ಮಾತೃಭಾಷೆ ಶಿಕ್ಷಣಕ್ಕೆ ಆದ್ಯತೆ ನೀಡಿ

ಬೆಂಗಳೂರು: ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಿದರೆ ಮಕ್ಕಳು ಸುಲಭವಾಗಿ ಕಲಿಯಲು ಮತ್ತು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಮನೆಯಲ್ಲೂ ಮಾತೃಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು. ದೇಶದಲ್ಲಿರುವ 22 ಭಾಷೆಗಳು ಮಾತೃಭಾಷೆಗಳೇ ಆಗಿವೆ. ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ವಿದ್ಯಾರ್ಥಿಗಳಿಗೆ ಸುಲಭವಾಗಿ ಕಲಿಯಲು ಸಾಧ್ಯವಾಗುತ್ತದೆ. ಮಾತೃಭಾಷೆ ನಮ್ಮ ಕಣ್ಣುಗಳಿದ್ದಂತೆ ಬೇರೆ ಭಾಷೆ ಕನ್ನಡಕ ಇದ್ದಂತೆ ಎಂದರು.

ಬದುಕು ಸಾಗಿಸಲು ಬೇರೆ ಭಾಷೆಗಳು ಕಲಿಯು ವುದು ಅನಿವಾರ್ಯ. ಆದರೆ, ಇದರೊಂದಿಗೆ ಮಾತೃ ಭಾಷೆ ಮರೆಯುವುದು ಬೇಡ. ಮಾತೃ ಭಾಷೆ, ಜನ್ಮ ಭೂಮಿ, ಪಾಲಕರನ್ನು ಎಂದಿಗೂ ಮರೆಯಬಾರದು. ಆ ಎಲ್ಲ ಕಾರಣಗಳಿಂದಲೇ ಭಾರತ ವಿವಿಧತೆಯಲ್ಲಿ ಏಕತೆಯಾಗಿದೆ ಎಂದರು. ತಂತ್ರಜ್ಞಾನ ಬೆಳವಣಿಗೆ ಹೊಂದಿದ್ದರೂ ಗೂಗಲ್ ನಮ್ಮ ಗುರುಗಳನ್ನು ಮೀರಿಸಲು ಸಾಧ್ಯವಾಗುವುದಿಲ್ಲ. ಗುರುವಿಗೆ ಗೌರವ ನೀಡುವುದನ್ನು ಮರೆಯಬೇಡಿ ಎಂದು ಕಿವಿಮಾತು ಹೇಳಿದರು. ಜಂಕ್ ಫುಡ್​ಗಳ ವ್ಯಾಮೋಹ ಬಿಟ್ಟು ಬಿಡಿ. ರಾಗಿ ಮುದ್ದೆಗಿಂತ

ಉತ್ತಮ ಆಹಾರ ಬೇರೊಂದಿಲ್ಲ. ಆರೋಗ್ಯದಿಂದ ಭಾಗ್ಯವೇ ವಿನಾ ಶ್ರೀಮಂತಿಕೆಯಿಂದ ಆರೋಗ್ಯ ಖರೀದಿ ಸಾಧ್ಯವಿಲ್ಲ ಎಂಬ ಸತ್ಯವನ್ನು ಎಲ್ಲರೂ ಅರಿಯಬೇಕೆಂದು ವೆಂಕಯ್ಯನಾಯ್ಡು ಹೇಳಿದರು.

65,039 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ಪೈಕಿ 55,171 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, 166 ಪಿಎಚ್.ಡಿ, 328 ಚಿನ್ನದ ಪದಕ ಹಾಗೂ 92 ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ , ಸ್ತ್ರೀ ರೋಗ ತಜ್ಞೆ ಡಾ. ಕಾಮಿನಿ ರಾವ್, ಸಮಾಜ ಸೇವಕ ಎಸ್.ವಿ.ವಿ. ಸುಬ್ರಹ್ಮಣ್ಯ ಗುಪ್ತ ಅವರಿಗೆ ಗೌರವ ಡಾಕ್ಟ್​ರೇಟ್ ನೀಡಿ ಅಭಿನಂದಿಸಲಾಯಿತು

ರಾಜ್ಯಪಾಲ ವಿ.ಆರ್. ವಾಲಾ, ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ್, ಕುಲಸಚಿವ ಪ್ರೊ. ಬಿ.ಕೆ. ರವಿ, ಮೌಲ್ಯಮಾಪನ ಕುಲಸಚಿವ ಡಾ. ಸಿ. ಶಿವರಾಜು ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯಪಾಲ ವಾಲಾಗೆ ಪ್ಲಾಸ್ಟಿಕ್ ಬಾಟಲಿ ನೀರು!

ಸಭೆ-ಸಮಾರಂಭಗಳಲ್ಲಿ ಪ್ಲಾಸ್ಟಿಕ್ ವಸ್ತು ಮತ್ತು ಪ್ಲಾಸ್ಟಿಕ್ ಬಾಟಲಿ ನೀರು ನೀಡುವುದನ್ನು ರಾಜ್ಯ ಸರ್ಕಾರ ಬ್ಯಾನ್ ಮಾಡಿದೆ. ಆದರೆ, ರಾಜ್ಯಪಾಲರಿಗೆ ಪ್ಲಾಸ್ಟಿಕ್ ಬಾಟಲಿ ನೀರು ನೀಡುವ ಮೂಲಕ ಬೆಂವಿವಿ ಅಧಿಕಾರಿಗಳು ನಿಯಮ ಉಲ್ಲಂಘಿಸಿದ್ದಾರೆ. ಘಟಿಕೋತ್ಸವದಲ್ಲಿ ಭಾಗವಹಿಸಿದ್ದ ಬಹುತೇಕ ಜನರು ಮತ್ತು ವಿದ್ಯಾರ್ಥಿಗಳು ಕುಡಿಯಲು ನೀರು ನೀಡುವಂತೆ ಸಂಘಟಕರನ್ನು ಕೇಳಿದರು. ಪ್ಲಾಸ್ಟಿಕ್ ಬಾಟಲಿ ನೀರು ಬಳಕೆ ಮಾಡಬಾರದು ಎಂಬ ನಿಯಮವಿದೆ ಎಂದು ಸಂಘಟಕರು ನಿರಾಕರಿಸಿದರು. ವೇದಿಕೆ ಮೇಲಿದ್ದ ಅತಿಥಿಗಳಿಗೆ ಗಾಜಿನ ಲೋಟದಲ್ಲಿ ನೀರು ತಂದುಕೊಟ್ಟರು. ಆದರೆ, ರಾಜ್ಯಪಾಲರಿಗೆ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ತಂದುಕೊಟ್ಟರು. ಇದು ಸಮಾರಂಭದಲ್ಲಿ ನೆರೆದಿದ್ದವರಿಂದ ಟೀಕೆಗೆ ಗುರಿಯಾಯಿತು.

ಘನ ತ್ಯಾಜ್ಯದ ಕೋರ್ಸ್

ಬೆಂವಿವಿ ಹಲವಾರು ನೂತನ ಕೋರ್ಸ್​ಗಳನ್ನು ಪರಿಚಯಿಸುತ್ತಿದೆ. ಎಂ.ಎಸ್ಸಿ ಕೋರ್ಸ್​ನಲ್ಲಿ ಘನ ತ್ಯಾಜ್ಯ ನಿರ್ವಹಣೆ ಕೋರ್ಸ್ ಆರಂಭಿಸುತ್ತಿದೆ. ವಿಪತ್ತು ನಿರ್ವಹಣೆ, ಅಪರಾಧಶಾಸ್ತ್ರ ಮತ್ತು ವಿಧಿವಿಜ್ಞಾನ, ಗ್ರಾಫಿಕ್ ಮತ್ತು ಅನಿಮೇಷನ್, ಜಾಹೀರಾತು ಮತ್ತು ಸಾರ್ವಜನಿಕ ಸಂಪರ್ಕ, ಸಿನಿಮಾ ನಿರ್ವಣದ ಕೋರ್ಸ್​ಗಳನ್ನು ಪರಿಚಯಿಸಲು ನಿರ್ಧರಿಸಿದೆ. ಹೊಸ ಕೋರ್ಸ್​ಗಳು ಮುಂದಿನ ವರ್ಷದಿಂದಲೇ ಆರಂಭವಾಗಲಿವೆ ಎಂದು ಕುಲಪತಿ ಕೆ.ಆರ್.ವೇಣುಗೋಪಾಲ್ ತಿಳಿಸಿದರು.

Leave a Reply

Your email address will not be published. Required fields are marked *