾಜಿಕ ಕಟ್ಟುಪಾಡುಗಳಿಂದಾಗಿ 100 ವರ್ಷದಲ್ಲಿ ಸಂಘಕಾರ್ಯ ಕಠಿಣವಾಯಿತು. ನಿತ್ಯ ಶಾಖೆ ಹಾಗೂ ರಾಷ್ಟ್ರವ್ಯಾಪಿ ಚಟುವಟಿಕೆಗಳ ಮೂಲಕ ಎಲ್ಲರನ್ನೂ ಒಗ್ಗೂಡಿಸುವ ಕೆಲಸದಲ್ಲಿ ಸಂಘ ನಿರತವಾಗಿದೆ ಎಂದು ಹೊಸಬಾಳೆ ವಿವರಿಸಿದರು.
ಮಾಸಾಂತ್ಯಕ್ಕೆ ನಾಗಪುರಕ್ಕೆ ಮೋದಿ ಭೇಟಿ?
ಬಿಜೆಪಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಆರ್‌ಎಸ್‌ಎಸ್ ಯಾವುದೇ ಹಸ್ತಕ್ಷೇಪ ಮಾಡದು. ಪಕ್ಷದ ಸಂಘಟನೆಗಾಗಿ ಪೂರ್ಣಾವಧಿ ಪ್ರಚಾರಕರನ್ನು ನಿಯೋಜಿಸುವಿಕೆ ಪಕ್ಷದ ಅಪೇಕ್ಷೆ ಮೇರೆಗೆ ನಡೆಯಲಿದೆ. ಈ ತಿಂಗಳಾಂತ್ಯಕ್ಕೆ ಪ್ರಧಾನಿ ಮೋದಿ ಅವರು ನಾಗಪುರ ಕಚೇರಿಗೆ ಆಗಮಿಸುವುದಾದರೆ ಸಂಘ ಸ್ವಾಗತಿಸುತ್ತದೆ. ಈ ಭೇಟಿಯ ದಿನಾಂಕ ಇನ್ನೂ ನಿರ್ಧಾರ ಆಗಿಲ್ಲ ಎಂದು ಹೊಸಬಾಳೆ ಅವರು ಪ್ರಶ್ನೆಯೊಂದಕ್ಕೆ ಮಾಹಿತಿ ನೀಡಿದರು.