ಮತದಾನ ಬಹಿಷ್ಕರಿಸಲು ಗಿರಿಯಾಪುರ ಗ್ರಾಮಸ್ಥರ ನಿರ್ಧಾರ

ಕಡೂರು: ಅಜ್ಜಂಪುರ ತಾಲೂಕು ಕೇಂದ್ರಕ್ಕೆ ತಮ್ಮ ಗ್ರಾಮವನ್ನು ಸೇರಿಸುವುದನ್ನು ವಿರೋಧಿಸಿ ಗಿರಿಯಾಪುರ ಗ್ರಾಮಸ್ಥರು ಲೋಕಸಭೆ ಚುನಾವಣೆ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.

ಗ್ರಾಮ ಸಮಿತಿ ಅಧ್ಯಕ್ಷ ಜಿ.ಸಿ.ಬಸವರಾಜು ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ಗ್ರಾಮಸ್ಥರು, ಸಮಸ್ಯೆ ಇತ್ಯರ್ಥವಾಗುವವರೆಗೆ ಹೋರಾಟ ನಡೆಸುತ್ತೇವೆ. ಮತದಾನ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದ್ದಾರೆ.

ಸಮಿತಿ ಅಧ್ಯಕ್ಷ ಜಿ.ಸಿ.ಬಸವರಾಜು ಮಾತನಾಡಿ, ಅಜ್ಜಂಪುರ ತಾಲೂಕು ಕೇಂದ್ರ ರಚನೆಯಾದಾಗ ಹಿರೇನಲ್ಲೂರು ನಾಡಕಚೇರಿ ವ್ಯಾಪ್ತಿಗೆ ಸೇರಿದ ಗಿರಿಯಾಪುರವನ್ನು ಅಜ್ಜಂಪುರ ತಾಲೂಕಿಗೆ ಸೇರಿಸಿದ್ದರಿಂದ ಕಚೇರಿ ಕೆಲಸಗಳಿಗೆ 10 ಕಿಮೀ ಹೋಗುವಂತಾಗಿದೆ ಎಂದರು.

ಗಿರಿಯಾಪುರದ ಜನರ ಶೇ.70 ಕೃಷಿ ಭೂಮಿ ಹಿರೇನಲ್ಲೂರು, ಕೇದಿಗೆರೆ, ಎಂ.ಚೋಮನಹಳ್ಳಿ, ಮೇಲನಹಲ್ಳಿ, ಆಡೀಗೆರೆ ಬಾಸೂರು, ಅರೇಹಳ್ಳಿ ಗ್ರಾಮಗಳಲ್ಲಿದೆ. ಜಮೀನು ಕಡೂರು ತಾಲೂಕಿಗೆ ಸೇರಿದರೆ ಕಚೇರಿ ಕೆಲಸಕ್ಕಷ್ಟೇ ಅಜ್ಜಂಪುರಕ್ಕೆ ಹೋಗುವಂತಾಗಿದೆ. ಈ ಬದಲಾವಣೆಯಿಂದ ಗ್ರಾಮದ 876 ಮತದಾರರು ಸೇರಿ ಒಟ್ಟು 1,200 ಜನರ ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮತ್ತಿತರೆ ಉಪಯುಕ್ತ ದಾಖಲೆಗಳನ್ನು ಬದಲಿಸಿಕೊಳ್ಳುವ ಅನಿವಾರ್ಯ ಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಶು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ತೋಟಗಾರಿಕೆ, ಕಂದಾಯ, ಕೃಷಿ, ವಿದ್ಯುತ್ ಇಲಾಖೆ, ಬ್ಯಾಂಕ್ ಹೀಗೆ ಪ್ರತಿಯೊಂದು ಸೌಲಭ್ಯಕ್ಕೂ ಅಜ್ಜಂಪುರ ತಾಲೂಕು ಕೇಂದ್ರಕ್ಕೆ ಹೋಗುವ ಸ್ಥಿತಿ ಉದ್ಭವವಾಗಿದೆ. ಕಂದಾಯ ಇಲಾಖೆಗೆ ಸೇರಿದ ಬಹಳಷ್ಟು ವ್ಯಾಜ್ಯಗಳು ಈಗಲೂ ಕಡೂರು ನ್ಯಾಯಾಲಯದಲ್ಲಿದೆ ಎಂದು ಹೇಳಿದರು.

ಅವಳಿ ಗ್ರಾಮಗಳು: ಗಿರಿಯಾಪುರ ಮತ್ತು ಹಿರೇನಲ್ಲೂರು ಕೇವಲ 1 ಕಿಮೀ ಅಂತರದಲ್ಲಿದ್ದು, ಅವಳಿ ಗ್ರಾಮಗಳಂತಿವೆ. ಪ್ರತಿಯೊಂದಕ್ಕೂ ಹಿರೇನಲ್ಲೂರಿನ ಜತೆ ಸಂಪರ್ಕ ಹೊಂದಿದ್ದ ಗಿರಿಯಾಪುರವನ್ನು ಏಕಾಏಕಿ ಅಜ್ಜಂಪುರ ತಾಲೂಕಿಗೆ ಸೇರಿಸಿ ಗೊಂದಲ ಸೃಷ್ಟಿಸಲಾಗಿದೆ ಎಂದು ಗ್ರಾಮಸ್ಥರು ದೂರಿದರು. ಈ ಬಗ್ಗೆ ಈ ಹಿಂದಿನ ಶಾಸಕರು, ಮುಖ್ಯಮಂತ್ರಿ, ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಆರೋಪಿಸಿದರು.

ಬೂತ್ ಸ್ಥಳಾಂತರಿಸಿದ್ದಕ್ಕೆ ಮತದಾನ ಬಹಿಷ್ಕಾರ: ಗ್ರಾಮದ ಶಾಲೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಯನ್ನು ಬೇರೆಡೆಗೆ ಸ್ಥಳಾಂತರಿಸಿರುವುದನ್ನು ವಿರೋಧಿಸಿ ಕೆಂಜಿಗೆ ಗ್ರಾಮಸ್ಥರು ಈ ಬಾರಿ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

50 ವರ್ಷಗಳಿಂದ ಕೆಂಜಿಗೆಯಲ್ಲಿ ಸ್ಥಾಪಿಸುತ್ತಿದ್ದ ಮತಗಟ್ಟೆಯನ್ನು ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಬಾಳೆಹಳ್ಳಿಗೆ ಸ್ಥಳಾಂತರಿಸಲಾಗಿತ್ತು. ಆಗ ವಿರೋಧ ವ್ಯಕ್ತವಾದರೂ ಕೆಂಜಿಗೆ ಗ್ರಾಮಸ್ಥರು ಬಾಳೇಹಳ್ಳಿ ಬೂತ್​ಗೆ ತೆರಳಿ ಮತದಾನ ಮಾಡಿದ್ದರು. ಮುಂದಿನ ಚುನಾವಣೆಗೆ ಕೆಂಜಿಗೆ ಗ್ರಾಮದಲ್ಲೇ ಮರುಸ್ಥಾಪಿಸುವಂತೆ ಆಗ್ರಹಿಸಿದ್ದರು. ಆದರೆ ಈ ಬಾರಿ ಮತ್ತೆ ಬಾಳೆಹಳ್ಳಿಯಲ್ಲಿ ಮತಗಟ್ಟೆ ಸ್ಥಾಪಿಸಿರುವುದರಿಂದ ಕೆಂಜಿಗೆ ಗ್ರಾಮಸ್ಥರು ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.