ಒಮನ್​ನಿಂದ ವಾಟ್ಸ್​ಆ್ಯಪ್​ನಲ್ಲೇ ಪತ್ನಿಗೆ ತ್ರಿವಳಿ ತಲಾಕ್​ ನೀಡಿದ 62 ವರ್ಷದ ವ್ಯಕ್ತಿ!

>

ಹೈದರಾಬಾದ್​: ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿರುವ 62 ವರ್ಷದ ವ್ಯಕ್ತಿ ವಾಟ್ಸ್​ಆ್ಯಪ್​ ಮೂಲಕ 29 ವರ್ಷದ ಪತ್ನಿಗೆ ತ್ರಿವಳಿ ತಲಾಕ್​ ನೀಡಿದ್ದು, ಸಂತ್ರಸ್ತೆ ನ್ಯಾಯಕ್ಕಾಗಿ ವಿದೇಶಾಂಗ ಸಚಿವಾಲಯದ ಮೊರೆ ಹೋಗಿದ್ದಾಳೆ.

ಈ ಕುರಿತು ಸಂತ್ರಸ್ತೆ ಎಎನ್​ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದು, ಒಮನ್​ನಲ್ಲಿ ಜೀವನ ನಡೆಸುತ್ತಿದ್ದ ವ್ಯಕ್ತಿಯೊಂದಿಗೆ ಮೇ 2017ರಲ್ಲಿ ನನ್ನ ವಿವಾಹವಾಗಿತ್ತು. ಒಂದು ವರ್ಷ ನಾನು ಆತನ ಜತೆ ಒಮನ್​ನಲ್ಲೇ ಇದ್ದೆ. ಅಲ್ಲಿಗೆ ಹೋದ ನಂತರ ಪತಿ ನನ್ನ ಮೇಲೆ ದೌರ್ಜನ್ಯ ಎಸಗಲು ಆರಂಭಿಸಿದರು. ಆದರೆ, ಎಲ್ಲವನ್ನೂ ಸಹಿಸಿಕೊಂಡು ಪತಿ ಜತೆ ಸಂಸಾರ ಮುಂದುವರಿಸಿದೆ ಎಂದರು.

ಕೆಲ ದಿನಗಳಲ್ಲೇ ನಮಗೆ ಮಗು ಆಯಿತು. ಆದರೆ, ಅನಾರೋಗ್ಯದಿಂದ ಮಗು ಮೃತಪಟ್ಟಿತು. ಆಗಿನಿಂದಲೂ ನನ್ನ ಪತಿ ನನ್ನನ್ನು ಬಿಡುವುದಾಗಿ ಹೇಳುತ್ತಿದ್ದರು ಎಂದು ವಿವರಿಸಿದ್ದಾರೆ.

ಜುಲೈ 30ರಂದು ವೈದ್ಯಕೀಯ ಚಿಕಿತ್ಸೆಗೆ ನನ್ನನ್ನು ಅಮ್ಮನ ಮನೆಗೆ ಕಳುಹಿಸಿದ್ದರು. ಆದರೆ, ಇಲ್ಲಿಗೆ ಬಂದ ನಂತರ ಆಗಸ್ಟ್​ 12 ರಂದು ವಾಟ್ಸ್​ಆ್ಯಪ್​ ಮೂಲಕ ತ್ರಿವಳಿ ತಲಾಕ್​ ನೀಡಿದ್ದಾರೆ. ಇದಾದ ನಂತರ ನಾನು ಎಷ್ಟು ಬಾರಿ ಕರೆ ಮಾಡಿದರೂ ಉತ್ತರಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಸಂತ್ರಸ್ತೆ ನ್ಯಾಯಕ್ಕಾಗಿ ವಿದೇಶಾಂಗ ಸಚಿವಾಲಯಕ್ಕೆ ಅಂಗಲಾಚಿದ್ದು, ದಯವಿಟ್ಟು ನನಗೆ ಸಹಾಯ ಮಾಡಿ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಅವರಿಗೆ ಮನವಿ ಮಾಡಿದ್ದಾರೆ.

ಇಂಥ ವ್ಯಕ್ತಿಗಳು ಬಡ ಮಹಿಳೆಯರ ಜೀವನದ ಜತೆ ಆಟವಾಡುತ್ತಿದ್ದಾರೆ. ಮೊದಲು ಮದುವೆಯಾಗಿ ನಂತರ ತಲಾಕ್ ನೀಡುತ್ತಾರೆ. ನನಗೀಗ ಯಾವುದೇ ಬೆಂಬಲವಿಲ್ಲ. ನಾನು ಎಲ್ಲಿ ಹೋಗಲಿ ಎಂದು ಮಹಿಳೆ ಕಣ್ಣೀರಿಟ್ಟಿದ್ದಾಳೆ. (ಏಜೆನ್ಸೀಸ್​)

ಹೆಣ್ಣು ಮಗು ಹೆತ್ತಳೆಂದು ಪತ್ನಿಗೆ ತಲಾಕ್​ ಕೊಟ್ಟ ಪತಿ