ಪ್ರಾಣಿಚೇಷ್ಟೆ ಬೇಡ!

ಮೃಗಾಲಯ ವೀಕ್ಷಣೆಗೆ ತೆರಳಿದಾಗ ಲಕ್ಷಣವಾಗಿ ಪ್ರಾಣಿಗಳನ್ನು ನೋಡಿಕೊಂಡು ಸಂತೋಷಿಸುವ ಬದಲು, ಅವನ್ನು ಕೆರಳಿಸುವುದು ಇಲ್ಲವೇ ಅವುಗಳ ಆವರಣವನ್ನು ಪ್ರವೇಶಿಸುವ ದುಸ್ಸಾಹಸಕ್ಕೆ ಮುಂದಾಗುವುದು ಕೆಲವರ ಜಾಯಮಾನ. ಹೀಗೆ ಹುಲಿಯ ಆವರಣದಲ್ಲಿ ಸಿಲುಕಿದ ವ್ಯಕ್ತಿಯೊಬ್ಬ ಅದರಿಂದ ಅಪಾಯ ಒದಗುವುದು ಖಾತ್ರಿಯಾಗುತ್ತಿದ್ದಂತೆ, ತನ್ನನ್ನು ಏನೂ ಮಾಡಬೇಡವೆಂದು ಅದರ ಮುಂದೆ ಗೋಗರೆದಂಥ ಘಟನೆಯನ್ನು ಕೆಲ ತಿಂಗಳ ಹಿಂದೆ ಚಿತ್ರಸಮೇತ ವೀಕ್ಷಿಸಿದ್ದೇವೆ. ಅಂಥದೇ ಘಟನೆಯೊಂದು ಚೀನಾದಿಂದ ವರದಿಯಾಗಿದೆ.

ದೈತ್ಯ ಪಾಂಡಾಗಳ ತಳಿವರ್ಧನೆಗೆ ಸಂಬಂಧಿಸಿದ ಅಲ್ಲಿನ ಸಂಶೋಧನಾ ಕೇಂದ್ರವೊಂದರಲ್ಲಿ ಪಾಂಡಾ ಕರಡಿಗಳಿರುವ ಒಂದು ಆವರಣವಿದ್ದು, 8 ವರ್ಷದ ಬಾಲಕಿಯೊಬ್ಬಳು ಅಚಾನಕ್ಕಾಗಿ ಅದರೊಳಗೆ ಬಿದ್ದುಬಿಟ್ಟಳಂತೆ. ಇದನ್ನು ಕಂಡು ಎರಡು ಪಾಂಡಾಗಳು ಅವಳೆಡೆಗೆ ಹೆಜ್ಜೆಹಾಕಲಾರಂಭಿಸಿದಾಗ ಆ ಹುಡುಗಿ ಸಹಜವಾಗೇ ಗಾಬರಿಯಾದಳಂತೆ. ಕಾವಲುಭಟನೊಬ್ಬ ಕೋಲೊಂದನ್ನು ಇಳಿಬಿಟ್ಟು ಅವಳನ್ನು ಮೇಲಕ್ಕೆ ಸೆಳೆಯಲು ಯತ್ನಿಸಿದರೂ ಸಫಲವಾಗಲಿಲ್ಲ. ಈ ಮಧ್ಯೆ ಮತ್ತೊಂದು ಕರಡಿಯೂ ಗುಂಪಿಗೆ ಸೇರಿಕೊಂಡಿದ್ದನ್ನು ಕಂಡ ಅತ, ಇನ್ನು ತಡಮಾಡಿದರೆ ಕಷ್ಟ ಎಂದುಕೊಂಡು, ಆವರಣದೊಳಗೆ ಧುಮುಕಿ ಆ ಹುಡುಗಿಯನ್ನು ಮೇಲೆತ್ತಿ ರಕ್ಷಿಸಿ ತಾನೂ ಆಚೆ ಬಂದನಂತೆ.

ಪಾಂಡಾಗಳು ಹೊರಗೆ ಕಾಣುವಷ್ಟು ಸೌಮ್ಯವೂ ಅಲ್ಲ, ವಿಧೇಯವೂ ಅಲ್ಲ ಎನ್ನುತ್ತಾರೆ ಪ್ರಾಣಿತಜ್ಞರು. ಹೀಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವಿರುವುದು ಒಳ್ಳೆಯದಲ್ಲವೇ?

Leave a Reply

Your email address will not be published. Required fields are marked *