ಮನೆ ಹಾನಿಗೆ 10 ಲಕ್ಷ ರೂಪಾಯಿ ನೀಡಿ

ಬೆಂಗಳೂರು: ಭೀಕರ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ನೀಡುವ ಪರಿಹಾರವನ್ನು 5 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಏರಿಸಬೇಕು, ಕೇಂದ್ರ ಸರ್ಕಾರ ಕೂಡಲೇ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಹೆಚ್ಚು ನೆರವು ನೀಡಬೇಕು ಹಾಗೂ ಪ್ರಕೃತಿ ವಿಕೋಪದ ಬಗ್ಗೆ ಚರ್ಚೆಗೆ ಕೂಡಲೇ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.

ನಗರದಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಶಾಸಕರಾದ ಆನಂದ್ ನ್ಯಾಮಗೌಡ, ಗಣೇಶ್ ಹುಕ್ಕೇರಿ, ಕೇಂದ್ರದ ಬಳಿಗೆ ಕೂಡಲೇ ಸರ್ವಪಕ್ಷ ನಿಯೋಗ ಕರೆದೊಯ್ಯಬೇಕು ಎಂದು ಒತ್ತಾಯಿಸಿದರು.

ಪ್ರವಾಹದ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುವುದಿಲ್ಲ. ಎದುರಾಗಿರುವ ದೊಡ್ಡ ಸವಾಲನ್ನು ಯುದ್ದೋಪಾದಿಯಲ್ಲಿ ಎದುರಿಸಬೇಕು. ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ ಪರಿಸ್ಥಿತಿಯಿತ್ತು. ನಮ್ಮ ತಂಡ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡಿ 10 ಅಂಶಗಳ ವರದಿ ತಯಾರಿಸಿದೆ. ಅದನ್ನು ಮುಖ್ಯಮಂತ್ರಿ ಅವರಿಗೂ ಸಲ್ಲಿಸಲಿದ್ದೇವೆ ಎಂದರು.

ಬಾಗಲಕೋಟೆ, ಗೋಕಾಕ್, ಯಮಕನಮರಡಿ, ಮುದ್ದೇಬಿಹಾಳ, ಜಮಖಂಡಿ ಸೇರಿ ಹಲವು ಕಡೆ ಪ್ರವಾಹ ಹಾನಿಯ ಸಂಪೂರ್ಣ ವಿವರ ಸಂಗ್ರಹಿಸಲಾಗಿದೆ. 1994ರಲ್ಲಿ ಬಾಗಲಕೋಟೆಯಲ್ಲಿ ಪುನರ್ವಸತಿ ಮಾಡಿದ್ದರೂ ಕೆಲವರು ಹೋಗಿಲ್ಲ. ಆಗ ಅವರಿಗೆ 24 ಸಾವಿರ ರೂ. ಪರಿಹಾರ ನೀಡಲಾಗಿತ್ತು. ಹಿಂದೆ ಪರಿಹಾರ ನೀಡಲಾಗಿದೆ ಎಂಬ ಕಾರಣಕ್ಕೆ ಈಗ ಪರಿಹಾರ ತಡೆಯಬಾರದು. ಸರ್ಕಾರ ಘೋಷಿಸಿದ ಪರಿಹಾರ ನೀಡಬೇಕು ಎಂದು ಎಂ.ಬಿ. ಪಾಟೀಲ್ ಒತ್ತಾಯಿಸಿದರು. ಅಲ್ಲಿ ಕೃಷಿ ಭೂಮಿ ಸವಳು-ಜವಳು ಆಗಿದೆ. ಅದನ್ನು ಸರಿಪಡಿಸಲು ಸರ್ಕಾರ ಯೋಜನೆ ರೂಪಿಸಬೇಕು ಎಂದರು.

ಮುಖ್ಯಮಂತ್ರಿಗಳು 40 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿದ್ದಾರೆ. ಆದರೆ, ಸಿದ್ದರಾಮಯ್ಯ ನಷ್ಟ 1 ಲಕ್ಷ ಕೋಟಿ ರೂ. ಆಗಬಹುದೆಂಬ ಮಾತು ಹೇಳಿದ್ದಾರೆ. ಮುಖ್ಯಮಂತ್ರಿಗಳ ಮಾತನ್ನು ನಂಬುತ್ತೇವೆ. ಇಷ್ಟು ಮೊತ್ತ ರಾಜ್ಯ ಸರ್ಕಾರದಿಂದ ಭರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂಬ ಘೋಷಣೆ ಮಾಡಿ ಹೆಚ್ಚಿನ ನೆರವು ನೀಡಬೇಕು. ಮಹಾರಾಷ್ಟ್ರ ಸರ್ಕಾರ 6,300 ಕೋಟಿ ರೂ.ಗಳಷ್ಟು ಎಸ್​ಡಿಆರ್​ಎಫ್ ನಿಧಿಯನ್ನಿಟ್ಟಿದೆ. ನಮ್ಮ ರಾಜ್ಯದಲ್ಲಿ ಎಷ್ಟಿದೆಯೋ ಗೊತ್ತಿಲ್ಲ ಎಂದು ಟೀಕಿಸಿದರು.

ಕೊಡಗಿನಲ್ಲಿ ಕಳೆದ ವರ್ಷ ಪ್ರವಾಹ ಆದಾಗ ಬಾಡಿಗೆ ಹಾಗೂ ಇತರೆ ವೆಚ್ಚಕ್ಕೆ 10 ಸಾವಿರ ರೂ. ನೀಡಲಾಗಿತ್ತು. ಈಗ ಅದನ್ನು 5 ಸಾವಿರಕ್ಕೆ ಇಳಿಸಲಾಗಿದೆ. ಈಗಲೂ 10 ಸಾವಿರ ರೂ. ನೀಡಬೇಕು. ಜತೆಗೆ ಬಟ್ಟೆ, ದವಸ, ಪಾತ್ರೆ, ಹೊದಿಕೆ ಮೊದಲಾದ ಅಗತ್ಯವಸ್ತುಗಳ ಖರೀದಿಗೆ ಪ್ರತಿ ಕುಟುಂಬಕ್ಕೆ 1 ಲಕ್ಷ ರೂ. ನೀಡಬೇಕೆಂದು ಆಗ್ರಹಿಸಿದರು.

ಗೋಕಾಕ್​ನಲ್ಲಿ ಮಾದರಿ ಕಾರ್ಯ

ಗೋಕಾಕ್ ಪಟ್ಟಣದಲ್ಲಿ ಸಾಕಷ್ಟು ಹಾನಿಯಾಗಿತ್ತು. ನಗರಸಭೆಯ ಜತೆಗೆ ಸತೀಶ್ ಜಾರಕಿಹೊಳಿ ಕೈ ಜೋಡಿಸಿ ತಮ್ಮ ಎರಡು ಕಾರ್ಖಾನೆಗಳ ಸಿಬ್ಬಂದಿಯನ್ನು ನಿಯೋಜಿಸಿ ಕೇವಲ ಏಳು ದಿನದಲ್ಲಿ ಮಣ್ಣಿನಿಂದ ಕೂಡಿದ್ದ ರಸ್ತೆ, ಚರಂಡಿ ಸ್ವಚ್ಛಗೊಳಿಸಿದರು ಎಂದು ಎಂ.ಬಿ. ಪಾಟೀಲ್ ಶ್ಲಾಘಿಸಿದರು.

ಬಾಗಲಕೋಟೆ , ಬೆಳಗಾವಿ ಭಾಗದಲ್ಲಿ ಹೆಚ್ಚು ಕಬ್ಬು ಬೆಳೆಗಾರರು ಇದ್ದಾರೆ. ಒಂದು ಎಕರೆ ಭೂಮಿಗೆ ಹೆಚ್ಚು ಖರ್ಚು ಬರುತ್ತೆ. ಅದಕ್ಕೆ ಕಡಿಮೆ ಪರಿಹಾರ ಕೊಟ್ಟಿದ್ದಾರೆ ಇದು ಸರಿ ಅಲ್ಲ. ನಮ್ಮ ಭಾಗದಲ್ಲಿ ಇನ್ನೂ ಜಾಯಿಂಟ್ ಫ್ಯಾಮಿಲಿ ಇದೆ. ಮನೆಗಳು ಹಾಳಾಗಿವೆ ಅವರಿಗೆ ಆದಷ್ಟು ಬೇಗ ಪರಿಹಾರ ಕೊಡಬೇಕು.

| ಆನಂದ್ ನ್ಯಾಮಗೌಡ ಶಾಸಕ

ಪ್ರವಾಹ ಸಂತ್ರಸ್ತರ ನೆರವಿಗೆ ಸರ್ಕಾರ ಮುಂದಾಗಬೇಕು. ಸಾಕಷ್ಟು ರೈತರು, ಸಣ್ಣಪುಟ್ಟ ವ್ಯಾಪಾರಿಗಳು ಪ್ರವಾಹದಿಂದ ಭಾರಿ ನಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಅವರ ನೆರವಿಗೂ ಮುಂದಾಗಬೇಕು.

| ಸತೀಶ್ ಜಾರಕಿಹೊಳಿ ಮಾಜಿ ಸಚಿವ

Leave a Reply

Your email address will not be published. Required fields are marked *