ಬಾಲಕಿ ಮೇಲಿನ ಅತ್ಯಾಚಾರ ಆರೋಪ ಸಾಬೀತು 

ಬೆಳಗಾವಿ: ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣದ ವಿಚಾರಣೆ ನಡೆಸಿದ ಪೊಕ್ಸೊ ನ್ಯಾಯಾಲಯವು, ಈ ಪ್ರಕರಣದ ನಾಲ್ವರು ಆರೋಪಿಗಳು ದೋಷಿಯಾಗಿರುವುದು ಸಾಬೀತಾಗಿದೆ ಎಂದು ಹೇಳಿ, ತೀರ್ಪನ್ನು ಗುರುವಾರಕ್ಕೆ ಮುಂದೂಡಿದೆ.
ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ನಗರದ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಿಜಯ ಕುಬೇರ ಮುಟ್ಟುಕೋಳಿ, ಸುಜಾರ ಕುಬೇರ ಮುಟ್ಟುಕೊಳಿ, ವಿಲಾಸ ರಾಜಾರಾಮ ವಾಡಕರ, ಮೌಲಾ ಮಹಮ್ಮದ ಹುಸೇನ್ ಮನಿಯಾರ ಅಪರಾಧಿಗಳು ಎಂದು 3ನೇ ಅಧಿಕಾ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ(ಪೋಕ್ಸೋ ನ್ಯಾಯಾಲಯ)ನ್ಯಾಯಾಧೀಶ ಜಿ.ನಂಜುಂಡಯ್ಯ ಅಭಿಪ್ರಾಯಪಟ್ಟಿದ್ದಾರೆ.
ಪ್ರಕರಣದ ಹಿನ್ನೆಲೆ: 2016ರ ಮಾರ್ಚ್ 5ರಂದು 13ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ವಿಜಯ ಮುಟ್ಟುಕೊಳಿ, ಬಾಲಕಿ ಪ್ರತಿರೋಧ ವ್ಯಕ್ತ ಪಡಿಸಿದಾಗ ಆಕೆಯ ಕತ್ತು ಹಿಚುಕಿ ಕೊಲೆ ಮಾಡಿದ್ದ. ಕೊಲೆ ಮಾಡಿದ ಬಳಿಕ ಒಂದು ದಿನ ಮನೆಯಲ್ಲಿಟ್ಟುಕೊಂಡಿದ್ದ. ಕೊಲೆ ಪ್ರಕರಣದ ಪುರಾವೆ ನಾಶಪಡಿಸುವುದಕ್ಕಾಗಿ ಅಪರಾಧಿಯ ಪತ್ನಿ ಸುಜಾತ ವಿಜಯ ಮುಟ್ಟುಕೊಳಿ ಶವದ ಮುಖವನ್ನು  ಕುದಿಯುವ ಬಿಸಿನೀರು ಸುರಿದು ಸುಟ್ಟು ಹಾಕಿದ್ದಳು.
ಈ ಶವವನ್ನು ವಿಜಯ ಮತ್ತು ಈತನ ಸಹಚರರಾದ ವಿಲಾಸ ವಾಡಕರ ಹಾಗೂ ಮೌಲಾ ಮಹಮ್ಮದ ಹುಸೇನಮನಿಯಾರ ಇವರ ಸಹಾಯದಿಂದ ರೈಲ್ವೆ ಫ್ಲಾಟ್ ಫಾರಂ ನಂ. 1ರಲ್ಲಿ ಇಟ್ಟು ಪರಾರಿಯಾಗಿದ್ದರು.
ಈ ಪ್ರಕರಣದ ತನಿಖೆ ನಡೆಸಿದ ರೈಲ್ವೆ ಪೊಲೀಸರು, ನಾಲ್ವರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಗುರುವಾರ ಪ್ರಕಟಿಸಲಿದೆ. ಕಕ್ಷಿದಾರರ ಪರವಾಗಿ  ಸರ್ಕಾರಿ ವಿಶೇಷ ಅಭಿಯೋಜಕ ಎಲ್.ವಿ.ಪಾಟೀಲ ಅವರು ವಕಾಲತ್ತು ವಹಿಸಿ, ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *