ಲಂಚ ಕೊಟ್ಟವರಿಗೆ ಸೌಲಭ್ಯ ಕೊಡಬೇಡಿ

ಸವಣೂರ: ಲಂಚ ನೀಡಿದವರಿಗೆ ಮಾತ್ರ ಕೃಷಿ ಉಪಕರಣ ವಿತರಣೆ ಕೈಗೊಳ್ಳುವ ಬದಲಾಗಿ ಪಾರದರ್ಶಕತೆಯಿಂದ ಫಲಾನುಭವಿಗಳ ಆಯ್ಕೆ ಮಾಡಿ ಎಂದು ತಾ.ಪಂ. ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣವರ ಕೃಷಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಜರುಗಿದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಮಾಸಿಕ ಪ್ರಗತಿ ವರದಿ ಪರಿಶೀಲಿಸಿ ಅವರು ಮಾತನಾಡಿದರು.

ಸಹಾಯಕ ಕೃಷಿ ಇಲಾಖೆಯ ತಾಂತ್ರಿಕ ಸಹಾಯಕ ಅಧಿಕಾರಿ ಪಿ.ಆರ್. ಕಲಾಲ ಪ್ರಗತಿ ವರದಿ ಸಲ್ಲಿಸಲು ಮುಂದಾಗುತ್ತಿದ್ದಂತೆ ತಾ.ಪಂ. ಅಧ್ಯಕ್ಷ ಸುಬ್ಬಣ್ಣವರ, ಸರ್ಕಾರದ ಯೋಜನೆಯಡಿ ರೈತರಿಗೆ ಕೃಷಿ ಸಾಮಗ್ರಿ ವಿತರಣೆಗಾಗಿ ಹಣ ಪಡೆಯುವ ಆರೋಪ ಕೇಳಿ ಬಂದಿದೆ. ಸರ್ಕಾರದ ಯೋಜನೆಗಳನ್ನು ರೈತರಿಗೆ ಪಾರದರ್ಶಕವಾಗಿ ತಲುಪಿಸಿ ಎಂದರು.

ಕಳೆದ ಸಾಲಿನಲ್ಲಿ ವಿತರಿಸಿದ ಬಿತ್ತನೆ ಬೀಜ, ಗೊಬ್ಬರ ಕುರಿತು ಮಾಹಿತಿ ಕೇಳಿದರೂ ನೀಡುತ್ತಿಲ್ಲ. ಹಾಗಾದರೆ ಸಭೆಗೆ ಏಕೆ ಬರುತ್ತೀರಿ? ಈ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಿಇಒ ಐ.ಪಿ. ಬೆನಕೊಪ್ಪ ಮಾತನಾಡಿ, ಪಟ್ಟಣ ಹಾಗೂ ತಾಲೂಕಿನ ಬಡ್ನಿ ಗ್ರಾಮದಲ್ಲಿ ಪ್ರಸಕ್ತ ಸಾಲಿನಿಂದ ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸಲಾಗುತ್ತಿದೆ. ಅಗತ್ಯಕ್ಕಿಂತ ಹೆಚ್ಚಿನ ಮಕ್ಕಳು ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಲಾಟರಿ ಮೂಲಕ ಮಕ್ಕಳನ್ನು ಆಯ್ಕೆಗೊಳಿಸಲು ತೀರ್ವನಿಸಲಾಗಿದೆ. ತಾಲೂಕಿನಲ್ಲಿ ಶೇ. 96ರಷ್ಟು ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ ಕೈಗೊಳ್ಳಲಾಗಿದೆ. ಎರಡು ತಿಂಗಳಲ್ಲಿ ಸೈಕಲ್, ಶೂ, ಸಾಕ್ಸ್ ವಿತರಿಸಲಾಗುವುದು ಎಂದರು.

ವಿವಿಧ ಇಲಾಖೆಯ ಅಧಿಕಾರಿಗಳು ಪ್ರಗತಿ ವರದಿ ಸಲ್ಲಿಸಿದರು. ತಾ.ಪಂ ಇಒ ಎಸ್.ಎಂ.ಡಿ. ಇಸ್ಮಾಯಿಲ್ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *