ಕೋಲಾರ: ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣವನ್ನು ಮಕ್ಕಳಿಗೆ ದೊರಕಿಸಿದಾಗ ದಾಖಲಾತಿ ಸಂಖ್ಯೆ ಹೆಚ್ಚಾಗುತ್ತದೆ. ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಇಲಾಖಾಧಿಕಾರಿಗಳು ಪ್ರಚಾರ ಮಾಡಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲೂಕಿನ ನಾಯಕರಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸರ್ಕಾರಿ ಶಾಲಾ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಕಟ್ಟ ಕಡೆಯ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆತಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ, ಸರ್ಕಾರಿ ಶಾಲೆಗಳಿಗೆ ಬಡ ವಿದ್ಯಾರ್ಥಿಗಳೇ ದಾಖಲಾಗುತ್ತಾರೆ, ಇದರಿಂದಾಗಿ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನಹರಿಸಬೇಕು. ವಿದ್ಯಾರ್ಥಿಗಳೂ ಸಹ ಸರ್ಕಾರದ ಶೈಕ್ಷಣಿಕ ಸೌಲಭ್ಯಗಳನ್ನು ಬಳಸಿಕೊಂಡು ಒಳ್ಳೆಯ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಅತ್ಯುನ್ನತ ಹುದ್ದೆಗಳಿಗೆ ಹೋಗಬೇಕು ಎಂದು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದಂತಹ ವಿದ್ಯಾರ್ಥಿಗಳೇ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೊಬೈಲ್, ಟಿವಿ ಕಡೆ ಹೆಚ್ಚು ಗಮನ ಕೊಡದೆ ಪುಸ್ತಕಗಳು ಓದುವ ಕಡೆ ಗಮನಹರಿಸಬೇಕು. ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕೃತಿಕ, ಕಲೆಗೆ ಹೆಚ್ಚು ಆದ್ಯತೆ ಕೊಡುವ ಮೂಲಕ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ನಂತರ ತಾಲೂಕಿನ ಮುದುವಾಡಿ ಸರ್ಕಾರಿ ಆಸ್ಪತ್ರೆ ಮತ್ತು ಪಶು ಚಿಕಿತ್ಸಾಲಯಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಣ್ಣಯ್ಯ, ಮುದುವಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಹರೀಶ್, ಮುಖ್ಯ ಇಂಜಿನಿಯರ್ ಶ್ರೀನಿವಾಸ್, ಜಿಲ್ಲಾ ಪಂಚಾಯತಿ ಇಂಜಿನಿಯರ್ ಶಿವಕುಮಾರ್, ಐತರಾಸನಹಳ್ಳಿ ಗ್ರಾಪಂ ಅಭಿವೃದ್ದಿ ಅಧಿಕಾರಿ ಸತೀಶ್, ಮುಖಂಡರಾದ ಬ್ಯಾಲಹಳ್ಳಿ ಶಂಕರೇಗೌಡ, ಮುದುವಾಡಿ ಗಿರೀಶ್, ರಾಮು, ಮಣಿಘಟ್ಟ ಮಂಜು, ಐತರಾಸನಹಳ್ಳಿ ಸಂತೋಷ್ ಮತಿತರರು ಹಾಜರಿದ್ದರು.