ಮುಕ್ತಿಧಾಮ ಬಂದ ಆಗೇದ, ಬಾಡಿ ನಾಳೆ ತೊಗೊಂಡ ಬರ್ರಿ…

ಮುಕ್ತಿಧಾಮಕ್ಕ ಬಂದಾಗ ಹನ್ನೊಂದುವರಿ ಆಗಲಿಕ್ಕೆ ಬಂದಿತ್ತ. ಮ್ಯಾನೇಜರ ಬ್ಯಾರೆ ಡ್ಯೂಟಿ ಮುಗಿಸಿ ಮನಿಗೆ ಹೋಗಿದ್ದಾ, ಇದ್ದ ಒಬ್ಬ ಸೆಕ್ಯೂರಿಟಿ ಗೇಟ ಹಾಕಲಿಕ್ಕತ್ತಿದ್ದಾ, ನಮ್ಮನ್ನ ನೋಡಿದವನ. ‘ಏ, ಮುಕ್ತಿಧಾಮ ಬಂದ ಆಗೇದ, ಬಾಡಿ ನಾಳೆ ತೊಗೊಂಡ ಬರ್ರಿ’ ಅಂತ ಅಂದ ಬಿಟ್ಟಾ.

ಇದ ಒಂದ ಐದ ವರ್ಷದ ಹಿಂದಿನ ಮಾತ ಇರಬೇಕ ಒಂದ ದಿವಸ ಸಂಜಿಮುಂದ ನಮ್ಮ ದೋಸ್ತ ಅರಣ್ಯಾಂದ ಫೋನ ಬಂತ. ಅವರಜ್ಜಿ ಒಬ್ಬೋಕಿ ಸಿರಿಯಸ್ ಇದ್ಲು ಹಿಂಗಾಗಿ ನಾ ಸ್ವಲ್ಪ ಹೆದರಕೋತ ಮನಸ್ಸಿನಾಗ RIP..RIP ಅನ್ಕೋತನ ಫೋನ ಎತ್ತಿದೆ. ನಾ ಅನ್ಕೊಂಡಿದ್ದ ಖರೇನ ಆತ. ಅಂವಾ ನಾ ಫೋನ ಎತ್ತೊದ ತಡಾ ‘ಅಜ್ಜಿ ಹೋದ್ಲು, ನೀವು ಲಗೂನ ಬರ್ರಿ ದಾದಾ’ ಅಂತ ಅಂದ ಫೋನ ಇಟ್ಟಾ.

ಹಂಗ ಅಂವಾ ಆತು ಅವರಜ್ಜಿ ಆತು ನಂಗೇನ ಸಂಬಂಧ ಇಲ್ಲಾ, ಆದ್ರ ಒಬ್ಬರಿಗೊಬ್ಬರ ಭಾಳ ಹಚಗೊಂಡಿದ್ದವಿ. ಪಾಪ ಅಜ್ಜಿಗೆ ವಯಸ್ಸ ಆಗಿತ್ತು, ನೂರಾ ಎಂಟ ಜೆಡ್ಡ ಇತ್ತು. ಹೋತು. ಇನ್ನ ಅವರಜ್ಜಿ ಸತ್ತಾಳಂತ ಇಂವಾ ನನಗ ಫೋನ ಮಾಡ್ಯಾನ ಅಂದ್ರ ಮುಂದಿನ ವ್ಯವಸ್ಥಾಕ್ಕ ಕರಿಲಿಕತ್ತಾನ ಅಂತ ಸೀದಾ ಅವನ ಮನಿಗೆ ಹೋದೆ.

ಆ ಅಜ್ಜಿಗೆ ನಮ್ಮ ದೋಸ್ತನ ಅಪ್ಪನ್ನ ಹಿಡದ ಮೂರ ಮಂದಿ ಗಂಡಸ ಮಕ್ಕಳು. ಮೂರು ಮಂದಿ ಅಲ್ಲೇ ಕಟ್ಟಿ ಮ್ಯಾಲೆ ಮುಸು-ಮುಸು ಮಾಡ್ಕೋತ ನಿಂತಿದ್ದರು. ನಾ ಸೀದಾ ಭಾಳ ಪ್ರಾ್ಯಕ್ಟಿಕಲ್ ಆಗಿ ‘ಈಗ ಮುಂದಿಂದ ಹೆಂಗ, ಆಲರೆಡಿ ಎಂಟಾಗಲಿಕ್ಕೆ ಬಂತ, ಊರಿಂದ ಯಾರರ ಬರೋರ ಇದ್ದಾರೇನ ಅಂತ’ ಕೇಳಿದೆ.

‘ಏ, ಯಾರಿಲ್ಲಾ ಎಲ್ಲಾರೂ ಒಂದ ವಾರದ ಹಿಂದ ನೋಡಲಿಕ್ಕೆ ಬಂದಾಗ ಹಂಗ ಏನರ ಹೆಚ್ಚು ಕಡಮಿ ಆದರ ನೀವೇನ ನಮ್ಮ ದಾರಿ ಕಾಯಬ್ಯಾಡ್ರಿ. ನಮಗೆಲ್ಲೆ ಹಗಲಗಲಾ ಬರಲಿಕ್ಕೆ ಆಗ್ತದ.. ನೀವು ಮುಗಿಸಿ ಬಿಡ್ರಿ.. ನಾವ ಮುಂದ ಧರ್ವೇದಕಕ್ಕ ಡೈರೆಕ್ಟ ಗಾಯತ್ರಿ ತಪೋಭೂಮಿಗೆ ಬರ್ತೆವಿ ಅಂತ ಹೇಳಿನ ಹೋಗ್ಯಾರ’ ಅಂದ್ರು.

ಏ ಭಾರಿ ಪ್ರಾ್ಯಕ್ಟಿಕಲ್ ಫ್ಯಾಮಿಲಿ ಬಿಡ ಅಂತ ನಂಗು ಸಮಾಧಾನ ಆತ.

ನಾ ಅಜ್ಜಿ ಹಿರೇ ಮಗನ ಸೈಡಿಗೆ ಕರದ-‘ನಂಗೇನ ರಾತ್ರಿ ಬೆಳತನಕಾ ಇಡೊದ ಸರಿ ಅನಸಂಗಿಲ್ಲಾ, ಭಡಾ ಭಡಾ ಈಗ ಮುಗಿಸಿ ಬಿಡೋದ ಛಲೋ ಅಂತ ಅನಸ್ತದ, ನೀವೇನ ಅಂತೀರಿ’ ಅಂತ ಒಂದ ಮಾತ ಕೇಳಿದೆ. ಪಾಪ ಅವರು ವಯಸ್ಸಾದೋರು, ‘ನಂಗೂ ಹಂಗ ಅನಸ್ತದ ಅಂತ’ ಅಂದರು. ನಂಗೂ ಅಷ್ಟ ಬೇಕಾಗಿತ್ತ. ಅಲ್ಲಾ ಅವರು ‘ನಾಳೆ ಆರಾಮ ಮಾಡೋಣ ತೊಗೊ’ ಅಂದಿದ್ದರ ನಾ ಸಿಕ್ಕೊತಿದ್ದೆ, ಯಾಕಂದರ ಮರದಿವಸ ನನ್ನವೂ ಇಂಪಾರ್ಟೆಂಟ್ ಕೆಲಸ ಬ್ಯಾರೆ ಇದ್ವು.

ನಾ ಒಬ್ಬ ಹುಡಗಗ ಕರದ ಕೈಯಾಗ ಐದ ಸಾವಿರ ರೂಪಾಯಿ ನನ್ನ ಕಿಸೆದಾಗಿಂದ ಕೊಟ್ಟ, ‘ಮೊದ್ಲ ಮುಕ್ತಿಧಾಮಕ್ಕ ಹೋಗಿ ಶವ ವಾಹನ ಬುಕ್ ಮಾಡಿ, ಅಲ್ಲೇನ ಮೂರ ಪಂಜಿ, ಎರಡ ಬಿದರು, ಒಂದ ಗಡಿಗಿ, ಒಂದಿಷ್ಟ ಕುಳ್ಳ, ಧರ್ಬಿ, ಎಳ್ಳು ತೊಗೊಂಡ ಬಾ’ ಅಂತ ಕಳಸಿದೆ. ಅಷ್ಟರಾಗ ಒಂಬತ್ತ ಆಗಲಿಕ್ಕೆ ಬಂದಿತ್ತ, ಅವರ ಓಣ್ಯಾಗಿನ ಜೋಶಿಯವರ ಬಂದ ‘ಈಗಾಗಲೇ ಒಂಬತ್ತ ಆಗಲಿಕ್ಕೆ ಬಂತ, ಒಯ್ಯೋದರಾಗ ಹನ್ನೊಂದ ಆಗ್ತದ. ಮುಕ್ತಿಧಾಮ ಮುಚ್ಚಿ ಬಿಡ್ತಾರ, ನೋಡ್ರಿ ಏನ ಮಾಡ್ತೀರಿ? ಹೋದ ವರ್ಷ ನಮ್ಮಪ್ಪ ತೀರಕೊಂಡಾಗ ಹನ್ನೊಂದ ಆಗಿದ್ದಕ್ಕ ಮುಕ್ತಿಧಾಮದಾಗ ಹೆಣಾ ಹಿಡಿಲಾರದ ವಾಪಸ ಕಳಸಿದ್ರು, ರಾತ್ರಿ ಬೆಳತನಕ ಮನಿ ಕಟ್ಟಿ ಮ್ಯಾಲೆ ಹೆಣಾ ಕಾಯ್ದೇವಿ ಹಂಗ ಆಗಬಾರದ ಮತ’ ಅಂತ ಹೆದರಸಿದರು.

ಅಲ್ಲಾ ಹಂಗ ಅವರ ಹೇಳೋದನು ಖರೇ ಇತ್ತ. ಆ ಜೋಶಿಯವರ ಅಪ್ಪ ಸತ್ತಾಗ ಮುಕ್ತಿಧಾಮದವರು ‘ಹತ್ತುವರಿಗೆ ಮುಕ್ತಿಧಾಮ ಬಂದ, ಆಮ್ಯಾಲೆ ಹೆಣಾ ಸುಡಲಿಕ್ಕೆ ಬಂದರ ಗದ್ಲ ಆಗ್ತದ ಅಂತ ಆಜು ಬಾಜು ಮಂದಿ ಕಂಪ್ಲೇಂಟ್ ಮಾಡ್ತಾರ, ನೀವ ನಾಳೆ ಬರ್ರಿ’ ಅಂತ ಹೇಳಿ ಹೆಣಾ ವಾಪಸ ಕಳಸಿ ಬಿಟ್ಟಿದ್ದರಂತ. ಪಾಪ ಹಿಂಗಾಗಿ ಜೋಶಿಯವರ ಯಾಕ ರಿಸ್ಕ ತೊಗೊತಿರಿ ಅಂತ ಹೇಳಿದರು. ಆದರ ನಂಗ ಇಲ್ಲೇ ರಾತ್ರಿ ಬೆಳತನಕ ಆ ಅಜ್ಜಿನ್ನ ಇಟ್ಕೊಂಡ ಕೂಡೋದ ಇದ್ದಿದ್ದಿಲ್ಲಾ. ಅದಕ್ಕ ನಾ ಆ ಸಾಮಾನ ತರಲಿಕ್ಕೆ ಹೋದೋರಿಗೆ ಫೋನ ಮಾಡಿ-‘ನೀವು ಮುಕ್ತಿಧಾಮ ರಿಸರ್ವ್ ಮಾಡಿಸಿಸಿ ಆ ಮ್ಯಾನೇಜರಗೆ ಬಾಡಿ ಬರೋ ಮಟಾ ವೇಟ್ ಮಾಡ ಅಂತ ಹೇಳಿ ಬರ್ರಿ ಮತ್ತ’ ಅಂತ ಹೇಳಿದೆ.

ಮುಂದ ಒಂದ ಅರ್ಧಾ ತಾಸಿಗೆ ಸಾಮಾನ ಎಲ್ಲಾ ಬಂದ್ವು, ಮುಕ್ತಿಧಾಮದ ಗಾಡಿ ಬರೋದ ಒಂದ ಬಾಕಿ ಉಳಿತ. ನಾವೇಲ್ಲಾ ಗಾಡಿ ದಾರಿ ಕಾಯ್ಕೋತ ನಿಂತ್ವಿ, ಅಷ್ಟರಾಗ ಹತ್ತ ಗಂಟೆ ಆಗಲಿಕ್ಕೆ ಬಂದಿತ್ತ. ನಾವ ಡ್ರೖೆವರಗೆ ಫೋನ ಹೊಡದಿದ್ದ ಹೊಡದಿದ್ದ. ಅಂವಾ ಕಡಿಕೆ ಒಂದ ಹತ್ತ ಸರತೆ ಫೋನ ಹೊಡದಮ್ಯಾಲೆ ಒಂದ ಸರತೆ ಎತ್ತಿದಾ.

ನಾ ‘ಏ ಎಲ್ಲಿದ್ದಿ, ನಾವ ಎಷ್ಟೋತ್ತಾತ ಕಾಯಲಿಕತ್ತ’ ಅಂತ ಜೋರ ಮಾಡಿದೆ.

ಅಂವಾ ‘ನೀ ಯಾರ ಮಾತೋಡದ’ ಅಂತ ನಂಗ ಟಬರ ಮಾಡಿದಾ. ‘ಏ, ನಾ ಗಾಂಧಿನಗರದಿಂದ ಮಾತೋಡೊದ, ಕುಲಕರ್ಣಿಯವರ ಮನಿ ಬಾಡಿ ಒಯಲಿಕ್ಕೆ ಇನ್ನೂ ಬಂದೇಲಲಾ’ ಅಂದೆ. ಅದಕ್ಕ ಅಂವಾ

‘ಏ, ನಾ ಈಗ ಗಾಂಧಿನಗರ ಕುಲಕರ್ಣಿಯವರ ಬಾಡಿ ತೊಗೊಂಡ ವಾಪಸ ಹೊಂಟೆನಿ ಮತ್ತೇಲ್ಲಿ ಬಾಡಿ ತರತಿ’ ಅಂತ ಅಂದಾ. ನಂಗ ಗಾಬರಿ ಆತ. ನಮ್ಮ ಕುಲಕರ್ಣಿ ಅಜ್ಜಿ ಬಾಡಿನರ ಇಲ್ಲೇ ಬಾಯಿತಕ್ಕೊಂಡ ಬಿದ್ದದ, ಇಂವಾ ಯಾ ಕುಲಕರ್ಣಿ ಬಾಡಿ ಎಬಸಿದಾಪಾ ಅಂತ, ‘ಏ, ಯಾ ಕುಲಕರ್ಣಿನೋ.. ನಮ್ಮಜ್ಜಿ ಇನ್ನೂ ಇಲ್ಲೇ ಇದ್ದಾಳ.. ನೀ ಯಾರ ಬಾಡಿ ತೊಗೊಂಡ ಹೊಂಟಿ’ ಅಂತ ಕೇಳಿದೆ.

‘ಏ, ಥರ್ಡ್ ಕ್ರಾಸ್ ಕುಲಕರ್ಣಿ ಅಜ್ಜನ್ನ ತೊಗೊಂಡ ಹೊಂಟೇನಿ’ ಅಂತ ಅಂದಾ.

ನಂಗ ಶಾಕ್ ಆತ. ಅಲ್ಲಾ, ಅದೇನ ಆಗಿತ್ತಂದರ ಮೂರನೇ ಕ್ರಾಸ್ ಒಳಗ ಒಬ್ಬರ ಕುಲಕರ್ಣಿ ಅಂತ ಅಜ್ಜಾ ಹೋಗಿದ್ದರಂತ, ಅವರು ಮುಕ್ತಿಧಾಮಕ್ಕ ಫೋನ್ ಮಾಡಿ ಬುಕ್ ಮಾಡಿದ್ದರು, ಈ ಕಡೆ ನಮ್ಮವರು ಬುಕ್ ಮಾಡಲಿಕ್ಕೆ ಹೋದಾಗ ಇವರು ಗಾಂಧಿನಗರ ಅಂತ ಹೇಳಿ ಬುಕ್ ಮಾಡಿ ಬಂದಿದ್ದರು. ಪಾಪ ಆ ಮುಕ್ತಿಧಾಮದವರು ಎರಡು ಕಡೆದವರ ಕುಲಕರ್ಣಿ ಅಂತ ಹೇಳಿದ್ದಕ್ಕ ಮ್ಯಾಲೆ ಇಬ್ಬರು ಗಾಂಧಿನಗರ ಅಂದಿದ್ದಕ್ಕ ಇಬ್ಬರು ಒಂದ ಕುಲಕರ್ಣಿ ಇರಬೇಕ ಬಿಡ ಅಂತ ಮೊದ್ಲ ಅವರ ಕಡೆ ಹೋಗಿ ಅವರ ಬಾಡಿ ಹೊತಗೊಂಡ ಹೋಗಿ ಬಿಟ್ಟಿದ್ದರು.

ಅವರಿಗೆ ನಾವು ಬ್ಯಾರೆ ಕುಲಕರ್ಣಿ, ನಮ್ಮ ಬಾಡಿ ಬ್ಯಾರೆ, ನಾವು ಸ್ಮಾರ್ತರು ಅವರ ವೈಷ್ಣೋರು ಅಂತ ಗೊತ್ತದ್ದಿದ್ದಿಲ್ಲಾ. ಆಮ್ಯಾಲೆ ನಾ ಆ ಡ್ರೖೆವರಗ ಎಲ್ಲಾ ತಿಳಿಸಿ ಹೇಳಿ ಆ ಕುಲಕರ್ಣಿ ಬಾಡಿ ಮುಕ್ತಿಧಾಮದಾಗ ಇಳಿಸಿದವನ ಪಟ್ಟನ ವಾಪಸ ಬಾ ಅಂತ ಹೇಳಿ ಮತ್ತ ಕರಸಿದೆ.

ಮುಂದ ಒಂದ ಅರ್ಧಾ ತಾಸಿಗೆ ಗಾಡಿ ಬಂತ, ನಾವ ಬಾಡಿ ತೊಗೊಂಡ ಮುಕ್ತಿಧಾಮಕ್ಕ ರೈಟ ಅಂದ್ವಿ. ಅಷ್ಟರಾಗ ಹನ್ನೊಂದುವರಿ ಆಗಲಿಕ್ಕೆ ಬಂದಿತ್ತ. ಮ್ಯಾನೇಜರ ಬ್ಯಾರೆ ಡ್ಯೂಟಿ ಮುಗಿಸಿ ಮನಿಗೆ ಹೋಗಿದ್ದಾ, ಇದ್ದ ಒಬ್ಬ ಸೆಕ್ಯೂರಿಟಿ ಗೇಟ ಹಾಕಲಿಕ್ಕತ್ತಿದ್ದಾ, ನಮ್ಮನ್ನ ನೋಡಿದವನ. ‘ಏ, ಮುಕ್ತಿಧಾಮ ಬಂದ ಆಗೇದ, ಬಾಡಿ ನಾಳೆ ತೊಗೊಂಡ ಬರ್ರಿ’ ಅಂತ ಅಂದ ಬಿಟ್ಟಾ.

ನಮ್ಮ ಜೊತಿ ಬಂದದ್ದ ಜೋಶಿಯವರಿಗೆ ಅವನ್ನ ಕೇಳಿದ ಕೂಡ್ಲೇ ತಲಿಕೆಟ್ಟತ ಕಾಣ್ತದ ಅದರಾಗ ಹೋದ ವರ್ಷ ಅವರಪ್ಪನ್ನ ಹೆಣಾ ವಾಪಸ ಕಳಸಿದಂವಾ ಇವನ ಆಗಿದ್ದಾ, ‘ಏ, ನಾವ ಅಜ್ಜಿ ಹೆಸರಿಲೆ ರಿಸರ್ವ್ ಮಾಡಿ ಹೋಗೇವಿ, ನಿಮ್ಮ ಗಾಡ್ಯಾಗ ತೊಗೊಂಡ ಬಂದೇವಿ, ಅದ ಹೆಂಗ ಬಂದ ಆಗ್ತದ’ ಅಂತ ಜೋರ ಮಾಡಿದರು. ಆ ಸೆಕ್ಯೂರಿಟಿ ನೋಡಿದರ ಮೊದ್ಲ ಒಂದ ಸ್ವಲ್ಪ ಟೈಟ್ ಆಗಿದ್ದ, ಜೋಶಿಯವರ ರಿಸರ್ವ ಮಾಡಿ ಹೋಗೆವಿ ಅಂದದ್ದಕ್ಕ ಅಂವಾ ತಲಿಕೆಟ್ಟ ‘ಏನ್… ನಿಮ್ಮಜ್ಜಿ ಸಾಯೊಕಿಂತ ಮೊದ್ಲ ರಿಸರ್ವ ಮಾಡಿದ್ದೇನ’ ಅಂದ ಅಂದಾ. ತೊಗೊ ಇವರಿಗೆ ಪಿತ್ತ ನೆತ್ತಿಗೇರತ ಇಲ್ಲಾ. ‘ನಮ್ಮಜ್ಜಿ ಹುಟ್ಟೊಕಿಂತಾ ಮೊದ್ಲ ರಿಸರ್ವ ಮಾಡಿದ್ದೆ’ ಅಂತ ಜೋರ ಮಾಡಿದರು. ತೊಗೊ ಇಬ್ಬರದು ಜೋರ ನಡಿತ. ನಾ ಮತ್ತೇಲ್ಲೇ ಮುಕ್ತಿಧಾಮದಾಗ ಮತ್ತೊಂದ ಹೆಣಾ ಬೀಳ್ತದ, ಮೊದ್ಲ ಲೇಟಾಗೇದ ಅಂತ ನಡಕ ಹೋಗಿ ಸೆಕ್ಯೂರಿಟಿಗೆ ಡ್ರೖೆವರ ಕನಫ್ಯೂಸ್ ಆಗಿ ಬ್ಯಾರೆ ಬಾಡಿ ತೊಗೊಂಡ ಹೋಗಿದ್ದಾ ಹಿಂಗಾಗಿ ಲೇಟಾತು ಅಂತ ಎಲ್ಲಾ ಕಥಿ ಹೇಳಿ ಸೈಡಿಗೆ ಕರದ ಅಡ್ಜಸ್ಟ ಮಾಡಿ ಮುಂದ ಅಜ್ಜಿದ ಎಲ್ಲಾ ಮುಗಿಸಿಸಿದೆ.

ಎಲ್ಲಾ ಮುಗಿಸಿ ಇನ್ನೇನ ಕಾಲ ತೊಳ್ಕೊಂಡ ಬರಬೇಕಾರ ಆ ಸೆಕ್ಯೂರಿಟಿ ಗೇಟ ಬಂದ ಮಾಡ್ಕೋತ ಜೋಶಿಯವರನ ನೋಡಿ, ‘ಮುಂದಿನ ಸರತೆ ಬರಬೇಕಾರ.. ಬಾಡಿ ಲಗೂನ ತೊಗೊಂಡ ಬಾ’ ಅಂತ ಅಂದ ಬಿಟ್ಟಾ…

ಜೋಶಿಯವರು ತಿರಗಿ ಅವಂಗ ಏನೋ ಹೇಳೊರಿದ್ದರು ಆದರ ಸ್ಮಶಾನದಿಂದ ಹೊರಗ ಬಂದ ಮ್ಯಾಲೆ ಮತ್ತ ತಿರಗಿ ಆ ಕಡೆ ನೋಡಬಾರದು ಅಂತ ಸುಮ್ಮನ ಇದ್ದರು.

ಆದರಗ ನಾ ತಿರಗಿ ನೋಡಿದೆ. ಗೇಟ್ ಬಂದ ಆತ, ಗೇಟ ಮ್ಯಾಲೆ

‘ಮುಕ್ತಿಧಾಮ ಬಂದ ಆಗಿದೆ, ಬಾಡಿ ನಾಳೆ ತೊಗೊಂಡ ಬರ್ರಿ’ ಅಂತ ರಟ್ಟಿನ ಬೋರ್ಡ್ ಹಾಕಿದ್ದರು.

(ಲೇಖಕರು ಹಾಸ್ಯ ಬರಹಗಾರರು)