ಹೂವಿನಹಡಗಲಿ: ತಂತ್ರಜ್ಞಾನ ಯುಗದಲ್ಲಿ ನಮ್ಮ ಮೂಲ ಸಂಸ್ಕೃತಿಗಳಲ್ಲಿ ಒಂದಾದ ರಂಗಭೂಮಿ ಕಲೆಯಿಂದ ಯುವ ಪೀಳಿಗೆ ದೂರ ಉಳಿಯುತ್ತಿದೆ ಎಂದು ರಂಗಭಾರತಿ ಕಾರ್ಯಾಧ್ಯಕ್ಷ ಎಂ.ಪಿ.ಸುಮಾ ವಿಜಯ್ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ರಂಗಭಾರತಿ ರಂಗಮಂದಿರದಲ್ಲಿ ಆಯೋಜಿಸಿದ್ದ ನೀನಾಸಂನ ತಿರುಗಾಟ ರಂಗ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ವರ್ಷ ನೀನಾಸಂ ತಿರುಗಾಟದ ರಂಗಪ್ರದರ್ಶನಗಳು ರಾಜ್ಯದ ವಿವಿಧಡೆ ಆಯೋಜಿಸಲಾಗುತ್ತದೆ. ಆದರೆ ಈ ಭಾರಿ ನಮ್ಮ ಭಾಗದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಖುಷಿಯ ಸಂಗತಿ. ಪಾಲಕರು ಮಕ್ಕಳ ಕೈಯಲ್ಲಿ ಮೊಬೈಲ್ ನೀಡುವ ಬದಲಿಗೆ, ವಿವಿಧ ಬಗೆಯ ರಂಗ ಪ್ರಯೋಗಗಳ ತರಬೇತಿ ನೀಡಿ. ನಮ್ಮ ಸಂಸ್ಕೃತಿಯನ್ನು ಇನ್ನಷ್ಟು ಶ್ರೀಮಂತಗೊಳಿಸಲು ಮುಂದಾಗಬೇಕು ಎಂದರು.
ಶನಿವಾರ ಮಾಲತೀ ಮಾಧವ, ಭಾನುವಾರ ಅಂಕದ ಪರದೆ ನಾಟಕಗಳು ಪ್ರದರ್ಶನಗೊಂಡವು. ರಂಗಭಾರತಿ ಸದಸ್ಯರಾದ ಮಧು ಎಸ್, ಜಯಣ್ಣ, ಮಂಜುನಾಥ ಪಾಟೀಲ, ಸಂತೋಷ್ ಜೈನ್, ಬಸಯ್ಯ ಸ್ವಾಮಿ, ಪಿ.ಎಂ.ಕೊಟ್ರಸ್ವಾಮಿ ಇತರರಿದ್ದರು.