ಸಾಲಿಗ್ರಾಮ: 12ನೇ ಶತಮಾನದಿಂದಲೂ ಅಭಿವೃದ್ಧಿ ಕಾಣದ ಮಡಿವಾಳ ಸಮಾಜಕ್ಕೆ ಒಳಮೀಸಲಾತಿ ನೀಡಿ ಸಮಾಜ ಅಭಿವೃದ್ಧಿ ಮಾಡಿ ಎಂದು ಸರ್ಕಾರವನ್ನು ಮಡಿವಾಳ ಸಮಾಜದ ಕೆ.ಆರ್.ನಗರ ತಾಲೂಕು ಅಧ್ಯಕ್ಷ ಸಿದ್ದನ ಕೊಪ್ಪಲು ಕುಮಾರ್ ಒತ್ತಾಯಿಸಿದರು.
ಭೇರ್ಯ ಗ್ರಾಮದಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹನೀಯರನ್ನು ಆಯಾ ಜಾತಿಗಳಿಗೆ ಸೀಮಿತವಾದಂತೆ ಆಚರಣೆಗಳು ಆಗುತ್ತಿರುವುದು ಬೇಸರದ ವಿಷಯ. ಬುದ್ಧ, ಬಸವಣ್ಣ, ಕನಕದಾಸ, ಡಾ.ಬಿರ್.ಅಂಬೇಡ್ಕರ್ ಅವರು ಸೇರಿದಂತೆ ಹಲವು ಮಹನೀಯರು ನೀಡಿರುವ ವಚನ, ಆದರ್ಶಗಳನ್ನು ಪ್ರತಿಯೊಬ್ಬರೂ ಅನುಸರಿಬೇಕು. ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ದಲಿತರು, ಕನಕದಾಸರ ತತ್ವ ಸಿದ್ಧಾಂತಗಳನ್ನು ಕುರುಬರು, ಬಸವಣ್ಣ ಅವರ ತತ್ವ ಸಿದ್ಧಾಂತಗಳನ್ನ ಲಿಂಗಾಯುತರು, ಮಡಿವಾಳ ಮಾಚಿದೇವರ ತತ್ವ ಸಿದ್ಧಾಂತಗಳನ್ನು ಮಡಿವಾಳರು ಹೀಗೆ ಆಯಾ ಸಮಾಜಕ್ಕೆ ಸೀಮಿತವಾದಂತೆ ಮಾಡಿಕೊಳ್ಳುತ್ತಿರುವ ಜಯಂತಿಗಳು ನಿಲ್ಲಬೇಕು. ಮಹನೀಯರ ಜಯಂತಿಗೆ ಎಲ್ಲ ಸಮಾಜದವರು ಭಾಗವಹಿಸಿ ಯಶಸ್ವಿಗೊಳಿಸುವ ಮೂಲಕ ಅವರು ನೀಡಿರುವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಲಿಗ್ರಾಮ ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಹರ್ಷವರ್ಧನ್ ಮಾತನಾಡಿ, ಮಡಿವಾಳ ಸಮಾಜದವರು ವಾಸ ಮಾಡಲು ಮನೆಗಳಿಲ್ಲದೆ, ಒಂದೇ ಮನೆಯಲ್ಲಿ ಹಲವು ಕುಟುಂಬಗಳು ವಾಸ ಮಾಡುತ್ತಿವೆ. ಭೂಮಿ ಇಲ್ಲದೆ ತುಂಡುಭೂಮಿಗಳಲ್ಲಿ ಕೃಷಿ ಮಾಡಲಾಗದಂತ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ಸರ್ಕಾರದ ಸೌಲಭ್ಯ ಸಮಾಜಕ್ಕೆ ಪ್ರತ್ಯೇಕವಾಗಿ ಸಿಗುವಂತೆ ಮಾಡಬೇಕು. ಬಲಾಢ್ಯ ಸಮಾಜದ ಜತೆಯಲ್ಲಿ ಶೈಕ್ಷಣಿಕ, ರಾಜಕೀಯ ನಮ್ಮ ಸಮಾಜ ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ಒಳ ಮೀಸಲಾತಿ ಮೂಲಕ ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಇದಕ್ಕೂ ಮುನ್ನ ಮಡಿವಾಳ ಮಾಚಿದೇವ ಭಾವಚಿತ್ರ ಮೆರವಣಿಗೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜಪ್ಪ ಚಾಲನೆ ನೀಡಿದರು. ಮಹಿಳೆಯರು ಕಳಸ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು. ನಂತರ ಸಾಲಿಗ್ರಾಮ ರಸ್ತೆಯ ವೇದಿಕೆ ಕಾರ್ಯಕ್ರಮ ಆರಂಭವಾಯಿತು.
ತಾಲೂಕು ಸಂಘದ ಉಪಾಧ್ಯಕ್ಷ ಬಲರಾಮ್, ಕಾರ್ಯದರ್ಶಿ ವಿಶ್ವನಾಥ್, ಭೇರ್ಯ ಮಡಿವಾಳ ಸಮಾಜದ ಅಧ್ಯಕ್ಷ ರಾಮಶೆಟ್ಟಿ, ಗೌರವ ಅಧ್ಯಕ್ಷ ಜಗಶೆಟ್ಟಿ, ಉಪಾಧ್ಯಕ್ಷ ಚಂದ್ರ ಶೆಟ್ಟಿ, ಚುಂಚನಕಟ್ಟೆ ಕುಮಾರ್ ಚಂದ್ರ ಶೆಟ್ಟಿ, ವೆಂಕಟೇಶ್, ಸಾಲಿಗ್ರಾಮ ಹರ್ಷ, ಚಂದ್ರು, ಮಂಜುನಾಥ್, ರಮೇಶ್, ಕಟ್ಟೆಕುಮಾರ್, ಬೋರಪ್ಪ, ಮನು, ಪುರುಷೋತ್ತಮ್, ರಘು, ಕೃಷ್ಣಯ್ಯ ಇದ್ದರು.