More

    ಪುಟಾಣಿ ಸಕ್ಕರಿ ಪಲ್ಯಾಕ್ಕ ಯಾರ ಹಾಕ್ತಾರವಾ?

    ಪುಟಾಣಿ ಸಕ್ಕರಿ ಪಲ್ಯಾಕ್ಕ ಯಾರ ಹಾಕ್ತಾರವಾ?ಹೋದ ಶನಿವಾರ ನಮ್ಮವ್ವಾ ನಾ ಮಾರ್ನಿಂಗ್ ವಾಕಿಂಗ್ ಮುಗಿಸ್ಗೊಂಡ ಬರೋ ಪುರಸತ್ತ ಇಲ್ಲದ ‘ಇವತ್ತ ನಾಷ್ಟಾಕ್ಕ ಭಕ್ಕರಿಪಾ’ ಅಂದ್ಲು. ಹಂಗ ನಂಗ ಭಕ್ಕರಿ ಅಷ್ಟಕ್ಕಷ್ಟ ಆದರ ಬಿಸಿ ಬಿಸಿ ಮಾಡಿ ಕೊಟ್ಟರೂ ನಾ ತಿನ್ನೋದ ಒಂದ ತೊಗೊ ಅಂತ ಹೂಂ ಅಂದೆ.

    ಸರಿ, ನಾಷ್ಟಕ್ಕ ಭಕ್ಕರಿ ಚವಳಿಕಾಯಿ ಪಲ್ಯಾ ಮಾಡಿದ್ದರು. ನಾ ಹಿಂಗ ಚವಳಿಕಾಯಿ ಪಲ್ಯಾ ತಿನ್ನೋದಕ್ಕ ಅದರಾಗ ಪುಟಾಣಿ ಬಂದ್ವು, ಮ್ಯಾಲೆ ಪಲ್ಯಾ ಸಿಹಿ ಸಿಹಿ ಹತ್ತಿ ಒಂದ್ಯಾರಡ ಸಕ್ಕರಿ ಹರಳ ಬಾಯಾಗ ಬಂದ್ವು. ನಾ ಇದೇನ ಇಕಿ ಒಗ್ಗರಣಿ ಒಳಗ ಪುಟಾಣಿ ಸಕ್ಕರಿ ಹಾಕ್ಯಾಳೇನ ಅಂತ ಕೇಳಿದರ ‘ಏ.. ನಿನ್ನೆ ಶುಕ್ರವಾರ, ಲಕ್ಷ್ಮೀಗೆ ಪುಟಾಣಿ-ಸಕ್ಕರಿ ನೈವಿದ್ಯ ಮಾಡಿದ್ದ ಇತ್ತ, ಅದನ್ನ ನಿನ್ನ ಮಕ್ಕಳ ಯಾರೂ ತಿನ್ನಂಗೇಲಪಾ. ಹಿಂಗಾಗಿ ಬಟ್ಲದಾಗ ಹಂಗ ಉಳದಿತ್ತ ಅಂತ ಪಲ್ಯಾಕ್ಕ ಹಾಕೇನ ತೊಗೊ, ಪ್ರಸಾದ ಏನ ಆಗಂಗಿಲ್ಲಾ ಬಾಯಿಮುಚಗೊಂಡ ತಿನ್ನ’ ಅಂದ್ಲು.

    ನಾ ಸಿಟ್ಟಿಗೆದ್ದ ‘ಪುಟ್ಟಾಣಿ ಸಕ್ಕರಿ ಪಲ್ಯಾಕ್ಕ ಯಾರ ಹಾಕ್ತಾರವಾ?’ ಅಂದರ ‘ಮತ್ತೇನ ಮಾಡ್ಬೇಕ, ದೇವರ ನೈವಿದ್ಯ ಯಾರೂ ತಿನ್ನಲಿಲ್ಲಾ ಅಂದರ ಛಲ್ಲ ಬೇಕೇನ್?’ ಅಂತ ನಂಗ ಜೋರ ಮಾಡಿದ್ಲು.

    ಒಂದ ಕಾಲದಾಗ ನಮ್ಮವ್ವಾ ಕೊಬ್ಬರಿ ಸಕ್ಕರಿ, ಇಲ್ಲಾ ಪುಟಾಣಿ ಸಕ್ಕರಿ ಶುಕ್ರವಾರಕ್ಕೊಮ್ಮೆ ಲಕ್ಷ್ಮಿಗೆ ನೈವಿದ್ಯ ಮಾಡಿದರ ನಾನೂ ನನ್ನ ತಂಗಿ ಅದನ್ನ ತಿನ್ನಲಿಕ್ಕೆ ಜಗಳಾಡ್ತಿದ್ವಿ. ಈಗೀನ ಹುಡುಗರ ಪುಟಾಣಿ-ಸಕ್ಕರಿಗೆ ಪ್ರಸಾದ ಅಂದರ ನಗತಾವ. ಅಲ್ಲ ಆವಾಗ ದೇವರಿಗೆ ಏನೂ ನೈವಿದ್ಯ ಮಾಡ್ಲಿಕ್ಕೆ ಆಗಲಿಲ್ಲಾ ಅಂದರ ಒಂದ ಪುಟಾಣಿ- ಸಕ್ಕರಿ ಇಟ್ಟ ಎರಡ ಊದಿನಕಡ್ಡಿ ಬೆಳಗಿ ಬಿಟ್ಟರ ದೇವರ ಸಹಿತ ಖುಷ್ ಆಗ್ತಿದ್ದರ. ಈಗ ದೇವರಿಗೆ ಸಹಿತ ಕಡಮಿ ಕಡಮಿ ಅಂದರು ಒಂದ ಪಾವ್ ಕೆ.ಜಿ ಮಿಶ್ರಾ ಫೇಡೆ ಇಟ್ಟ ನೈವಿದ್ಯ ಮಾಡಬೇಕು.

    ಅದರಾಗ ನಮ್ಮವ್ವಗ ಮೊದ್ಲಿಂದ ಒಟ್ಟ ಏನ ತಿನ್ನೊ ವಸ್ತು ಉಳದರ ಅದನ್ನ ಕೆಡಸಬಾರದು ಅಂತ ಎಲ್ಲೇರ-ಎದರಾಗರ ಮಿಕ್ಸ್ ಮಾಡಿ ಅಡಗಿ ಮಾಡೊ ಚಟಾ. ಹಂಗ ಕಷ್ಟಕಾಲದಾಗ ಅಕಿ ಬೆಳದ ಬಂದದ್ದಕ್ಕ ಇವತ್ತೂ ಏನೂ ಛಲ್ಲಂಗಿಲ್ಲಾ. ಕಡಿಕೆ ಯಾರೂ ತಿನ್ನಲಿಲ್ಲಾ ಅಂದರ ತಾ ತಿಂತಾಳ ಹೊರತು ಕೆಡಸಂಗಿಲ್ಲ ಬಿಡ್ರಿ. ನಾ ಆತು ನಮ್ಮಪ್ಪಾತು ಎಷ್ಟ ಅಕಿಗೆ ನೀ ಸುಟ್ಟು ಸುಟ್ಟು ಸುಡಗಾಡ ತಿಂದ ಹೊಟ್ಟಿ ಕೆಡಸ್ಗೋತಿ ಅಂತ ಅಂದರೂ ಅಕಿ ಏನ ಕೇಳ್ತಿದ್ದಿಲ್ಲಾ. ಅದ ಏನೋ ಅಂತಾರಲಾ ಇಟ್ಟ ಕೆಡಸೊದಕಿಂತ ತಿಂದ ಕೆಡಸ್ಗೋಳೋದ ಅಂತ, ಹಂಗ ನಮ್ಮವ್ವ. ಆದರ ಖರೇ ಹೇಳ್ಬೇಕಂದರ ನಮ್ಮವ್ವಾ ಹಿಂಗ ಉಳದಿದ್ದ-ಬಳದಿದ್ದ ಎಲ್ಲಾ ತಿನ್ನಕೋತ ಇದ್ದಾಳ ಅಂತ ಇವತ್ತಿಗೂ ಆರಾಮ ಇದ್ದಾಳ ಅಂತ ಒಮ್ಮೋಮ್ಮೆ ಅನಸ್ತದ.

    ನೀವ ಏನೇನ ಉಳದರ ನಮ್ಮವ್ವ ಅವನ್ನ ಹೆಂಗ ಉಪಯೋಗ ಮಾಡ್ತಾಳ ಅಂತ ಕೇಳಿದರ ನಿಮಗ ಆಶ್ಚರ್ಯ ಆಗ್ತದ.

    ನಮ್ಮವ್ವ ಮೊದ್ಲಿಂದ ಹುಳಿಗೆ ಅಗದಿ ಫೇಮಸ್, ನಮ್ಮ ಬಳಗದವರ ಯಾರರ ಊರಿಂದ ಬಂದರಿಲ್ಲ ಸಿಂಧು ಅನ್ನಾ ಹುಳಿ ಮಾಡ ಸಾಕ ಅನ್ನೋರ. ಅದರಾಗ ಇಕಿ ಹುಳಿ ಮಾಡಿದ್ಲು ಅಂದರ ಅಗದಿ ಒಂದ ಪಾತೇಲಿ ತುಂಬ ಮಾಡೋಕಿ. ನಮ್ಮಪ್ಪ ಅಕಿ ಹುಳಿ ಮಾಡಿದಾಗೊಮ್ಮೆ ‘ಇಷ್ಟ ಹುಳಿ ಒಳಗ ನಿಮ್ಮಪ್ಪ ನಂದ ಲಗ್ನಾ ಮಾಡಿದ್ದಾ’ ಅಂತ ಬೈತಿದ್ದಾ. ಮತ್ತ ಅಕಿ ಹುಳಿ ಮಾಡಿದಾಗೋಮ್ಮೆ ಅದ 100% ಮರದಿವಸಕ್ಕ ಉಳಿತಿತ್ತ. ಮುಂದ ಅದನ್ನ ಹಳಸಬಾರದ ಅಂತ ರಾತ್ರಿ ಮಳಸೋದು, ಮರದಿವಸ ಮುಂಜಾನೆ ಮಳಸೋದ. ಆ ಹುಳಿ ಮಳ್ಳಿಸಿ ಮಳ್ಳಿಸಿ ಮರದಿವಸಕ್ಕ ಪಲ್ಯಾ ಆಗಿರ್ತಿತ್ತ. ಏನರ ಅಂದರ ‘ಅಯ್ಯ ತಂಗಳ ಹುಳಿ ಭಾರಿ ರುಚಿ ಇರ್ತದ ತೊಗೊ ನಿಂಗೇನ ಗೊತ್ತ ಅದರ ರುಚಿ’ ಅಂತ ನನಗ ಜೋರ್ ಮಾಡೋಕಿ. ಇನ್ನ ಒಮ್ಮೊಮ್ಮೆ ಆ ಉಳದದ್ದ ಹುಳಿನ ಮರದಿವಸ ಬಿಸಿ- ಬಿಸಿ ಅನ್ನದ ಜೋತಿ ಮಿಕ್ಸ್ ಮಾಡಿ ಬಿಸಿಬ್ಯಾಳಿ ಅನ್ನ ಮಾಡಿ ಬಿಟ್ಟಿರ್ತಿದ್ದಳು. ಇನ್ನ ಹುಳಿ ಛಲೋ ಮಾಡೋಕಿ ಅಂತ ಅಂದ ಮ್ಯಾಲೆ ಬಿಸಿಬ್ಯಾಳಿ ಅನ್ನನು ಛಲೋನ ಆಗಿರ್ತಿತ್ತ. ಅದಕ್ಕೂ ಜನಾ ಸಿಂಧೂ ಏನ ಬಿಸಿಬ್ಯಾಳಿ ಅನ್ನಾ ಮಾಡ್ತಾಳ ಅಂತ ಅನ್ನೋರ. ಅದರಾಗ ಬಿಸಿ ಬ್ಯಾಳಿ ಅನ್ನ ನನ್ನ ಫೇವರೇಟ್ ಬ್ಯಾರೆ. ನಾ ಅಂತೂ ಮೂರೂ ಹೊತ್ತು ಅದನ್ನ ತಿಂದ-ತಿಂದ ಮರದಿವಸ ಮೂರ ಹೊತ್ತ ಜೆಲೋಸಿಲ್ ಎಮ್​ಪಿ.ಎಸ್ ತೊಗೊತಿದ್ದೆ. ಅಷ್ಟ ರುಚಿ ಇರ್ತಿತ್ತ ನಮ್ಮವ್ವನ ಬಿಸಿ ಬ್ಯಾಳಿ ಅನ್ನ. ಒಂದ ವಿಚಾರ ಮಾಡ್ರಿ ಹಿಂದಿನ ದಿವಸದ ಹುಳಿ ಬಿಸಿಬ್ಯಾಳಿ ಅನ್ನನ ಇಷ್ಟ ರುಚಿ ಇರ್ತದ ಅಂದರ ಬಿಸಿ ಬಿಸಿ ಅನ್ನಾ-ಹುಳಿದ ಬಿಸಿಬ್ಯಾಳಿ ಅನ್ನ ಹೆಂಗ ಇರಬಾರದ ಅಂತ.

    ಅಲ್ಲಾ, ಈಗ ಗೊತ್ತ ಆತಲಾ ನಿಮಗ ಯಾಕ ನಾ ಹಗಲಗಲಾ ಅಸಿಡಿಟಿ ಅಸಿಡಿಟಿ ಅಂತೇನಿ ಅಂತ. ಯಾಕಂದರ ಮನ್ಯಾಗ ನಮ್ಮವ್ವನ mother of acidity ಇದ್ದಾಳ. ಆಕಿಗೆ ಏನರ ಹೇಳಿದರ ‘ನಾನೂ ಅದನ್ನ ಉಂಡೇನಿಲ್ಲ? ನನಗ್ಯಾಕ ಆಗಂಗಿಲ್ಲಾ, ನಿನಗ ಯಾಕ ಆಗ್ತದ’ ಅಂತಾಳ. ಅಲ್ಲಾ ಅಕಿ ಯಾ ಮಾಡೇಲ್ ನಾವ ಯಾ ಮಾಡೆಲ್? ನಾವೆಲ್ಲಾ ಸಣ್ಣೋರಿದ್ದಾಗಿಂದ ಉಂಡದ್ದ ಕರಗಸಲಿಕ್ಕೆ woodwards gripe water ಕುಡಗ ripe ಆದೋರ. ಇವತ್ತಿಗೂ ಒಂದಿಲ್ಲಾ ಒಂದ riped ವಾಟರ್ ಮ್ಯಾಲೆ ಸಂಸಾರ ಜೀರ್ಣೀಸಿಗೋತ ಹೊಂಟೇವಿ ಆ ಮಾತ ಬ್ಯಾರೆ.

    ಇನ್ನ ಒಮ್ಮೊಮ್ಮೆ ಹುಳಿ, ಸಾರ ಉಳದರ ಅದನ್ನ ಸೀದಾ ಥಾಲಿಪಟ್ಟ್ ಹಿಟ್ಟಿನಾಗ ಕಲಿಸಿ ಥಾಲಿ ಪಟ್ ಮಾಡಿ ಬಿಡೋಕಿ. ಮತ್ತ ಥಾಲಿಪಟಗೆ ಚಟ್ನಿ ಎಲ್ಲೇ ಮಾಡೋದ ಇದ ಮಸಾಲಿ ಥಾಲಿಪಟ್ ಅಂದ ಬಿಡೋಕಿ. ಕೊಸಂಬರಿ ಉಳದರ ಅದನ್ನೂ ಥಾಲಿಪಟಗೆ ಹಾಕ್ತಾಳ, ಬಟಾಟಿ ಪಲ್ಯಾ ಉಳದರ ಮರದಿವಸ ಆಲೂ ಪರೋಟಾ ಮಾಡ್ತಾಳ. ಇನ್ನ ಟಿ.ವಿ ನೋಡ್ಕೋತ ನಾಲ್ಕ-ಐದ ಕುಕ್ಕರ ಸೀಟಿ ಹೊಡಿಸಿ ಅನ್ನ ಉಕ್ಕಿ ಹೋಗಿ ಗಂಜಿ ಆದಂಗ ಆಗಿತ್ತ ಅಂದರ ಅದನ್ನ ಮರದಿವಸ ಒಂದ ಥಾಲಿಪಟ್ಟರ ಮಾಡೋಕಿ ಇಲ್ಲಾ ಆ ಮೆತ್ತಗನಿ ಅನ್ನಕ್ಕ ಇನ್ನೊಂದ ಮೂರ ನಾಲ್ಕ ಹಿಟ್ಟ ಸೇರಿಸಿ ದ್ವಾಸಿ, ಫಡ್ ಮಾಡಿ ಬಿಡೋಕಿ. ಪಾಪ ನನ್ನ ಮಕ್ಕಳ ಅಜ್ಜಿ ದ್ವಾಸಿ ಮಾಡ್ಯಾಳ, ಫಡ್ ಮಾಡ್ಯಾಳ ಅಂತ ಖುಶ್ ಆಗಿರ್ತಿದ್ದರ. ಅದರ ಅವಕ್ಕೇನ ಗೊತ್ತ ಇದ ನಿನ್ನಿ ಕುಕ್ಕಾರನಾಗ ಉಕ್ಕಿದ್ದ ತಳದಾಗಿನ ಅನ್ನದ್ದ ಅಂತ.

    ಅನ್ನಂಗ ಇನ್ನೊಂದ ದೇವರ ಕಾರಣ ಇರೋ ಐಟೇಮ್ ಬಗ್ಗೆ ಹೇಳೋದ ಮರತೆ. ನಮ್ಮ ಮನ್ಯಾಗ ಅಕಸ್ಮಾತ ಈ ಪುಟಾಣಿ-ಸಕ್ಕರಿಕಿಂತಾ ಹೈಲೇವೇಲ್ ನೈವಿದ್ಯ ಮಾಡೋದಿತ್ತಂದರ ಒಂದ ಡಜನ್ ಬಾಳೆಹಣ್ಣ ತಂದ ಅದರಾಗಿನ ಎರಡ-ಎರಡ ಬಾಳೆಹಣ್ಣ ನೈವಿದ್ಯ ಮಾಡ್ತಾರ. ಹಂಗ ನಮ್ಮ ಮನ್ಯಾಗ ಮೊದ್ಲಿಂದ ಯಾರಿಗೂ ದಿವಸಾ ಬಾಳೆಹಣ್ಣ ತಿನ್ನೋ ಚಟಾ ಇಲ್ಲಾ. ಹಿಂಗಾಗಿ ಅವ ಹಂಗ ಡೈನಿಂಗ್ ಟೇಬಲ್ ಮ್ಯಾಲೆ ಇದ್ದ ಇದ್ದ ಕಡಿಕೆ ಖರ್ರಗ್ ಆಗ್ತಾವ. ಇನ್ನೇನ ಹಣ್ಣಿಗೆ ನೋರ್ಜ ಹತ್ತತಾವ ಅನ್ನೋದಿವಸ ಆ ಬಾಳೆಹಣ್ಣಿಂದ ಬನ್ಸ್ ಮಾಡಿ ಬಿಡ್ತಾಳ. ಮತ್ತ ನನ್ನ ಮಕ್ಕಳ ಖುಶ್. ಇವತ್ತ ಬನ್ಸ್ ಮಾಡ್ಯಾರ ಅಂತ ತಿಂದ ಮ್ಯಾಲೆ ಸಾಲಿಕೆ ಕಟಗೊಂಡ ಹೋಗ್ತಾವ.

    ಅಲ್ಲಾ ಹಂಗ ನಮ್ಮವ್ವ ಇನ್ನು ಯಾವ-ಯಾವ ಐಟೆಮ್ ಉಳದರ ಏನೇನ ಮಾಡ್ತಾಳ ಅಂತ ಹೇಳ್ಕೋತ ಹೊಂಟರ ಗಿರಮಿಟ್ ಅಂಕಣ ಆಗಂಗಿಲ್ಲಾ ಅದ ಒಂದ ಸಪ್ಲಿಮೆಂಟ್ ಮಾಡಬೇಕಾಗ್ತದ ಆ ಮಾತ ಬ್ಯಾರೆ. ಆದರೂ ಏನ ಅನ್ನರಿ ನಮ್ಮವ್ವ ತುಟ್ಟಿ ಕಾಲ ಒಟ್ಟ ಛಲ್ಲಬಾರದು ಅಂತ ಮಾಡ್ತಾಳ. ಆಮ್ಯಾಲೆ ಏನ ಮಾಡ್ಲಿ ಅದ ನಿನ್ನೀದ ಉಳದಿದ್ದರಲೇನರ ಮಾಡಿದ್ದ ಇರಲಿ ಇಲ್ಲಾ ಇವತ್ತಿಂದ ತಾಜಾ ತಾಜಾನರ ಇರಲಿ ಅಡಗಿ ಮಾತ್ರ ಅಗದಿ ರುಚಿ ಮಾಡ್ತಾಳ ಬಿಡ್ರಿ ಸುಳ್ಳ ಯಾಕ ಹೇಳ್ಬೇಕ. ಅಲ್ಲಾ ಬೇಕಾರ ನೀವ ಬರ್ರಿ ಒಂದ ಸಲಾ ನಮ್ಮ ಮನಿಗೆ ಬಿಸಿಬ್ಯಾಳಿ ಅನ್ನಾ ಉಣ್ಣಲಿಕ್ಕೆ…. ಹಂಗ ಬರೋದ ಇದ್ದರ ಒಂದ ದಿವಸ ಮೊದ್ಲ ಹೇಳ್ರಿ ಮತ್ತ….

    ಹೇ…ಹೇ….ಒಂದ ದಿವಸ ಮೊದ್ಲ ಹೇಳ್ರಿ ಅಂತ ಅಂದಿದ್ದ ಹಿಂದಿನ ದಿವಸ ಹುಳಿ ಮಾಡಿ ಮಳ್ಳಿಸಿ-ಮಳ್ಳಿಸಿ ಮರದಿವಸ ಬಿಸಿ ಬ್ಯಾಳಿ ಅನ್ನಾ ಮಾಡ್ಲಿಕ್ಕೆ ಅಲ್ಲಾ, ನೀವ ತಪ್ಪ ತಿಳ್ಕೊಬ್ಯಾಡ್ರಿ. ಒಂದ ದಿವಸ ಮೊದ್ಲ ನೀವ ಬರ್ತೀರಿ ಅಂದರ ಅದಕ್ಕ ಪ್ರಿಪೇರ್ ಆಗಿ ಬಿಸಿ ಅನ್ನದ್ದ ಬಿಸಿಬ್ಯಾಳಿ ಅನ್ನಾನ ಮಾಡಸ್ತೇನಿ. ಅಲ್ಲರಿ ನೀವು ಬರೋದ ಹೆಚ್ಚೊ ನಮ್ಮವ್ವ ಫ್ರೇಶ್ ಅಡಗಿ ಮಾಡೋದ ಹೆಚ್ಚೊ.

    (ಲೇಖಕರು ಹಾಸ್ಯ ಬರಹಗಾರರು)

    ಡಾ.ರಾಜ್​​ ಕುಟುಂಬದ ವಿರುದ್ಧ ಹಗುರ ಮಾತು ಆರೋಪ; ಪುನೀತ್ ಕೆರೆಹಳ್ಳಿ ಮೇಲೆ ದಾಳಿ, ಅಂಗಿ ಹರಿದು ಹೊಯ್​ಕೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts