ಮೃತರ ಕುಟುಂಬಕ್ಕೆ ಶೀಘ್ರ ಪರಿಹಾರ ನೀಡಿ

ಕೊಳ್ಳೇಗಾಲ: ಕಾಡಂಚಿನ ಗ್ರಾಮಗಳಿಗೆ ಆನೆಗಳ ಹಿಂಡು ಬಾರದಂತೆ ಎಚ್ಚರ ವಹಿಸಬೇಕು ಹಾಗೂ ತಾಲೂಕಿನಲ್ಲಿ ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಶೀಘ್ರದಲ್ಲೇ ಪರಿಹಾರ ನೀಡುವಂತೆ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಡಿಎಫ್‌ಒ ಏಡುಕೊಂಡಲು ಅವರಿಗೆ ಹನೂರು ಶಾಸಕ ಆರ್.ನರೇಂದ್ರ ಸೂಚನೆ ನೀಡಿದರು.

ಪಟ್ಟಣದ ಪಿಡಬ್ಲ್ಯುಡಿ ಅತಿಥಿಗೃಹದಲ್ಲಿ ಭಾನುವಾರ ಕಾಡಾನೆ ಹಾವಳಿ ತಡೆಯುವ ಸಂಬಂಧ ಕರೆಯಲಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ತುರ್ತು ಸಭೆಯಲ್ಲಿ ಸೂಚನೆ ನೀಡಿದರು.

ಮಹದೇಶ್ವರ ಬೆಟ್ಟದ ಸುತ್ತಮುತ್ತ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಮಾದಪ್ಪನ ಭಕ್ತರು ಮತ್ತು ಸಾರ್ವಜನಿಕರ ಮೇಲೆ ಆನೆಗಳು ದಾಳಿ ಮಾಡುತ್ತಿದ್ದು ಮೂವರು ಮೃತಪಟ್ಟಿದ್ದಾರೆ. ಕೂಡಲೇ ಮೃತರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಹೇಳಿದರು.

ಅಲ್ಲದೇ, ಮುಂದೆ ಇಂತಹ ಘಟನೆಗಳು ನಡೆಯದಂತೆ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು. ತಾಲೂಕಿನ ಸಿಂಗಾನಲ್ಲೂರು, ಮತ್ತೀಪುರ, ಗುಂಡಾಲ್ ಜಲಾಶಯದ ಸುತ್ತಮುತ್ತ ಬೆಳೆದಿರುವ ಬಾಳೆ, ಜೋಳ ಇನ್ನಿತರ ಬೆಳೆಗಳನ್ನು ಆನೆಗಳ ಹಿಂಡು ತಿಂದು ಹಾಳು ಮಾಡಿವೆ. ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿರುವುದರಿಂದ ಅವರಿಗೂ ಸೂಕ್ತ ಬೆಳೆ ನಷ್ಟ ಪರಿಹಾರ ನೀಡುವಂತೆ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಎಫ್‌ಒ ಏಲುಕೊಂಡಲು, ತಾಲೂಕಿನಲ್ಲಿ ಆನೆ ದಾಳಿಯಿಂದ ಮೃತಪಟ್ಟ ಮೂವರಿಗೆ ಪರಿಹಾರ ಕೊಡಲು ತುರ್ತು ಕ್ರಮ ವಹಿಸಲಾಗಿದೆ. ಇದೇ ರೀತಿ ಕಾಡಂಚಿನ ಪ್ರದೇಶದ ಜಮೀನುಗಳಿಗೆ ಆನೆಗಳು ನುಗ್ಗಿ ಬೆಳೆ ನಷ್ಟ ಉಂಟು ಮಾಡಿರುವ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಕಾಡಿನಿಂದ ನಾಡಿಗೆ ಆನೆಗಳು ಬಾರದಂತೆ ಈವರೆಗೆ ಮಾಡಿರುವ ಆನೆ ಕಂದಕ, ಸೋಲಾರ್ ತಂತಿ ಅಳವಡಿಕೆ ಕಾರ್ಯಕ್ರಮಗಳು ಪ್ರಯೋಜವಾಗಿಲ್ಲ. ಇದೀಗ ಹೊಸ ತಂತ್ರವೊಂದನ್ನು ಇಲಾಖೆ ಕಂಡುಕೊಂಡಿದೆ.

ಹೊಸದಾಗಿ, ಸೋಲಾರ್ ಅಲರಾಂ ಅಳವಡಿಸುವ ಕೆಲಸ ಶುರು ಮಾಡಲಾಗಿದೆ. ಇದರಿಂದ ರೈತರಿಗೆ ಬಹಳ ಅನುಕೂಲವಾಗಿದೆ. ಕಾಡಿನಿಂದ ಹೊರ ಬರುವ ಆನೆಗಳು ಸೋಲಾರ್ ಅಲರಾಂ ಮುಟ್ಟುತ್ತಿದ್ದಂತೆ ಗಂಟೆ ಶಬ್ಧ ಕೇಳಿ ಬರುವಂತಹ ತಂತ್ರಜ್ಞಾನ ಮಾಡಲಾಗಿದೆ. ಇದರ ಶಬ್ಧಕ್ಕೆ ಅವುಗಳು ಹೆದರಿ ಕಾಡಿಗೆ ವಾಪಸಾಗಲಿವೆ ಎಂದು ಹೇಳಿದರು. ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿಂಗಾನಲ್ಲೂರು ಡಿ.ದೇವರಾಜು, ಮುಖಂಡರಾದ ದೊಡ್ಡಿಂದುವಾಡಿ ರಾಚಪ್ಪಾಜಿ, ನಾಗರಾಜು, ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

 

 

Leave a Reply

Your email address will not be published. Required fields are marked *