ಇಬ್ಬರು ಬಾಲಕಿಯರ ಮೇಲೆ ಎರಡು ದಿನ ನಿರಂತರ ಸಾಮೂಹಿಕ ಅತ್ಯಾಚಾರ

ಅಗರ್ತಲಾ: 13 ವರ್ಷದ ಬಾಲಕಿ ಹಾಗೂ ಆಕೆಯ ಅಕ್ಕನನ್ನು ಅಪಹರಣ ಮಾಡಿ ಬಂಧಿಸಿಟ್ಟು ಎರಡು ದಿನ ಸತತವಾಗಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ತ್ರಿಪುರದ ಉನಕೋಟಿ ಜಿಲ್ಲೆಯಲ್ಲಿ ನಡೆದಿದೆ.

34 ವರ್ಷದ ಆಟೋ ಚಾಲಕ ಮೊದಲ ಅಪರಾಧಿಯಾಗಿದ್ದು ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹೋದರಿಯರಿಬ್ಬರೂ ನವೆಂಬರ್​ 9ರಂದು ಕೈಲಾಶಹರ್​ ಸೇತುವೆ ಬಳಿ ನಿಂತು ಮನೆಗೆ ಹೋಗಲು ವಾಹನಕ್ಕಾಗಿ ಕಾಯುತ್ತಿದ್ದರು. ಆಗ ಅಲ್ಲಿಗೆ ಬಂದ ಆಟೋವನ್ನು ಹತ್ತಿದ್ದಾರೆ. ಆದರೆ ಆ ಚಾಲಕ ಸ್ವಲ್ಪ ದೂರ ಹೋಗುವಷ್ಟರಲ್ಲಿ ಮತ್ತಿಬ್ಬರು ಪುರುಷರನ್ನು ಆಟೋಕ್ಕೆ ಹತ್ತಿಸಿಕೊಂಡಿದ್ದಲ್ಲದೆ, ತನಗೆ ಪರಿಚಯದವರು ಎಂದು ಹೇಳಿಕೊಂಡಿದ್ದಾನೆ.

ಬಳಿಕ ಹುಡುಗಿಯರನ್ನು ಮನೆಗೆ ಬಿಡದೆ ಅವರ ಬಾಯಿಯನ್ನು ಟವೆಲ್​ನಿಂದ ಮುಚ್ಚಿ ಕೋವಾಯ್​ ಜಿಲ್ಲೆಯ ತೇಲಿಯಾಮುರಾ ಪಟ್ಟಣಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ಮನೆಯೊಂದರ ಕೋಣೆಯಲ್ಲಿ ಹುಡುಗಿಯರನ್ನು ಬಂಧಿಸಿಟ್ಟು ಸತತ ಎರಡು ದಿನ ಮೂರು ಜನರೂ ನಿರಂತರವಾಗಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಎರಡು ದಿನಗಳಾದ ಬಳಿಕ ಅವರನ್ನು ತೇಲಿಯಾಮುರಾ ರೈಲ್ವೆ ಸ್ಟೇಶನ್​ನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಆ ಹುಡುಗಿಯರು ತಮ್ಮ ಬಗ್ಗೆ ರೈಲ್ವೆ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಕೈಲಾಶಹರ್​ ಮಹಿಳಾ ಪೊಲೀಸ್​ ಠಾಣೆಯ ಅಧಿಕಾರಿ ಸಂಪಾ ದಾಸ್​ ತಿಳಿಸಿದ್ದಾರೆ.

ರೈಲ್ವೆ ಪೊಲೀಸರು ಹುಡುಗಿಯರನ್ನು ನಮ್ಮ ಸುಪರ್ದಿಗೆ ಕೊಟ್ಟಿದ್ದರು. ನಂತರ ನವೆಂಬರ್​ 12ರಂದು ಅವರ ಪಾಲಕರಿಗೆ ಮಕ್ಕಳನ್ನು ಒಪ್ಪಿಸಿದ್ದೇವೆ ಎಂದು ತೇಲಿಯಾಮುರಾ ಪೊಲೀಸ್​ ಅಧಿಕಾರಿ ಹೇಳಿದ್ದಾರೆ.
ಸಹೋದರಿಯರ ತಾಯಿ ದೂರು ನೀಡಿದ್ದು, ಅದರ ಆಧಾರದ ಮೇಲೆ ಆಟೋ ಚಾಲಕನನ್ನು ಬಂಧಿಸಿದ್ದೇವೆ. ತನಿಖೆ ಮುಂದುವರಿಯಲಿದೆ ಎಂದು ಎಎಸ್​ಪಿ ತಿಳಿಸಿದ್ದಾರೆ.