ಲಕ್ಷ್ಮೇಶ್ವರ: ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ಕಾಮಗಾರಿಗಳ ಬಗ್ಗೆ ಬೇಡಿಕೆ ಇದ್ದು, ಅವುಗಳನ್ನು ಹಂತ ಹಂತವಾಗಿ ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ತಾಲೂಕಿನ ಪು. ಬಡ್ನಿ ವ್ಯಾಪ್ತಿಯ ಲಕ್ಷ್ಮೇಶ್ವರ- ದೇವಿಹಾಳ ಜಿಲ್ಲಾ ಮುಖ್ಯ ರಸ್ತೆಯ ಸೇತುವೆ ದುರಸ್ತಿ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಮುಖ್ಯ ರಸ್ತೆಯಲ್ಲಿರುವ ಸೇತುವೆ ಮಳೆಯಿಂದ ಹದಗೆಟ್ಟು ಹೋಗಿದ್ದು, ಇದರ ಹಾಗೂ ಈ ರಸ್ತೆ ಸುಧಾರಣೆಗೆ ಬೇಡಿಕೆ ಇತ್ತು, ಇದೀಗ 85 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸುತ್ತಿದ್ದು, ಇದರ ಸಂಪೂರ್ಣ ದುರಸ್ತಿಗೆ ಹೆಚ್ಚಿನ ಹಣಕಾಸಿನ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಸರ್ಕಾರ ಅನುದಾನ ನೀಡಿದರೆ ಅದನ್ನು ಈಡೇರಿಸುತ್ತೇವೆ. ಈಗಾಗಲೇ ಲಕ್ಷ್ಮೇಶ್ವರ-ಗದಗ ಪ್ರಮುಖ ರಸ್ತೆಯಲ್ಲಿ ಆಗಬೇಕಾಗಿರುವ ದುರಸ್ತಿ ಕಾಮಗಾರಿಗೆ ಒಟ್ಟು 8 ಕೋಟಿ ರೂ. ಅನುದಾನ ಮಂಜೂರಿಯಾಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ. ತೊಳಲಿ ರಸ್ತೆಗೆ 1 ಕೋಟಿ ರೂ. ಮಂಜೂರಿಯಾಗಿದ್ದು ಅದನ್ನು ಸಹ ಪ್ರಾರಂಭಿಸಲಾಗುವುದು. ಬೆಳಗಾವಿ ಅಧಿವೇಶನದಲ್ಲಿ ಪ್ರಜಾ ಸೌಧಕ್ಕಾಗಿ ಬೇಡಿಕೆ ಇಟ್ಟಿದ್ದು,8.60 ಕೋಟಿ ರೂ. ವೆಚ್ಚದಲ್ಲಿ ಪ್ರಜಾಸೌಧ ನಿರ್ವಣಕ್ಕಾಗಿ ಪಟ್ಟಣದ ದೊಡ್ಡೂರು ರಸ್ತೆಯಲ್ಲಿನ ಜಾಗ ಗುರುತಿಸಲಾಗಿದೆ. ಶೀಘ್ರ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದರು.
ಪು.ಬಡ್ನಿ ಗ್ರಾ.ಪಂ. ಅಧ್ಯಕ್ಷ ಪ್ರೇಮವ್ವ ಹರಿಜನ, ಸುಭಾಸ ಬಟಗುರ್ಕಿ, ಶೇಖಣ್ಣ ಕರಿಯಣ್ಣವರ, ಅಶೋಕ ಬಟಗುರ್ಕಿ, ಪರಮೇಶರಪ್ಪ ಬಟಗುರ್ಕಿ, ವಾಗೀಶ ಬಟಗುರ್ಕಿ, ಮುತ್ತಣ್ಣ ಚೋಟಗಲ್, ಬಿ.ಬಿ. ಬಟಗುರ್ಕಿ, ಶಿವಾನಂದ ಹರಿಜನ, ಕಲ್ಲಪ್ಪ ಹಡಪದ, ಪರಮೇಶ್ವರಪ್ಪ ಚೋಟಗಲ್, ಅಶೋಕ ಮರಿಹೊಳಣ್ಣವರ, ಪ್ರಶಾಂತ ಹೊಸಮನಿ, ಕಿರಣ ಮಹಾಂತಶೆಟ್ಟರ, ರಾಜು ಚೋಟಗಲ್, ವಿಶಾಲ ಬಟಗುರ್ಕಿ, ತಾ.ಪಂ. ಇಒ ಕೃಷ್ಣಪ್ಪ ಧರ್ಮರ, ಲೋಕೋಪಯೋಗಿ ಇಲಾಖೆ ಎಇಇ ಫಕೀರೇಶ, ಎಇ ಮಹೇಶ ಅಥಣಿ, ಪಿಡಿಒ ಬಿ.ಬಿ. ಬಳೂಟಗಿ ಇದ್ದರು.