ಯಡಿಯೂರಪ್ಪನವರಿಗೆ ರೆಸ್ಟ್​ ಕೊಡಿ, ಮಧು ಬಂಗಾರಪ್ಪನವರನ್ನು ಗೆಲ್ಲಿಸಿ ಎಂದ ಸಚಿವ ಡಿ.ಕೆ.ಶಿವಕುಮಾರ್​

ಶಿವಮೊಗ್ಗ: ಜೆಡಿಎಸ್​-ಕಾಂಗ್ರೆಸ್​ ಕಿತ್ತಾಟದಿಂದ ಬಿಜೆಪಿ ಉದ್ಧಾರವಾಗಿದೆ. ಆ ಪಕ್ಷ ಕೇವಲ ಸುಳ್ಳುಗಳ ಮೇಲೆ ಚುನಾವಣೆ ಮಾಡುತ್ತಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್​ ಹೇಳಿದರು.

ತೀರ್ಥಹಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನೂರು ಸುಳ್ಳು ಹೇಳಿ ಮತಯಾಚನೆ ಮಾಡುತ್ತಿದೆ. ಬಿಜೆಪಿ ಆರ್ಭಟ ನಿಲ್ಲಿಸಬೇಕು ಎಂದರೆ ಒಟ್ಟಾಗಿ ಗೆಲ್ಲಬೇಕು. ರಾಹುಲ್​ ಗಾಂಧಿ ಪ್ರಧಾನಿಯಾಗುವುದಕ್ಕೆ ಎಚ್​.ಡಿ.ದೇವೇಗೌಡರೂ ಒಪ್ಪಿದ್ದಾರೆ ಎಂದು ತಿಳಿಸಿದರು.

ಮಧುಬಂಗಾರಪ್ಪ ಟಿಕೆಟ್​ ಕೇಳಿಲ್ಲ
ಮಧು ಬಂಗಾರಪ್ಪನವರು ಟಿಕೆಟ್​ ಬೇಕು ಎಂದು ಅರ್ಜಿ ಹಾಕಿಲ್ಲ. ನಾವೇ ಅವರ ಬಳಿ ಮಾತನಾಡಿ ಒಪ್ಪಿಸಿದ್ದೇವೆ. ಕಳೆದ ಉಪಚುನಾವಣೆಯಲ್ಲಿ ಅವರು ತರಾತುರಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 13 ದಿನ ಪ್ರಚಾರ ಮಾಡಿದ 50 ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಈ ಬಾರಿ ಮಧು ಬಂಗಾರಪ್ಪನವರನ್ನು ಗೆಲ್ಲಿಸುತ್ತೇವೆ. ಭದ್ರಾವತಿ, ತೀರ್ಥಹಳ್ಳಿ ಕಾಂಗ್ರೆಸ್​ ಮುಖಂಡರ ಜತೆ ಈಗಾಗಲೇ ಮಾತನಾಡಿದ್ದೇವೆ ಎಂದರು.

ಯಡಿಯೂರಪ್ಪನವರಿಗೆ ರೆಸ್ಟ್​ ಬೇಕು
ಬಿ.ಎಸ್​.ಯಡಿಯೂರಪ್ಪನವರಿಗೆ ಇನ್ನು ರೆಸ್ಟ್​ ಅಗತ್ಯವಿದೆ. ಈ ಬಾರಿ ಜನರು ಕೊಡುತ್ತಾರೆ ಎಂದು ನಂಬಿಕೆಯಿದೆ ಎಂದು ಡಿ.ಕೆ.ಶಿವಕುಮಾರ್​ ಹೇಳಿದರು.

ಯಡಿಯೂರಪ್ಪನವರಿಗೆ ಬಿಜೆಪಿ ಕೇಂದ್ರ ನಾಯಕರೇ ಇನ್ನು ರೆಸ್ಟ್​ ನೀಡಲಿದ್ದಾರೆ. ಇದು ಬದಲಾವಣೆಯ ಕಾಲ. ಈ ಬಾರಿ ನಿಮ್ಮ ಸೇವೆಗೆ ಮಧು ಬಂಗಾರಪ್ಪನವರಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.
ನೂರು ಜನ ಡಿಕೆಶಿ ಬಂದರೂ ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿರುವ ಆಯನೂರು ಮಂಜುನಾಥ್​ಗೆ ತಿರುಗೇಟು ನೀಡಿದ ಅವರು, ಇವರಿಗೆಲ್ಲ ನಾವು ಉತ್ತರ ನೀಡುವುದಿಲ್ಲ. ನಮ್ಮ ಹುಡುಗರು ನೀಡುತ್ತಾರೆ. ಇದೇ ಮಾತನ್ನು ಯಡಿಯೂರಪ್ಪ, ಈಶ್ವರಪ್ಪ, ರಾಘವೇಂದ್ರ ಅವರು ಹೇಳಲಿ ನೋಡೋಣ. 3 ನೇ ತಾರೀಖಿನವರೆಗೆ ಸಮಯ ನೀಡುತ್ತೇನೆ ಎಂದು ಸವಾಲು ಹಾಕಿದರು.

ಭಿನ್ನಾಭಿಪ್ರಾಯವಿಲ್ಲ
ಶಿವಮೊಗ್ಗದಲ್ಲಿ ಸದ್ಯ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಎಲ್ಲರೂ ಒಟ್ಟಾಗಿರಬೇಕು ಎಂದು ಸೂಚನೆ ನೀಡಿದ್ದೇನೆ. ಆಕಸ್ಮಾತ್​ ಏನಾದರೂ ಇದ್ದರೆ ಬೇರೆ ಕಾರಿನಲ್ಲಿ ಅವರು ಸಾಗಲಿ. ನನ್ನ ಗುರಿ ಜಯದ ಕಡೆಗೆ ಮಾತ್ರ. ಬಂಗಾರಪ್ಪನವರ ಯೋಜನೆಗಳನ್ನು ಜಿಲ್ಲೆಯ ಜನರು ಇನ್ನೂ ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಈ ಬಾರಿ ಮಧು ಅವರನ್ನು ಗೆಲ್ಲಿಸುವ ಭರವಸೆಯಿದೆ ಎಂದರು.

One Reply to “ಯಡಿಯೂರಪ್ಪನವರಿಗೆ ರೆಸ್ಟ್​ ಕೊಡಿ, ಮಧು ಬಂಗಾರಪ್ಪನವರನ್ನು ಗೆಲ್ಲಿಸಿ ಎಂದ ಸಚಿವ ಡಿ.ಕೆ.ಶಿವಕುಮಾರ್​”

Leave a Reply

Your email address will not be published. Required fields are marked *