ಆಯನೂರು: ಪ್ರತಿಯೊಬ್ಬರೂ ಒಂದೊಂದು ಗಿಡಗಳನ್ನು ಬೆಳೆಸುವ ಜವಾಬ್ದಾರಿ ನಿರ್ವಹಿಸುವಂತಾದರೆ ಮುಂದಿನ ದಿನಗಳಲ್ಲಿ ಹೆಚ್ಚು ಅನುಕೂಲವಾಗಲಿದೆ. ಸಸಿ ನೆಟ್ಟರಷ್ಟೇ ಸಾಲದು ಅವುಗಳನ್ನು ಉಳಿಸುವಂತಹ ಕೆಲಸವಾಗಬೇಕು ಎಂದು ಆಯನೂರು ವಲಯ ಅರಣ್ಯಾಧಿಕಾರಿ ಅನ್ವರ್ ಹೇಳಿದರು.
ಸಂತೆ ಮಾರುಕಟ್ಟೆ ಮೈದಾನದಲ್ಲಿ ಶುಕ್ರವಾರ ಕೋಹಳ್ಳಿ ಗ್ರಾಪಂ ಹಮ್ಮಿಕೊಂಡಿದ್ದ ವನಮಹೋತ್ಸವದಲ್ಲಿ ಮಾತನಾಡಿ, ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಜನರು ತಮ್ಮ ಅನುಕೂಲಕ್ಕಾಗಿ ಕಾಡುಗಳನ್ನು ನಾಶ ಮಾಡುತ್ತಿದ್ದಾರೆ. ಜಗತ್ತು ಕಾಂಕ್ರೀಟ್‌ಮಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾಡು ಹಾಗೂ ಮರಗಳನ್ನು ಬೆಳೆಸುವ ಮೂಲಕ ತಾಪಮಾನ ತಡೆಗಟ್ಟಬಹುದು. ಇದರಿಂದ ಸಕಾಲಕ್ಕೆ ಮಳೆ ಆಗಲಿದೆ. ರೈತರಿಗೆ, ಕಾಡು ಪ್ರಾಣಿಗಳಿಗೆ, ಜಾನುವಾರುಗಳಿಗೆ, ಪಕ್ಷಿಗಳಿಗೆ ಅನುಕೂಲವಾಗಲಿದೆ. ಪ್ರತಿ ಮನೆಯಲ್ಲಿ ಕನಿಷ್ಠ ಒಂದು ಸಸಿಯನ್ನು ಬೆಳೆಸಬೇಕು. ಅವುಗಳ ನಿರ್ವಹಣೆ ಹೊಣೆ ಮಕ್ಕಳಿಗೆ ನೀಡಬೇಕು. ಇದರಿಂದ ಮಕ್ಕಳಿಗೂ ಜವಾಬ್ದಾರಿ ನೀಡಿದಂತೆ ಆಗುತ್ತದೆ ಎಂದರು.
ಗ್ರಾಮಸ್ಥರ ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಸಲಾಯಿತು. ನೆರಳೆ, ಮಾವು, ಹೊಳೆಮತ್ತಿಗಳಂತಹ ಸುಮಾರು 30ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು, ತಂತಿ ಬೇಲಿ ಹಾಕಲಾಯಿತು.
ಸಮುದಾಯ ಆರೋಗ್ಯ ಕೇಂದ್ರದ ಎನ್‌ಸಿಡಿ ಕೌನ್ಸಿಲರ್ ಚಂದನಾ, ಮರಿಯಪ್ಪ, ಕೋಹಳ್ಳಿ ಗ್ರಾಪಂ ಪ್ರಭಾರ ಅಧ್ಯಕ್ಷೆ ಸುಮಿತ್ರಾ, ಉಪಾಧ್ಯಕ್ಷೆ ಚಂದ್ರಕಲಾ, ಸದಸ್ಯರಾದ ಸುಕನ್ಯಾ, ವಿನೋದಾ, ನವೀನ್, ಅಣ್ಣಪ್ಪ, ಅರಣ್ಯಾಧಿಕಾರಿಗಳಾದ ಸಂತೋಷ್, ನೂರ್ ಅಹ್ಮದ್, ಗಸ್ತು ಅರಣ್ಯ ಪಾಲಕ ನಾಗರಾಜ್ ಇತರರಿದ್ದರು.