ಶಾಲೆಯಲ್ಲೇ ಬಾಲಕಿ ಮಗುವಿಗೆ ಜನ್ಮ ಕೊಟ್ಟ ಪ್ರಕರಣ: ಹುಟ್ಟೂರಲ್ಲಿ ಎಂಟು ತಿಂಗಳ ಹಿಂದೆ ನಡೆದಿತ್ತು ಅತ್ಯಾಚಾರ

ಭುವನೇಶ್ವರ(ಒಡಿಶಾ): ಖಂದಮಾಲ್​ನ ವಸತಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿದ ಪ್ರಕರಣವನ್ನು ಕ್ಷಿಪ್ರಗತಿಯಲ್ಲಿ ತನಿಖೆ ನಡೆಸಿರುವ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಿ, ಅತ್ಯಾಚಾರಿಯನ್ನು ಬಂಧಿಸಿದ್ದಾರೆ.

ಹಾಸ್ಟೆಲ್​ನಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ನಡೆಸುತ್ತಿದ್ದ ವಿದ್ಯಾರ್ಥಿನಿ 7-8 ತಿಂಗಳ ಹಿಂದೆ ತನ್ನ ಹುಟ್ಟೂರಿಗೆ ತೆರಳಿದ್ದ ಸಂದರ್ಭದಲ್ಲಿ 23 ವರ್ಷದ ಪರಿಚಿತ ವ್ಯಕ್ತಿಯೊಬ್ಬ ಆಕೆ ಮೇಲೆ ಅತ್ಯಾಚಾರ ನಡೆಸಿದ್ದ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪ್ರತೀಕ್​ ಸಿಂಗ್​ ತಿಳಿಸಿದ್ದಾರೆ.

ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಆರೋಪಿಯನ್ನೂ ಬಂಧಿಸಿದ್ದಾರೆ. ಇದೇ ವೇಳೆ ಬಾಲಕಿಯ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ್ದ ಶಾಲೆಯ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಖಂದಮಾಲ್​ ಜಿಲ್ಲೆಯ ಶಾಲೆಯಲ್ಲಿ ಬಾಲಕಿ ಮಗುವಿಗೆ ಜನ್ಮ ನೀಡುತ್ತಲೇ ಅತ್ತ ಸ್ಥಳೀಯರು ಶಾಲೆ ಬಳಿ ತೀವ್ರ ಪ್ರತಿಭಟನೆ ನಡೆಸಿದ್ದರು. ಈ ಅಪರಾಧಕ್ಕೆ ಕಾರಣವಾದವರನ್ನು ಕೂಡಲೇ ಬಂಧಿಸಬೇಕು ಎಂದು ಪೊಲೀಸರನ್ನು ಆಗ್ರಹಿಸಿದ್ದರು.

ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿದ ಎಂಟನೇ ತರಗತಿ ವಿದ್ಯಾರ್ಥಿನಿ: ಸ್ಥಳೀಯರಿಂದ ಪ್ರತಿಭಟನೆ