ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ: ಇಡೀ ರಾತ್ರಿ ಅರಣ್ಯದಲ್ಲೇ ಅಳುತ್ತಾ ಕಾಲ ಕಳೆದ ಕಂದಮ್ಮ, ಗ್ರಾಮಸ್ಥರಿಂದ ರಕ್ಷಣೆ

ಬೆಳಗಾವಿ: ಉತ್ತರಾಖಂಡದ 132 ಗ್ರಾಮಗಳಲ್ಲಿ ಮೂರು ತಿಂಗಳಿನಿಂದ ಒಂದೇ ಒಂದು ಹೆಣ್ಣು ಮಗು ಜನಿಸದ ಅಂಕಿ-ಅಂಶಗಳನ್ನು ಕಂಡು ಅಧಿಕಾರಿಗಳು ಬೆಚ್ಚಿಬಿದ್ದಿದ್ದರು. ಈ ಆತಂಕಕಾರಿ ಬೆಳವಣಿಗೆ ಬಗ್ಗೆ ವರದಿಯಾದ ಬೆನ್ನಲ್ಲೇ ಇದು ಭ್ರೂಣ ಹತ್ಯೆಯ ಪರಿಣಾಮ ಎಂದು ಧ್ವನಿ ಎತ್ತಿದ್ದರು. ಹೆಣ್ಣು ಮಕ್ಕಳ ಬಗ್ಗೆ ಕಳಕಳಿ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಬೆಳಗಾವಿಯಲ್ಲಿಯೂ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಖಾನಾಪುರ ತಾಲೂಕಿನ ಲೋಂಡಾ ತಿನೈಘಾಟ ರೈಲು ನಿಲ್ದಾಣದ ನಡುವಿನ ದಟ್ಟ ಅರಣ್ಯ ಪ್ರದೇಶದ ನಡುವೆ ಹೆಣ್ಣು ಮಗುವೊಂದು ಪತ್ತೆಯಾಗಿದ್ದು, ಇಡೀ ರಾತ್ರಿ ಆ ಮಗು ಕಾಡಿನಲ್ಲೇ ಕಾಲ ಕಳೆದಿದೆ. ಕಾಡು ಪ್ರಾಣಿಗಳು ಓಡಾಡುವಂತಹ ಪ್ರದೇಶದಲ್ಲಿ ಮಗು ರಾತ್ರಿ ಕಳೆದಿರುವುದು ಶೋಚನೀಯ ಸಂಗತಿಯಾಗಿದೆ.

ರೈತನೊಬ್ಬ ನೀಡಿದ ಮಾಹಿತಿ ಆಧರಿಸಿ ಅಕರಾಳಿ ಗ್ರಾಮಸ್ಥರಿಂದ ಮಗುವಿನ ರಕ್ಷಣೆ ಆಗಿದೆ. ಮಾಜಿ ಜಿಪಂ ಸದಸ್ಯ ಬಾಬುರಾವ್ ದೇಸಾಯಿ ನೇತೃತ್ವದಲ್ಲಿ ರೈಲ್ವೆ ಪೊಲೀಸರ ಸಹಾಯದಿಂದ ಮಗುವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಪತ್ತೆಯಾಗಿರುವ ಹೆಣ್ಣು ಮಗು ಚಲಿಸುವ ರೈಲಿನಿಂದ ಬಿದ್ದಿದೆಯೋ ಅಥವಾ ಹೆಣ್ಣು ಮಗು ಎಂಬ ಕಾರಣಕ್ಕೆ ಬಿಟ್ಟುಹೋಗಿದ್ದಾರೋ ಎಂಬ ಅನುಮಾನ ಪೊಲೀಸರಿಗೆ ಕಾಡುತ್ತಿದೆ. ಲೋಕದ ಅರಿವೆ ಇಲ್ಲದ ಕಂದಮ್ಮ ಕಾಡಿನ ನಡುವೆ ಅಳುತ್ತಾ ಇಡೀ ರಾತ್ರಿ ಕಳೆದಿರುವುದು ಕರುಣಾಜನಕವಾಗಿದ್ದು, ಈ ಅಮಾನವೀಯ ಘಟನೆಗೆ ಭಾರಿ ಖಂಡನೆ ವ್ಯಕ್ತವಾಗಿದೆ. (ದಿಗ್ವಿಜಯ ನ್ಯೂಸ್​)

3 ತಿಂಗಳಿಂದ 132 ಗ್ರಾಮಗಳಲ್ಲಿ ಒಂದೇ ಒಂದು ಹೆಣ್ಣು ಮಗು ಜನಿಸಿಲ್ಲ: ಈ ಬೆಳವಣಿಗೆ ಹಿಂದಿದೆಯಾ ಹೇಯ ಕೃತ್ಯ?

Leave a Reply

Your email address will not be published. Required fields are marked *