ಬೆಳಗಾವಿ: ಪಾಲಕರು ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸಿ, ಅವರ ಭಾವನೆಗಳಿಗೆ ಮಹತ್ವ ನೀಡಿದರೆ ಆತ್ಮಹತ್ಯೆಯ ಸಂಖ್ಯೆ ಕಡಿಮೆ ಆಗಬಹುದು. ಆತ್ಮಹತ್ಯೆ ಎನ್ನುವುದು ಮಹಾಪಾಪ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಸಚಿವ ಡಾ.ಬಿ.ಇ.ರಂಗಸ್ವಾಮಿ ಹೇಳಿದರು.
ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕಾನೂನು ಸೇವಗಳ ಪ್ರಾಧಿಕಾರ, ವೈದ್ಯಕೀಯ ಮಹಾವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಈಚೆಗೆ ಜರುಗಿದ ಜಿಲ್ಲಾಮಟ್ಟದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾಸ್ಪತ್ರೆ ಮಾನಸಿಕ ವಿಭಾಗ ಮುಖ್ಯಸ್ಥ ಡಾ. ಚಂದ್ರಶೇಖರ ಟಿ.ಆರ್. ಮಾತನಾಡಿ, ಆತ್ಮಹತ್ಯೆಯು ಖಿನ್ನತೆ ಎನ್ನುವ ಮಾನಸಿಕ ಕಾಯಿಲೆಯಾಗಿದೆ. ತಕ್ಷಣ ರೋಗ ಲಕ್ಷಣಗಳನ್ನು ಗುರುತಿಸಿಕೊಂಡು ಮನೋವೈದ್ಯರ ಬಳಿ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಡಾ. ಗೀತಾ ಕಾಂಬಳೆ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 1 ಲಕ್ಷ ಜನ ಸಂಖ್ಯೆಯಲ್ಲಿ ಶೇ.12ರಷ್ಟು ಆತ್ಮಹತ್ಯೆ ಪ್ರಕರಣಗಳು ಕಂಡು ಬಂದಿವೆ. ಮಾನಸಿಕ ಕಾಯಿಲೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಡಾ. ಸುಮೀತಕುಮಾರ ದುರಗೋಜಿ, ಡಾ.ಉತ್ತಮ ಶೇಲಾರಮ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಬಗ್ಗೆ ಉಪನ್ಯಾಸ ನೀಡಿದರು. ದಿ. ಅಸೋಸಿಯೇಷನ್ ಆಫ್ ಪೀಪಲ್ ವಿತ್‌ಡಿಸೆಬಿಲಿಟಿ (ಎಪಿಡಿ)ನಿಂದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ಕುರಿತು ಕಿರು ನಾಟಕ ಪ್ರದರ್ಶವಾಯಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾಜಿ ಮಾಳಗೆನ್ನವರ, ಮನೋವೈದ್ಯಕೀಯ ಕಾರ್ಯಕರ್ತೆ ಸವಿತಾ ತಿಗಡಿ, ವಿ.ಟಿ.ಯು ಪ್ರೊ. ವಿವೇಕ ರೆಡ್ಡಿ ಇತರರಿದ್ದರು.