ತೀರ್ಪು ನೀಡಲು ಆಗದಿದ್ದರೆ ನಮಗೊಪ್ಪಿಸಿ ಅಯೋಧ್ಯೆ ವಿವಾದವನ್ನು 24 ಗಂಟೆಯಲ್ಲಿ ಇತ್ಯರ್ಥಪಡಿಸುತ್ತೇವೆ: ಯೋಗಿ ಆದಿತ್ಯನಾಥ್​

ಲಖನೌ: ಶೀಘ್ರವಾಗಿ ಅಯೋಧ್ಯೆ ವಿವಾದವನ್ನು ಬಗೆಹರಿಸುವ ಕಡೆ ಸುಪ್ರೀಂ ಕೋರ್ಟ್​ ಕೆಲಸ ಮಾಡಬೇಕು. ತೀರ್ಪು ನೀಡಲು ಅನಗತ್ಯವಾಗಿ ವಿಳಂಬ ಮಾಡಿದ್ದಲ್ಲಿ ಕೋರ್ಟ್​ ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ತಿಳಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋರ್ಟ್​ ಶೀಘ್ರವಾಗಿ ತೀರ್ಪು ನೀಡಬೇಕೆಂದು ಹೇಳಬಯಸುತ್ತೇನೆ. ಒಂದು ವೇಳೆ ತೀರ್ಪು ನೀಡಲು ಆಗದಿದ್ದರೆ, ಪ್ರಕರಣವನ್ನು ನಮಗೊಪ್ಪಿಸಿ, ರಾಮ ಜನ್ಮಭೂಮಿಯ ವಿವಾದವನ್ನು ಕೇವಲ 24 ಗಂಟೆಗಳಲ್ಲಿ ಇತ್ಯರ್ಥಪಡಿಸುತ್ತೇವೆ ಎಂದು ಹೇಳಿದರು.

ಜನರು ನಂಬಿಕೆಯ ಸಂಕೇತವಾಗಿರುವ ರಾಮ ಜನ್ಮಭೂಮಿಯ ವಿವಾದವನ್ನು ಶೀಘ್ರವಾಗಿ ಬಗೆಹರಿಸಿ ಲಕ್ಷಾಂತರ ಜನರಿಗೆ ನ್ಯಾಯ ಒದಗಿಸಿಕೊಡಲಿ ಎಂಬ ವಿಶ್ವಾಸದೊಂದಿಗೆ ನಾವು ಸುಪ್ರೀಂ ಕೋರ್ಟ್​ಗೆ ಮನವಿ ಮಾಡಿದೆವು, ಅನಗತ್ಯ ವಿಳಂಬದಿಂದ ಜನರ ತಾಳ್ಮೆ, ನಂಬಿಕೆ ಹಾಗೂ ಕಾಳಜಿಯಲ್ಲಿ ಬಿರುಕು ಮೂಡುತ್ತಿದೆ ಎಂದರು.

ಕಾಂಗ್ರೆಸ್​ಗೆ ಅಯೋಧ್ಯೆ ವಿವಾದ ಬಗೆಹರಿಯುವುದು ಬೇಕಾಗಿಲ್ಲ ಎಂದು ಆರೋಪಿಸಿದ ಯೋಗಿ ಅವರು ಈಗಾಗಲೇ ತ್ರಿವಳಿ ತಲಾಖ್​ ನಿಷೇಧ ಜಾರಿಯಾಗಿದೆ. ಒಂದು ವೇಳೆ ಅಯೋಧ್ಯೆ ವಿವಾದ ಬಗೆಹರಿದರೆ ಭಾರತದಲ್ಲಿರುವ ಪ್ರಚೋದನಾತ್ಮಕ ರಾಜಕೀಯ ಶಾಶ್ವತವಾಗಿ ಕೊನೆಗೊಳ್ಳುತ್ತದೆ ಎಂದು ತಿಳಿಸಿದರು. (ಏಜೆನ್ಸೀಸ್​)