ಬಾಲಕಿ ಮೇಲೆ ಅತ್ಯಾಚಾರ: ಮಗಳೇ, ನಿನಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುತ್ತೇವೆ ಎಂದ ಸಾಧ್ವಿ ಪ್ರಜ್ಞಾ

ಭೋಪಾಲ್​: ತನ್ನ ಅತ್ತೆಯೊಂದಿಗೆ ದೇವಸ್ಥಾನಕ್ಕೆ ತೆರಳಿದ್ದ 12 ವರ್ಷದ ಬಾಲಕಿ ಮೇಲೆ ಇಬ್ಬರು ಅತ್ಯಾಚಾರ ಎಸಗಿ ಹತ್ಯೆಗೈದ ದಾರುಣ ಘಟನೆ ನಡೆದಿದೆ.

ಈ ಪ್ರಕರಣದಲ್ಲಿ ಬಾಲಕಿಯ ಅತ್ತೆ 16 ವರ್ಷದ ಯುವತಿಯ ಪಾತ್ರವೂ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯನ್ನು ಆ ಯುವತಿ ಬಲವಂತದಿಂದ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಳು. ಅಲ್ಲಿಂದ ಆ ಇಬ್ಬರು ಪುರುಷರು ಬಾಲಕಿಯನ್ನು ಏಕಾಂತದ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅತ್ಯಾಚಾರ ಎಸಗಿದ್ದಾರೆ.

ಅದಾದ ಬಳಿಕ ಅವಳ ತಲೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆಗೈದಿದ್ದಾರೆ. ಆರೋಪಿಗಳು ಬಾಲಕಿಯನ್ನು ಕರೆದೊಯ್ಯುವಾಗ ಆಕೆಯ ಅತ್ತೆ ಅಲ್ಲೆಲ್ಲೂ ಇರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮರುದಿನ ಬಾಲಕಿಯ ಕುಟುಂಬದವರು ಆಗಮಿಸಿ ದೂರು ದಾಖಲಿಸಿದ್ದಾರೆ. ಆರೋಪಿಗಳಿಬ್ಬರೂ ಆ ಬಾಲಕಿಯ ನೆರೆಮನೆಯವರೇ ಆಗಿದ್ದು, ಅವಳ ಅತ್ತೆ ಸೇರಿ ಮೂವರನ್ನೂ ಬಂಧಿಸಲಾಗಿದೆ.

ಘಟನೆಯ ಬಗ್ಗೆ ಭೋಪಾಲ್​ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್​ ಠಾಕೂರ್​ ಟ್ವೀಟ್​ ಮಾಡಿದ್ದು, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಮುಖ್ಯಮಂತ್ರಿ ಕಮಲನಾಥ್​ ಅವರು ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಹಾಗೇ ಮಗಳೇ, ನಾವು ನಿನಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ವಿಷಯ ಕೇಳುತ್ತಿದ್ದಂತೆ ಅಸ್ವಸ್ಥರಾದ ಬಾಲಕಿಯ ತಾಯಿಗೆ ಚಿಕಿತ್ಸೆ ಕೊಡಿಸಲು ಸ್ವತಃ ಪ್ರಜ್ಞಾ ಸಿಂಗ್​ ಅವರೇ ಕರೆದುಕೊಂಡು ಹೋಗಿದ್ದಾರೆ.

ಮುಖ್ಯಮಂತ್ರಿ ಕಮಲನಾಥ್​ ಕೂಡ ಟ್ವೀಟ್​ ಮಾಡಿದ್ದು, ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಅತ್ಯಾಚಾರ ಪ್ರಕರಣ ನಡೆಯುತ್ತಿದೆ. ಇಂಥ ಹೀನಾಯ ಘಟನೆಗಳು ಯಾವಾಗ ನಿಲ್ಲುತ್ತವೆ? ನಮ್ಮ ಸೋದರಿಯರು, ಹೆಣ್ಣುಮಕ್ಕಳು ಸುರಕ್ಷಿತವಾಗುವುದು ಯಾವಾಗ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.