ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಿ

ಹಿರೇಕೆರೂರ: ಸರ್ಕಾರದ 14ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಸಂಪೂರ್ಣವಾಗಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಬಳಸಬೇಕು. ಈ ಬಗ್ಗೆ ಸರ್ಕಾರವೇ ಸ್ಪಷ್ಟ ನಿರ್ದೇಶನ ನೀಡಿದ್ದು, ಇದಕ್ಕೆ ತಪ್ಪಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಠಿಣ ಕೈಗೊಳ್ಳಲಾಗುವುದು ಎಂದು ಶಾಸಕ ಬಿ.ಸಿ. ಪಾಟೀಲ ಎಚ್ಚರಿಸಿದರು.

ಪಟ್ಟಣದ ತಾ.ಪಂ. ಸಭಾಭವನದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸೋಮವಾರ ಜರುಗಿದ ರಟ್ಟಿಹಳ್ಳಿ, ಹಿರೇಕೆರೂರ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರ ಸಭೆಯಲ್ಲಿ ಅವರು ಮಾತನಾಡಿದರು.

ಸತತ 5 ವರ್ಷಗಳಿಂದ ಬರಗಾಲ ಆವರಿಸಿದ್ದು, ಪ್ರಸಕ್ತ ಸಾಲಿನಲ್ಲಿ ಕುಡಿಯುವ ನೀರಿಗಾಗಿ ಈಗಾಗಲೇ 130 ಬೋರ್​ವೆಲ್ ಕೊರೆಸಲಾಗಿದೆ. 75 ಖಾಸಗಿ ರೈತರ ಬೋರ್​ವೆಲ್​ಗಳಿಂದ ಹಾಗೂ ಟ್ಯಾಂಕರ್​ಗಳಿಂದ ನೀರು ಪೂರೈಸಲಾಗುತ್ತಿದೆ. ಆದರೂ ನೀರು ಸಾಕಾಗುತ್ತಿಲ್ಲ. ನೀರಿನ ಸಮಸ್ಯೆ ಎದುರಾಗುತ್ತಿದ್ದು, ಮಳೆ ಬರುವವರೆಗೆ ಸಾರ್ವಜನಿಕರು ನೀರನ್ನು ಮಿತವ್ಯಯವಾಗಿ ಬಳಸಬೇಕು. ಈ ಬಗ್ಗೆ ಗ್ರಾ.ಪಂ. ಅಧ್ಯಕ್ಷರು, ಪಿಡಿಒ ಜನರಿಗೆ ಮನವರಿಕೆ ಮಾಡಬೇಕು ಎಂದರು.

ನಿಷ್ಪಕ್ಷಪಾತ ವರದಿ ತಯಾರಿಸಿ: ಕುಡಿಯುವ ನೀರಿಗಾಗಿ ಕೊರೆಸಿದ ಕೊಳವೆ ಬಾವಿಗಳ ಕುರಿತು ಇಂಜಿನಿಯರ್ ಮತ್ತು ಪಿಡಿಒ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ನಿಷ್ಪಕ್ಷಪಾತ ವರದಿ ತಯಾರಿಸಿ ನನ್ನ ಗಮನಕ್ಕೆ ತರಬೇಕು. ನಂತರ ಬೋರ್​ವೆಲ್ ವಾಹನದ ಮಾಲೀಕರಿಗೆ ಹಣ ಸಂದಾಯ ಮಾಡಬೇಕು. ಇದರಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾ.ಪಂ. ಇಒ ಸಂತೋಷಕುಮಾರ ತಳಕಲ್, ರಟ್ಟಿಹಳ್ಳಿ, ಹಿರೇಕೆರೂರು ತಾಲೂಕಿನ ಗ್ರಾ.ಪಂ.ಗಳ ಪಿಡಿಒ ಹಾಗೂ ಅಧ್ಯಕ್ಷರು ಇದ್ದರು.

Leave a Reply

Your email address will not be published. Required fields are marked *