ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ತನಿಖೆ ನಡೆಸುವ ಸಂಬಂಧ ಪೂರ್ವಾನುಮತಿ ವರದಿ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಯು ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿದೆ.
ನಾಲ್ಕು ವರ್ಷದ ಹಿಂದೆ ನಡೆದಿರುವ ಪ್ರಕರಣದಲ್ಲಿ ಅಂದು ಕಡತ ನಿರ್ವಹಿಸಿದ್ದ ನಾಲ್ವರು ಕೆಎಎಸ್ ಅಧಿಕಾರಿಗಳು ಹಾಗೂ 11 ಮಂದಿ ಪ್ರಾಧಿಕಾರದ ಸಿಬ್ಬಂದಿಗೆ ತನಿಖೆಯ ಬಿಸಿ ತಟ್ಟಿದೆ. ಬದಲಿ ನಿವೇಶನ ಹಂಚಿಕೆ ಹಾಗೂ ಅರ್ಜಿದಾರರಿಗೆ ಲಾಭದಾಯಕ ಸೈಟ್‌ಗಳನ್ನು ವಿತರಿಸಿ ಸಂಸ್ಥೆಗೆ ಕೋಟ್ಯಂತರ ರೂ. ನಷ್ಟ ಉಂಟು ಮಾಡಿದ್ದ ಪ್ರಕರಣದಲ್ಲಿ ಈವರೆಗೂ ಪೂರ್ವಾನುಮತಿ ವರದಿ ಸಲ್ಲಿಸಲು ಪ್ರಾಧಿಕಾರ ವಿಲವಾಗಿದೆ. ಈ ಬಾರಿ ಖುದ್ದು ಆಯುಕ್ತರಿಗೆ ಪತ್ರ ಬರೆದಿರುವ ನಗರಾಭಿವೃಧಿ ಇಲಾಖೆಯು, ಶೀಘ್ರವೇ ವರದಿ ರವಾನಿಸುವಂತೆ ತಾಕೀತು ಮಾಡಿದೆ.
ಏನಿದು ಪ್ರಕರಣ?:
ಬಿಟಿಎಂ ಬಡಾವಣೆ ರಚಿಸಲು ಆಗಿನ ಸಿಟಿ ಡೆವಲಪ್ಮೆಂಟ್ ಟ್ರಸ್ಟ್ ಬೋರ್ಡ್ (ಸಿಐಟಿಬಿ) ಬೆಂಗಳೂರು ದಕ್ಷಿಣ ತಾಲೂಕಿನ ಮಡಿವಾಳ ಗ್ರಾಮದ ಸರ್ವೆ ನಂ.53ರಕ್ಕೆ ಸೇರಿದ 1.20 ಎಕರೆ ಜಮೀನನ್ನು ಭೂಸ್ವಾಧೀನ (1979ರಲ್ಲಿ) ಮಾಡಿಕೊಂಡಿತ್ತು. ಈ ಪೈಕಿ 33 ಗುಂಟೆ ಜಾಗಕ್ಕೆ ಹೆಚ್ಚುವರಿ ಪರಿಹಾರ ಕೋರಿ ಭೂಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರು. ನಂತರ ಕೇಸ್ ಇತ್ಯರ್ಥವಾಗಿತ್ತು. ಆ ಬಳಿಕ 20 ಗುಂಟೆ ಜಾಗವನ್ನು ಮಾತ್ರ ಪ್ರಾಧಿಕಾರಕ್ಕೆ ಪರಿತ್ಯಾಜನ ಪತ್ರದ (ರೀಕನ್ವೆ) ಮೂಲಕ ಬಿಟ್ಟುಕೊಟ್ಟು, ಇನ್ನುಳಿದ 13 ಗುಂಟೆ ಜಾಗವನ್ನು ಖಾಸಗಿ ವ್ಯಕ್ತಿಗೆ ಮಾರಾಟ ಮಾಡಲಾಗಿತ್ತು.
ಆನಂತರ ರೀಕನ್ವೆ ಮಾಡಿದ್ದ ಜಾಗಕ್ಕೆ ಮತ್ತೆ ಪರಿಹಾರ ಪಡೆಯಲು ಖಾಸಗಿ ವ್ಯಕ್ತಿಗಳು ಹಾಗೂ ಕೆಲ ಅಧಿಕಾರಿ/ಸಿಬ್ಬಂದಿ ಕಡತ ಸೃಷ್ಟಿಸಿದ್ದರು. 15,000 ಚದರ ಅಡಿ ಜಾಗಕ್ಕೆ ಪ್ರತಿಷ್ಠಿತ ಬಡಾವಣೆಗಳಲ್ಲಿ ಕಡಿಮೆ ಬೆಲೆ ನಮೂದಿಸಿ ನಿಯಮ ಬಾಹಿರವಾಗಿ ಬದಲಿ ಸೈಟ್ ಹಂಚಿಕೆ ಮಾಡಲಾಗಿತ್ತು. ಜತೆಗೆ ಮೂಲೆ ನಿವೇಶನವನ್ನೂ ಹರಾಜು ಹಾಕುವ ಬದಲು ಈ ಪ್ರಕರಣದಲ್ಲಿ ಪರಿಹಾರದ ಸೈಟ್ ಆಗಿ ಹಂಚಿಕೆ ಮಾಡಿದ್ದರಿಂದ, ಅಂದಾಜು 40-50 ಕೋಟಿ ರೂ. ಪ್ರಾಧಿಕಾರಕ್ಕೆ ನಷ್ಟವಾಗಿತ್ತು. ಇದರ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ತನಿಖೆಗೊಳಪಡಿಸಿದ ವೇಳೆ ತಪ್ಪು ದೃಢಪಟ್ಟಿತ್ತು. ನಂತರ ತನಿಖೆಯನ್ನು ಆಗಿನ ಎಸಿಬಿಗೆ ವಹಿಸಲಾಗಿತ್ತು. ಕೆಎಎಸ್ ಅಧಿಕಾರಿಗಳು ಸೇರಿ ಪ್ರಾಧಿಕಾರದ ಸಿಬ್ಬಂದಿ ವಿರುದ್ಧ ವಿಚಾರಣೆ ನಡೆಸಲು ಪೂರ್ವಾನುಮತಿ ಕೋರಿ ನಗರಾಭಿವೃಧ್ಧಿ ಇಲಾಖೆಯು 20224 ೆ.3ರಂದೇ ಬಿಡಿಎ ಆಯುಕ್ತರಿಗೆ ಪತ್ರ ಬರೆದಿತ್ತು. ಈವರೆಗೂ ಮಾರುತ್ತರ ನೀಡದ ಕಾರಣ ಈಗ ಮತ್ತೊಮ್ಮೆ ವರದಿ ಸಲ್ಲಿಸಲು ಸೂಚಿಸಲಾಗಿದೆ.
15 ಅಧಿಕಾರಿ/ಸಿಬ್ಬಂದಿ ವಿರುದ್ಧ ಆರೋಪ:
ಪ್ರಕರಣದಲ್ಲಿ ನಾಲ್ವರು ಕೆಎಎಸ್ ಅಧಿಕಾರಿಗಳಾದ ವಸಂತಕುಮಾರ್, ಎನ್.ಸಿ.ವೆಂಕಟರಾಜು, ಬಿ.ಸುಧಾ, ಎಚ್.ಎಸ್.ಸತೀಶ್‌ಬಾಬು ಭಾಗಿಯಾಗಿದ್ದರು. ಜತೆಗೆ ಪ್ರಾಧಿಕಾರದ ಸಿಬ್ಬಂದಿಗಳಾದ ಜಾನಕಮ್ಮ, ಗಂಗಾಧರ್ (ಇಬ್ಬರೂ ಮೇಲ್ವಿಚಾರಕರು), ಟಿ.ಮೂರ್ತಿ, ಬಯ್ಯರೆಡ್ಡಿ (ಇಬ್ಬರೂ ಎ್ಡಿಎ), ಮುನಿಬಚ್ಚೇಗೌಡ (ಎಸ್‌ಡಿಎ), ಎನ್.ಬಿ.ಜಯರಾಂ (ವಿಷಯ ನಿರ್ವಾಹಕ), ಚಂದ್ರಧರ (ಲೆಕ್ಕಾಧಿಕಾರಿ), ಡಿ.ಎಸ್.ಆಶಾ (ಲೆಕ್ಕಪತ್ರ ಅಧೀಕ್ಷಕಿ), ಪ್ರಸಾದ್ (ಸಹಾಯಕ ಇಂಜಿನಿಯರ್), ಹೊನ್ನರಾಜ್ (ಎಇಇ) ಹಾಗೂ ಸುಧೀಂದ್ರ (ಕಾನೂನು ಅಧಿಕಾರಿ-2) ವಿರುದ್ಧ ತನಿಖೆಗೆ ಆದೇಶವಾಗಿತ್ತು. ಈ ಪೈಕಿ ಎನ್.ಬಿ.ಜಯರಾಂ, ಮುನಿಬಚ್ಚೇಗೌಡ ಹಾಗೂ ಚಂದ್ರಧರ ಸೇವೆಯಿಂದ ನಿವೃತ್ತರಾಗಿದ್ದಾರೆ.