ಲೇ… ಏನ್ ಚಿಲ್ಲರ್ ಅದಿಲೇ ಚಿದ್ಯಾ ನೀ…

| ಪ್ರಶಾಂತ ಆಡೂರ

ಅಂವಾ ಹಿಂತಾ ಚಿಲ್ಲರ ಮನಷ್ಯಾ ಇದ್ದಾ ಅಂದರ ಮಂಗಳವಾರೊಕ್ಕೊಮ್ಮೆ ಆ ಗುಡಿ ಮುಂದ ಬೀಕ್ಷಾ ಬೇಡೋರ ಕಡೆ ಸಹಿತ ಅವರದ ಕಲೇಕ್ಷನ್ ಐವತ್ತ-ನೂರ ರೂಪಾಯಿ ದಾಟಿದರ ಚಿಲ್ಲರ ಇಸ್ಗೊಂಡ ನೋಟ ಕೊಡ್ತಿದ್ದಾ… ಅಲ್ಲಾ, ಅಂವಾ ಹಂತಾ ಚಿಲ್ಲರ್ ಮನಷ್ಯಾ ಅಂದರ ಚೀಪ್ ಅಂತಲ್ಲ ಮತ್ತ… ಅವನ ಕಡೆ ಅಷ್ಟ ಚಿಲ್ಲರ ಇರ್ತಿದ್ದಿವು ಅಂತ.

ಈಗ ಲಗ-ಭಗ ಎರಡ ತಿಂಗಳ ಹಿಂದ ಪೇಪರನಾಗ ಒಂದ ಸುದ್ದಿ ಬಂದಿತ್ತ.

‘ವಿಚ್ಛೇದಿತ ಪತ್ನಿಗೆ ಚಿಲ್ಲರೆ ರೂಪದಲ್ಲಿ ಜೀವನಾಂಶದ ಹಣವನ್ನ ನೀಡಿದ ಪತಿ!’ ಅಂತ.

ಇದ ಚಂಡೀಗಢದ್ದ ಸುದ್ದಿ, ಅದೇನಾಗಿತ್ತಂದರ ಗಂಡಾ-ಹೆಂಡತಿ ಇಬ್ರೂ ನಮ್ಮಂಗ ಚಿಲ್ಲರ್ ವಿಷಯಕ್ಕೇಲ್ಲಾ ಜಗಳಾಡತಿದ್ದರಂತ, ಕಡಿಕೆ ಗಂಡಾ ತಲಿ ಕೆಟ್ಟ ಹೆಂಡ್ತಿಗೆ ಡೈವರ್ಸ್ ಕೊಟ್ಟನಂತ. ಅವಂಗ ಕೋರ್ಟ್ ‘ನೀ ಹೆಂಡ್ತಿಗೆ ತಿಂಗಳಿಗೆ ಇಪ್ಪತೆôದ ಸಾವಿರ ಕೊಡ’ ಅಂತ ಆರ್ಡರ್ ಮಾಡ್ತು. ಅಂವಾ ಪೀಡಾ ಹೋದರ ಸಾಕ ಅಂತ ಒಂದ ಮಾತಿಗೆ ರೈಟ ಅಂದಾ.

ಮುಂದ ಅವಂಗ ಏನೋ ಪಾಪ ಪ್ರಾಬ್ಲೇಮ್ ಆತ, ಎರಡ ತಿಂಗಳ ಅಕಿಗೆ ಹಫ್ತಾ ಅಂದರ ಜೀವನಾಂಶ ಕೊಡೊದ ಬಿಟ್ಟಾ, ಹೆಂಡ್ತಿಗೆ ಬ್ಯಾರೆ ಕೆಲಸ ಇದ್ದಿದ್ದಿಲ್ಲಾ ಅಕಿ ಮತ್ತ ಕೋರ್ಟಿಗೆ ಹೋದ್ಲು. ಕೋರ್ಟಿನವರ ಅವಂಗ ಕರದ ‘ಕೊಡೊ ರೊಕ್ಕಾ ಮೊದ್ಲ ಹೆಂಡ್ತಿಗೆ’ ಅಂತ ಹೇಳಿದರು. ಅಂವಾ ತಲಿಕೆಟ್ಟ ಮರದಿವಸ ಚೀಲಗಟ್ಟಲೇ ರೊಕ್ಕಾ ತಂದ ಕೋರ್ಟನಾಗ ಇಟ್ಟಾ.

ಚೀಲಗಟ್ಟಲೇ ರೊಕ್ಕಾ ನೋಡಿ ಹೆಂಡ್ತಿ ಇಂವಾ ಒಂದ ವರ್ಷದ ರೊಕ್ಕಾ ಒಮ್ಮೆ ಕೊಡಲಿಕತ್ತಾನ ಅಂತ ಖುಶ್ ಆದ್ಲು. ಆಮ್ಯಾಲೆ ಆ ಚೀಲಾ ತಗಿಸಿ ನೋಡಿದರ ಅದರಾಗ ಅಂವಾ ಬರೇ ಒಂದ ತಿಂಗಳದ ಇಪ್ಪತೆôದ ಸಾವಿರ ಇಷ್ಟ ಕೊಟ್ಟಿದ್ದಾ, ಅದು ಎಲ್ಲಾ ಒಂದ ರೂಪಾಯಿದ್ದ, ಎರಡ ರೂಪಾಯಿದ್ದ ಚಿಲ್ಲರ (ಕ್ವೈನ್ಸ್) ತಂದಿದ್ದಾ.

ಅದನ್ನ ನೋಡಿ ಹೆಂಡ್ತಿಗೆ ಸಿಟ್ಟ ಬಂತ. ‘ಏ, ನನಗ ಟಾರ್ಚರ್ ಮಾಡಲಿಕ್ಕೆ ಇಂವಾ ಹಿಂಗ ಮಾಡ್ಯಾನ, ನಾ ಒಬ್ಬೊಕಿನ ಹೆಂಗ ಇಷ್ಟ ಚಿಲ್ಲರ ಎಣಸಲಿ’ ಅಂತ ನಿಂತಳು.

ಇಂವಾ ಹಿಂಗ ಮಾಡಿದ್ದಕ್ಕ ಜಡ್ಜ ಸಹಿತ ಆಬ್ಜೇಕ್ಷನ್ ಅಂದರು. ಗಂಡ ಹೇಳಿದಾ ನೋಡ್ರಿ-‘ನೀವು ರೊಕ್ಕಾ ಕೊಡ ಅಂದಿರಿ, ನಾ ಕೊಟ್ಟೇನಿ, ನೋಟ ಕೊಡ ಚಿಲ್ಲರ ಬ್ಯಾಡಾ ಅಂತೇನ ಹೇಳಿಲ್ಲಾ.. ಹಂಗ ಅಕಿಗೆ ಒಬ್ಬೊಕಿಗೆ ಎಣಸಲಿಕ್ಕೆ ಆಗಲಿಲ್ಲಾಂದರ ನಾನ ಮೂರ ಮಕ್ಕಳನ ಹಡದ ಕೊಟ್ಟೇನಿ ಬೇಕಾರ ಅವರ ಕಡೆ ಏಣಿಸ್ಗೊಳ್ಳಿ’ ಅಂತ ಹೇಳಿದಾ.

ಜಡ್ಜಗೂ ಅಂವಾ ಹೇಳಿದ್ದ ಪಾಯಿಂಟ್ ವ್ಯಾಲಿಡ್ ಅನಸ್ತ, ಏನ ಮಾಡ್ಬೇಕ ತಿಳಿಲಿಲ್ಲಾ. ಒಂದ ಸರತೆ ಅಕಿ ಮಾರಿ, ಒಂದ ಸರತೆ ಇವನ ಮಾರಿ ಆಮ್ಯಾಲೆ ಆ ಚೀಲಗಟ್ಟಲೇ ಚಿಲ್ಲರ ನೋಡಿ ಜಡ್ಜ ವಿಚಾರಣೆಯನ್ನ ಎರಡ ದಿವಸ ಮುಂದ ಹಾಕಿದರು… ಇದು ಸುದ್ದಿ. ಮುಂದ ಏನಾತ ನಂಗೊತ್ತಿಲ್ಲಾ, ಅಕಿ ತೊಗೊಂಡ್ಲೊ ಬಿಟ್ಲೋ, ಯಾರ ಚಿಲ್ಲರ ಎಣಿಸಿದರು ಅದರ ಬಗ್ಗೆ ನಾ ತಲಿಗೆಡಸಿಕೊಳ್ಳಲಿಲ್ಲಾ.

ಅಲ್ಲಾ, ಎಲ್ಲಾ ಬಿಟ್ಟ ನಂಗ ಎರಡ ತಿಂಗಳ ಹಿಂದಿನ ಸುದ್ದಿ ಯಾಕ ನೆನಪಾತ ಅಂದರ ಮೊನ್ನೆ ನಾವು ಸಾರ್ವಜನಿಕ ಗಣಪತಿ ನೋಡಲಿಕ್ಕೆ ದುರ್ಗದಬೈಲ ಕಡೆ ಹೋದಾಗ ನಮ್ಮ ದೋಸ್ತ ‘ಚಿಲ್ಲರ್ ಚಿದ್ಯಾ’ ದಂಪತ್ ಸಹಿತ ಭೆಟ್ಟಿ ಆಗಿದ್ದಾ.

ಅಂವಾ ಬಾಕಳೆ ಗಲ್ಲಿ ಗಣಪತಿ ಗುಡಿ ಬಾಜುಕ ಕಾಯಿ, ಕಲಸಕ್ಕರಿ, ಗುಲಾಬಿ ಹೂ, ಊದಿನಕಡ್ಡಿ ಅಂಗಡಿ ಇಟಗೊಂಡ ಇದ್ದಾನ. ನಾವ ಇವತ್ತೂ ಗುಡಿಗೆ ಹೋದಾಗೊಮ್ಮೆ ಭೇಟ್ಟಿ ಆಗ್ತಾನ.

ಹಿಂದಕ ನಾವು ಸಾಲ್ಯಾಗ ಇದ್ದಾಗ ಇದ ನಮ್ಮ ದೋಸ್ತನ ಅಂಗಡಿ ಅಂತ ಅಲ್ಲೇ ಅವನ ಅಂಗಡಿ ಮುಂದ ಹವಾಯಿ ಚಪ್ಪಲ್ ಬಿಟ್ಟ ಅವನ ಕಡೆನ ಕಾಯಿ, ಕಲ್ಲಸಕ್ಕರಿ ತೊಗೊಂಡ ‘ಲೇ…ಮಗನ ಚಪ್ಪಲ್ ಕಾಯಿಲೇ… ಕಿಮ್ಮತ್ತಿನ್ವ ಚಪ್ಪಲ್ಲ ಅವ’ ಅಂತ ಅವಂಗ ಕಾಡಿಸಿ ಗುಡಿಗೆ ಹೋಗ್ತಿದ್ವಿ.

ಅಂವಾ ನಾವ ತೊಗೊಂಡ ಸಾಮಾನದ್ದ ಬಿಲ್ಲ್ ಹನ್ನೊಂದ ರೂಪಾಯಿ ಆದಾಗ ಮ್ಯಾಲಿಂದ ಒಂದ ರೂಪಾಯಿ ಬಿಡ್ಲೇ ಅಂದರ ಒಟ್ಟ ಬಿಡ್ತಿದ್ದಿಲ್ಲಾ, ‘ಮಗನ ನಮಗ ಇರೋದ ಒಂದ ರೂಪಾಯಿ ಮಾರ್ಜಿನ್’ ಅಂತಿದ್ದಾ.

‘ಏನ ಚಿಲ್ಲರ ಮನಷ್ಯಾ ಅದಿಲೇ ದೋಸ್ತರಿಗೆ ಒಂದ ರೂಪಾಯಿನೂ ಬಿಡಂಗಿಲ್ಲಲಾ’ ಅಂತ ಅಂದರ

‘ದೋಸ್ತ…ಹನಿ ಹನಿ ಕೂಡಿದರ ಹಳ್ಳ’ ಅಂತಿದ್ದಾ. ಕಡಿಕೆ ನಾವ ಹದಿನೈದ ರೂಪಾಯಿ ಬಡದ ಮ್ಯಾಲಿಂದ ನಾಲ್ಕ ರೂಪಾಯಿ ಚಿಲ್ಲರ ಇಸ್ಗೊಂಡ ಅದರಾಗಿಂದ ನಾಲ್ಕಣೆ ದೇವರಿಗೆ ಹಾಕಿ ಬರ್ತಿದ್ವಿ.

ಹಂಗ ಒಮ್ಮೊಮ್ಮೆ ಹತ್ತೊಂಬತ್ತ ರೂಪಾಯಿ ಆದರ ‘ಇಪ್ಪತ್ತ ಕೊಟ್ಟ ಬಿಡ್ರಿ ಮಕ್ಕಳ, ನಮ್ಮ ಅಂಗಡಿ ಮುಂದ ಚಪ್ಪಲ್ ಬಿಟ್ಟಿದ್ದಕ್ಕ ಒಂದ ರೂಪಾಯಿ ಇರಲಿ’ ಅಂತ ನಮಗ ಅಂತಿದ್ದಾ. ಹಂತಾ ಚಿಲ್ಲರ್ ಮನಷ್ಯಾ, ಹಿಂಗಾಗಿ ನಾವ ಅವಂಗ ಚಿಲ್ಲರ ಚಿದ್ಯಾ ಅಂತ ಕರಿತಿದ್ವಿ.

‘ಹೌದಲೇ ಮಕ್ಕಳ, ನಾ ಚಿಲ್ಲರ್ ಅದೇನಿ… ನೀಮಗೇನ ಗೊತ್ತ ಚಿಲ್ಲರದ್ದ ಕಿಮ್ಮತ್ತ್… ಚಿಲ್ಲರ ಕೊಟ್ಟ ಮಾತಾಡ್ರಿ’ ಅಂತ ಒಬ್ಬರ ಕಡೇನೂ ಒಂದ ರೂಪಾಯಿ ಬಿಡ್ತಿದ್ದಿಲ್ಲಾ.

ಒಮ್ಮೆ ಸಾಲ್ಯಾಗಿನ 75 ರೂಪಾಯಿ ಫೀಸ್ ನಾಲ್ಕಣೇದ್ದ ,ಎಂಟಣೇದ್ದ, ಒಂದ ರೂಪಾಯಿದ್ದ ತಂದ ಕೊಟ್ಟಿದ್ದಾ. ನಮ್ಮ ರಕ್ಕಸಗಿಮಠ ಸರ್ ಸಿಟ್ಟಿಗೆದ್ದ ಇವನ್ನೇನ ಎಣಸಬೇಕೋ ಇಲ್ಲಾ ತೂಕಾ ಮಾಡಬೇಕೊ ಅಂತ ಹಿಡದ ಜಾಡಸಿದ್ದರು.

ಅದರಾಗ ಇಂವಾ ಕಾಯಿ, ಕಲ್ಲಸಕ್ಕರಿ ಮಾರೋದ ಅಲ್ಲದ ಆ ಚಿಲ್ಲರ ಸಹಿತ ಮಾರತಿದ್ದಾ. ಆವಾಗಿನ ಕಾಲದಾಗ (1980-85) ಚಿಲ್ಲರದ್ದ ಪ್ರಾಬ್ಲೇಮ್ ಭಾಳ ಇರ್ತಿತ್ತ. ಅದರಾಗ ಹೋಟೆಲನವರ ಅಂತೂ ಇವನ ಕಡೆ 95 ರೂಪಾಯಿ ಚಿಲ್ಲರ ತೊಗೊಂಡ ನೂರರ ನೋಟ ಕೊಡ್ತಿದ್ದರು, ಸೀದಾ 5% ಫಾಯದೇ. ಏನ ಇನ್ವೆಸ್ಟಮೆಂಟ್ ಇಲ್ಲಾ ಏನಿಲ್ಲಾ, ವಾರಕ್ಕ ಮೂರ ನಾಲ್ಕ ಸಾವಿರ ರೂಪಾಯಿದ್ದ ಬರೇ ಚಿಲ್ಲರ ಮಾರ್ತಿದ್ದಾ ಮಗಾ. ಆ ಖಾಲಿ ನಂದಿನಿ ಹಾಲಿನ ಪಾಕೇಟ್ ತೊಗೊಂಡ ಬಿಸಿನಿರಾಗ ತೊಳದ ನೂರ ನೂರ ರೂಪಾಯಿದ್ದ ಒಂದೊಂದ ಚೀಲಾ ಮಾಡಿ ಮಾಡಿ ಕೊಡ್ತಿದ್ದಾ.

ಇನ್ನ ಇವಂಗ ಇಷ್ಟ ಚಿಲ್ಲರ ಎಲ್ಲೇ ಹುಟ್ಟತಿದ್ದವು ಅಂದರ, ಈ ಮಗಂದ ಆ ಗುಡಿ ಮ್ಯಾನೇಜಮೆಂಟ್ ಜೋಡಿ ಛಲೋ ದೋಸ್ತಿ ಇತ್ತ. ಹಿಂಗಾಗಿ ಆ ಗುಡಿದ ಹುಂಡಿ ಡಬ್ಬಿ ತಗದಾಗೊಮ್ಮೆ ಇಂವಾ ದೇವರ ಸೇವಾ ಅಂತ ರೊಕ್ಕಾ ಎಣಸಲಿಕ್ಕೆ ಹೋಗ್ತಿದ್ದಾ, ಬರತ ಎಲ್ಲಾ ಚಿಲ್ಲರ ಚೀಲದಾಗ ತುಂಬಕೊಂಡ ಅವರಿಗೆ ನೋಟ ಕೊಡ್ತಿದ್ದಾ.

ಇನ್ನ ಒಂದಿಷ್ಟ ಸಿ.ಬಿ.ಟಿ ಒಳಗಿನ ಕಂಡಕ್ಟರಗೊಳನ್ನ ಬ್ಯಾರೆ ಹಚಗೊಂಡಿದ್ದಾ, ಅವರ ತಮ್ಮ ಪಾಳೇ ಮುಗದ ಇನ್ನೇನ ಡೀಪೋಕ್ಕ ಹೋಗಿ ಕ್ಯಾಶಿಯರ್​ಗೆ ಕಲೇಕ್ಶನ್ ಕೊಡಬೇಕ ಅನ್ನೋದರಾಗ ಅವರ ಕಡೆದ್ದ ಚಿಲ್ಲರ ತಾ ಇಸ್ಗೊಂಡ ಬಿಡ್ತಿದ್ದಾ. ಪಾಪ ಅವರು ಏನ ಚಿಲ್ಲರ ಹೊತಗೊಂಡ ಹೋಗೊದ ಅಂತ ಕೊಟ್ಟ ಬಿಡ್ತಿದ್ದರು.

ಅದ ಬಿಡ್ರಿ ಮಂಗಳವಾರಕ್ಕೊಮ್ಮೆ ಗುಡಿ ಮುಂದ ಬೀಕ್ಷಾ ಬೇಡೋರ ಕಡೆ ಸಹಿತ ಅವರದ ಕಲೇಕ್ಷನ್ ಐವತ್ತ-ನೂರ ರೂಪಾಯಿ ಆದರ ಆ ಚಿಲ್ಲರ ಇಸ್ಗೊಂಡ ನೋಟ್ ಕೊಡ್ತಿದ್ದಾ.

ಇಂವಾ ಹಂತಾ ‘ಚಿಲ್ಲರ ಮನಷ್ಯಾ’. ಅಂದರ ಚೀಪ ಅಂತಲ್ಲ ಮತ್ತ, ಇವನ ಕಡೆ ಅಷ್ಟ ಚಿಲ್ಲರ ಇರ್ತಿದ್ದವು ಅಂತ ಅರ್ಥ.

ಅಲ್ಲಾ ಹಂಗ ನಾ ಬರದಿದ್ದ ಚಿಲ್ಲರ ಅನಸಬಹುದು. ಆದರ ಯಾ ಮನಷ್ಯಾ ಯಾ ಡಿನಾಮಿನೇಶನ್ ಕರೆನ್ಸಿಲೇ ವ್ಯವಹಾರ ಮಾಡ್ತಾನ ಅಂವಾ ಅದಕ್ಕ ವ್ಯಾಲ್ಯೂ ಕೊಡ್ತಾನ, ಇಂವಾ ದಿವಸಕ್ಕ ಸಾವಿರ ರೂಪಾಯಿ ವ್ಯಾಪಾರ ಮಾಡವಲ್ಲನಾಕ ಆದರ ಅಂವಾ ಡೀಲ್ ಮಾಡೊದ ಎಂಟ ರೂಪಾಯಿ, ಹನ್ನೊಂದ ರೂಪಾಯಿ ಹಿಂಗ ಇರ್ತಿದ್ದವು. ಹಿಂಗಾಗಿ ಅವಂಗ ಒಂದ ಒಂದ ರೂಪಾಯಿನೂ ಇಂಪಾರ್ಟೆಂಟ್. ಇವತ್ತ ಅಂವಾ ಹಿಂಗ ಒಂದ ಒಂದ ರೂಪಾಯಿ ವ್ಯಾಪಾರ ಮಾಡೇನ ಮಂಟೂರ ರೋಡನಾಗ ಮೂರ ಅಂತಿಸ್ತಿನ ಮನಿ ಕಟ್ಯಾನ.

ಅಲ್ಲಾ ಅಂವಾ ಮೊನ್ನೆ ದುರ್ಗದಬೈಲ ಕಡೆ ಯಾಕ ಬಂದಿದ್ದಾ ಗೊತ್ತೆನ?

ಅಂವಾ ಹೆಂಡ್ತಿ ಕರಕೊಂಡ ಸಾರ್ವಜನಿಕ ಗಣಪತಿ ನೋಡಿದಂಗ ಆತು ಹಂಗ ನಾಳೆ ಅನಂತ ಚತುರ್ದಶಿ ದಿವಸ ಗಣಪತಿ ಕಳಸಿದ ಮ್ಯಾಲೆ ಗಣಪತಿ ಪೆಂಡಾಲದಾಗ ಹುಂಡಿ ಡಬ್ಬಿ ಇಟ್ಟಿರ್ತಾರಲಾ, ಆ ಎಲ್ಲಾ ಚಿಲ್ಲರ ನಂಗ ಕೊಡ್ರಿ ಅಂತ ಗಣಪತಿ ಎತ್ತೊಕಿಂತ ಮೊದ್ಲ ಚಿಲ್ಲರ್ ಬುಕ್ ಮಾಡಲಿಕ್ಕೆ ಬಂದಿದ್ದಾ.

ಅಲ್ಲಾ ನಮ್ಮ ಹುಬ್ಬಳ್ಯಾಗಿನ ಚಿಲ್ಲರ ಎಲ್ಲಾ ಇವನ ಟೆಂಡರ್ ತೊಗೊಳೊಹಂಗ ಕಾಣ್ತದ ಬಿಡ್ರಿ.

ನಾ ಆ ಪೇಪರನಾಗ ಬಂದಿದ್ದ ಸುದ್ದಿ ಮೊನ್ನೆ ಭೆಟ್ಟಿ ಆದಾಗ ಅವನ ಹೆಂಡ್ತಿಗೆ ಹೇಳಿ- ‘ನೋಡ ನಾಳೆ ನೀ ಏನರ ನಿನ್ನ ಗಂಡನ ಬಿಟ್ಟರ ಇವನು ಚಿಲ್ಲರ ಕೊಡೊವನ ಮತ್ತ… ನೀ ಅಂತೂ ಏನ ಇಲ್ಲದ ಚಿಲ್ಲರ ಗಂಡಗ ಮಾಡ್ಕೊಂಡಿ’ ಅಂತ ಚಾಷ್ಟಿ ಮಾಡಿದರ ಅಲ್ಲೇ ಬಾಜು ಇದ್ದ ನನ್ನ ಹೆಂಡತಿ ಸುಮ್ಮನ ಕೂಡಬೇಕ ಇಲ್ಲ

‘ಹೌದ ತೊಗೋರಿ, ನೀವು ಭಾಳ ಗಟ್ಟಿ ನೋಟ ಇದ್ದೀರಿ ನೋಡ್ರಿ, ಊಬಿದರ ಹಾರಿ ಹೋಗೊ ಹಂಗ ಇದ್ದೀರಿ… ಬರೇ ಹಿಂತಾ ಚಿಲ್ಲರ ಮಾತಾಡ್ಕೋತ ಅಡ್ಡಾಡತೀರಿ’ ಅಂತ ನಂಗ ಬೈದ ಕರಕೊಂಡ ಬಂದಳು. ನಾ ಇನ್ನ ಅಕಿ ಜೊತಿ ಎಲ್ಲೇ ಹಿಂತಾ ಚಿಲ್ಲರ ವಿಷಯಕ್ಕ ಜಗಳಾಡೋದ ಬಿಡ ಅಂತ ಸುಮ್ಮನ ಮನಿ ಹಾದಿ ಹಿಡದೆ.

ನಾ ಖರೇ ಹೇಳ್ತೇನಿ… ಒಮ್ಮೊಮ್ಮೆ ನನ್ನ ಹೆಂಡ್ತಿ ಹಿಂತಾ ಚಿಲ್ಲರ ಮಾತಾಡ್ತಾಳಲಾ.. ಅವನೇಲ್ಲಾ ಹೇಳಿದರ ನಿಮಗ ಚಿಲ್ಲರ ಅನಸ್ತದ ಆದರ ಏನ್ಮಾಡೋದ ಪಾಲಿಗೆ ಬಂದಿದ್ದ ಪಂಚಾಮೃತ… ಅದ ಚಿಲ್ಲರ್ ಯಾಕ ಆಗವಲ್ತಾಕ.

(ಲೇಖಕರು ಹಾಸ್ಯ ಬರಹಗಾರರು)